
ಅಮೆರಿಕ ಹಾಗೂ ಭಾರತ ನಡುವಿನ ಇಂಡೋ-ಪೆಸಿಫಿಕ್ ವಲಯದಲ್ಲಿ ನಡೆದಿದ್ದ ಸಮರಾಭ್ಯಾಸ (ಸಾಂದರ್ಭಿಕ ಚಿತ್ರ)
ಯುಎಸ್ 'ಪೆಸಿಫಿಕ್ ಕಮಾಂಡ್' ಮರುನಾಮಕರಣ: 'ಕ್ವಾಡ್'ಗೆ ಹಿನ್ನಡೆ?
ಅಮೆರಿಕದ ಈ ನಿರ್ಧಾರವು ಇಂಡೋ-ಪೆಸಿಫಿಕ್ ವಲಯಕ್ಕೆ ನೀಡಿದ್ದ ಬದ್ಧತೆಯನ್ನು ದುರ್ಬಲಗೊಳಿಸುತ್ತದೆಯೇ ಮತ್ತು ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಭಾರತಕ್ಕೆ ನೀಡಲಾಗಿದ್ದ ಪ್ರಾಮುಖ್ಯತೆಯನ್ನು ಕಡಿಮೆಯಾಗುತ್ತಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಯುನೈಟೆಡ್ ಸ್ಟೇಟ್ಸ್ ತನ್ನ ಅತ್ಯಂತ ದೊಡ್ಡ ಏಕೀಕೃತ ಮಿಲಿಟರಿ ಕಮಾಂಡ್ ಆದ 'ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್' ಹೆಸರನ್ನು ಮತ್ತೆ ಹಳೆಯ 'ಯುಎಸ್ ಪೆಸಿಫಿಕ್ ಕಮಾಂಡ್' ಆಗಿ ಬದಲಾಯಿಸಿದೆ. 2018 ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ಮಾಡಲಾಗಿದ್ದ ಈ ಕಾರ್ಯತಂತ್ರದ ಮರುಬ್ರಾಂಡಿಂಗ್ ಅನ್ನು ಈಗ ರದ್ದುಗೊಳಿಸಲಾಗಿದ್ದು, ಈ ಕ್ರಮವು ಭಾರತೀಯ ರಾಜತಾಂತ್ರಿಕ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಅಮೆರಿಕದ ಈ ನಿರ್ಧಾರವು ಇಂಡೋ-ಪೆಸಿಫಿಕ್ ವಲಯಕ್ಕೆ ವಾಷಿಂಗ್ಟನ್ ನೀಡಿದ್ದ ಬದ್ಧತೆಯನ್ನು ದುರ್ಬಲಗೊಳಿಸುತ್ತದೆಯೇ ಮತ್ತು ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಭಾರತಕ್ಕೆ ನೀಡಲಾಗಿದ್ದ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
'ಕ್ವಾಡ್ ಶವಪೆಟ್ಟಿಗೆಗೆ ಮತ್ತೊಂದು ಮೊಳೆ': ಶಶಿ ತರೂರ್ ಕಳವಳ
ಅಮೆರಿಕದ ಈ ಹೆಜ್ಜೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಪ್ರಶ್ನಿಸಿದ್ದಾರೆ. ಇದೊಂದು "ಕ್ವಾಡ್ ಒಕ್ಕೂಟದ ಶವಪೆಟ್ಟಿಗೆಗೆ ಹೊಡೆದ ಮತ್ತೊಂದು ಮೊಳೆ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಮಾಂಡ್ ಹೆಸರಿನಿಂದ 'ಇಂಡೋ' ಪದವನ್ನು ತೆಗೆದುಹಾಕುವುದರಿಂದ, ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ಬೆಳೆಯುತ್ತಿದ್ದ ಕಾರ್ಯತಂತ್ರದ ಸಾಂಕೇತಿಕ ಮನ್ನಣೆಯನ್ನು ಕಸಿದುಕೊಂಡಂತಾಗುತ್ತದೆ ಎಂದು ತರೂರ್ ವಾದಿಸಿದ್ದಾರೆ.
'ಇತಿಹಾಸದ ಪರಂಪರೆಗೆ ಗೌರವ': ಅಮೆರಿಕ ಸಮರ್ಥನೆ
ಮರುನಾಮಕರಣದ ಕುರಿತು ಸ್ಪಷ್ಟನೆ ನೀಡಿರುವ ಯುಎಸ್ ಯುದ್ಧ ಇಲಾಖೆ, ಈ ಬದಲಾವಣೆಯು ಕಮಾಂಡ್‌ನ ಐತಿಹಾಸಿಕ ಪರಂಪರೆಯನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ. 1947 ರಲ್ಲಿ ಆಗಿನ ಯುಎಸ್ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರಿಂದ ಸ್ಥಾಪಿಸಲ್ಪಟ್ಟ ಈ ಕಮಾಂಡ್, ಏಳು ದಶಕಗಳಿಗೂ ಹೆಚ್ಚು ಕಾಲ 'USPACOM' ಹೆಸರಿನಲ್ಲೇ ಕಾರ್ಯನಿರ್ವಹಿಸಿತ್ತು. ಎರಡನೇ ಮಹಾಯುದ್ಧದ ನಂತರ ಏಷ್ಯಾದಲ್ಲಿ ಭದ್ರತಾ ವ್ಯವಸ್ಥೆ ರೂಪಿಸುವುದು, ಕೊರಿಯನ್ ಮತ್ತು ವಿಯೆಟ್ನಾಂ ಯುದ್ಧಗಳ ನಿರ್ವಹಣೆ ಹಾಗೂ ಮಾನವೀಯ ನೆರವು ನೀಡಿದ ದೀರ್ಘ ಇತಿಹಾಸವನ್ನು ಈ ಹೆಸರು ನೆನಪಿಸುತ್ತದೆ ಎಂದು ಯುಎಸ್ ತಿಳಿಸಿದೆ.
ಕಾರ್ಯಾಚರಣೆಯ ವ್ಯಾಪ್ತಿ ಬದಲಾಗಿಲ್ಲ
ಹೆಸರು ಬದಲಾಗಿದ್ದರೂ ಕಮಾಂಡ್‌ನ ಜವಾಬ್ದಾರಿ ಅಥವಾ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಯುಎಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹವಾಯಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಕಮಾಂಡ್, ಅಮೆರಿಕದ ಪಶ್ಚಿಮ ಕರಾವಳಿಯಿಂದ ಹಿಡಿದು ಭಾರತದ ಪಶ್ಚಿಮ ಗಡಿಯವರೆಗಿನ ವಿಶಾಲ ಪ್ರದೇಶದ ಭದ್ರತಾ ಉಸ್ತುವಾರಿಯನ್ನು ಮುಂದುವರೆಸಲಿದೆ.
ಕಾರ್ಯಾಚರಣೆಯ ಭೌಗೋಳಿಕ ವ್ಯಾಪ್ತಿ ಬದಲಾಗದಿದ್ದರೂ, ಜಾಗತಿಕ ರಾಜತಾಂತ್ರಿಕತೆಯಲ್ಲಿ 'ಇಂಡೋ' ಪದವನ್ನು ಕೈಬಿಟ್ಟಿರುವುದು ಸಾಂಕೇತಿಕವಾಗಿ ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನವೇ ಎಂಬ ಚರ್ಚೆ ಮಾತ್ರ ಜಾಗತಿಕ ರಕ್ಷಣಾ ವಲಯದಲ್ಲಿ ಜೋರಾಗಿದೆ.

