
ಇರಾನ್‌ಗೆ ಇದುವೇ ಕೊನೆಯ ಅವಕಾಶ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಮುಂದಿನ ಒಂದೆರಡು ದಿನಗಳಲ್ಲಿ ಇರಾನ್‌ನೊಂದಿಗೆ ಮಹತ್ವದ ಮಾತುಕತೆಗಳು ಆರಂಭವಾಗಲಿವೆ. ಈ ಮಾತುಕತೆಗಳು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹೊಸ ತಿರುವು ಪಡೆದಿದ್ದು, ಇರಾನ್‌ನೊಂದಿಗೆ ನಡೆಯಲಿರುವ ಮಾತುಕತೆಗಳೇ ಆ ದೇಶಕ್ಕೆ ಒದಗಿರುವ ಕೊನೆಯ ಅವಕಾಶ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮಾತುಕತೆ ವಿಫಲವಾದರೆ ಇರಾನ್‌ನ ಮೇಲೆ ಮತ್ತಷ್ಟು ಭೀಕರವಾದ ಅಮೆರಿಕದ ವಾಯುದಾಳಿಗಳು ನಡೆಯುವುದು ಖಚಿತ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಮುಂದಿನ ಒಂದೆರಡು ದಿನಗಳಲ್ಲಿ ಇರಾನ್‌ನೊಂದಿಗೆ ಮಹತ್ವದ ಮಾತುಕತೆಗಳು ಆರಂಭವಾಗಲಿವೆ. ಈ ಮಾತುಕತೆಗಳು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಮತ್ತು ಎರಡನೇ ಹಂತದಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮಗಳ ಕುರಿತಾದ ಅಮೆರಿಕದ ಕಳವಳಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮೊದಲ ಹಂತವು ಜಲಸಂಧಿಯನ್ನು ತೆರೆಯುವುದಾಗಿದೆ, ಎರಡನೆಯದು ಪರಮಾಣು ನಿಶ್ಯಸ್ತ್ರೀಕರಣ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಸೈನ್ಯದ ಶಕ್ತಿ ಹಾಗೂ ಇರಾನ್‌ನ ತಂತ್ರಗಾರಿಕೆ
ಈಗಾಗಲೇ ಅಮೆರಿಕದ ಮಿಲಿಟರಿ ಇರಾನ್‌ನ ನಾಯಕತ್ವದ ಹಲವು ಸ್ತರಗಳನ್ನು ನಾಶಪಡಿಸಿದೆ ಮತ್ತು ಅವರ ವಾಯುಪಡೆ ಹಾಗೂ ನೌಕಾಪಡೆಯನ್ನು ಅಸ್ತವ್ಯಸ್ತಗೊಳಿಸಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಆದರೂ, ಇರಾನ್ ತನ್ನದೇ ಆದ ತಂತ್ರಗಳನ್ನು ಹೆಣೆಯುತ್ತಿದೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗಳ ದೃಷ್ಟಿಯಿಂದ, ಯುದ್ಧದ ಹೊರೆ ಅಮೆರಿಕದ ಮತದಾರರಿಗೆ ಇಷ್ಟವಿಲ್ಲ ಎಂಬುದು ಇರಾನ್‌ಗೆ ತಿಳಿದಿದೆ. ಅಲ್ಲದೆ, ಅಮೆರಿಕದ ಬಳಿ ಇರುವ ಮದ್ದುಗುಂಡುಗಳ ದಾಸ್ತಾನು ಕಡಿಮೆಯಾಗುತ್ತಿರುವುದನ್ನು ಗಮನಿಸಿರುವ ಇರಾನ್, ಯುದ್ಧವನ್ನು ಎಳೆದಾಡುವ ಮೂಲಕ ಟ್ರಂಪ್ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎನ್ನಲಾಗಿದೆ.
ದೊಡ್ಡ ದಾಳಿಯಿಂದ ಹಿಂದೆ ಸರಿದ ಟ್ರಂಪ್
ಭಾನುವಾರ ಇರಾನ್ ಮೇಲೆ ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ದಾಳಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ. ಆದರೆ, ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ನಾಯಕರ ಮನವಿಯ ಮೇರೆಗೆ ಮತ್ತು ಇರಾನ್‌ನ ಕೆಲವು ಅನಾಮಧೇಯ ಅಧಿಕಾರಿಗಳ ಕೋರಿಕೆಯ ಮೇರೆಗೆ ಈ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರಾಜತಾಂತ್ರಿಕ ಮಾತುಕತೆಗೆ ಒತ್ತು ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಇರಾನ್‌ನ ನಡೆಯ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಇರಾನ್ ಅನ್ನು ನಂಬಲಾಗದಷ್ಟು ದ್ವಂದ್ವಯುಕ್ತ ಎಂದು ಕಿಡಿಕಾರಿದ್ದಾರೆ. ಇರಾನ್ ಅಧಿಕಾರಿಗಳು ಓಮನ್‌ನೊಂದಿಗೆ ನಡೆಯುತ್ತಿರುವ ಸಭೆಗಳು ಕೇವಲ ಹೋರ್ಮುಜ್ ಜಲಸಂಧಿಯ ಸುರಕ್ಷಿತ ಸಂಚಾರಕ್ಕಾಗಿ ಮಾತ್ರ ಎಂದು ಹೇಳಿಕೊಂಡಿರುವುದು ಟ್ರಂಪ್ ಆಕ್ರೋಶಕ್ಕೆ ಕಾರಣವಾಗಿದೆ. "ಅವರು ಮಾತುಕತೆಗಾಗಿ ಬೇಡಿಕೊಳ್ಳುತ್ತಾರೆ, ಆದರೆ ಹೊರಗಡೆ ನಾವು ಯಾವುದೇ ಮಾತುಕತೆ ನಡೆಸುತ್ತಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅಮೆರಿಕದೊಂದಿಗೆ ಮಾತನಾಡುತ್ತಿಲ್ಲ, ಕೇವಲ ಓಮನ್‌ನೊಂದಿಗೆ ವ್ಯವಹರಿಸುತ್ತಿದ್ದೇವೆ ಎನ್ನುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.

