
ಅಮೆರಿಕದಿಂದ ಗಡಿಪಾರಾದ 112 ಭಾರತೀಯರ 3ನೇ ತಂಡ ಭಾರತಕ್ಕೆ ವಾಪಸ್
ಅಮೆರಿಕಾ ವಾಯುಪಡೆಯ C-17 ಗ್ಲೋಬ್ಮಾಸ್ಟರ್ ವಿಮಾನವು ರಾತ್ರಿ 10 ಗಂಟೆಗೆ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಕಳೆದ 10 ದಿನಗಳಲ್ಲಿ ಅಕ್ರಮ ವಲಸಿಗರನ್ನು ಕರೆದುಕೊಂಡು ಬಂದ ಮೂರನೇ ವಿಮಾನ ಇದಾಗಿದೆ. ಒಟ್ಟು 332 ಅಕ್ರಮ ವಲಸಿಗರು ಭಾರತಕ್ಕೆ ಬಂದಿದ್ದಾರೆ.
ಅಮೆರಿಕಾದ ನಾನಾ ಗಡಿ ಪ್ರದೇಶಗಳ ಮೂಲಕ ನುಸುಳಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ 112 ಭಾರತೀಯರನ್ನು ಗಡಿಪಾಡು ಮಾಡಲಾಗಿದ್ದು, ಅವರನ್ನು ಕರೆತಂದ ಮೂರನೇ ವಿಮಾನ ಭಾನುವಾರ ರಾತ್ರಿ ಪಂಜಾಬ್ನ ಅಮೃತಸರದಲ್ಲಿ ಇಳಿದಿದೆ.
ಅಮೆರಿಕಾ ವಾಯುಪಡೆಯ C-17 ಗ್ಲೋಬ್ಮಾಸ್ಟರ್ ವಿಮಾನವು ರಾತ್ರಿ 10 ಗಂಟೆಗೆ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಕಳೆದ 10 ದಿನಗಳಲ್ಲಿ ಅಕ್ರಮ ವಲಸಿಗರನ್ನು ಕರೆದುಕೊಂಡು ಬಂದ ಮೂರನೇ ವಿಮಾನ ಇದಾಗಿದೆ. ಒಟ್ಟು 332 ಅಕ್ರಮ ವಲಸಿಗರು ಭಾರತಕ್ಕೆ ಬಂದಿದ್ದಾರೆ.
ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಕಾನೂನುಬಾಹಿರ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು ಭಾರತೀಯರು ಸೇರಿದಂತೆ ಎಲ್ಲ ದೇಶದ ಅಕ್ರಮವಾಸಿಗಳನ್ನು ಗಡಿಪಾರು ಮಾಡಲಾಗುತ್ತಿದೆ.
ಎಲ್ಲಿನವರು ಇದ್ದಾರೆ?
ಮೂರನೇ ತಂಡದಲ್ಲಿ ಗಡಿಪಾರು ಮಾಡಲಾದ 112 ಭಾರತೀಯರಲ್ಲಿ, 44 ಜನ ಹರಿಯಾಣದಿಂದ, 33 ಜನ ಗುಜರಾತ್, 31 ಜನ ಪಂಜಾಬ್, 2 ಜನ ಉತ್ತರ ಪ್ರದೇಶ ಹಾಗೂ ತಲಾ ಒಬ್ಬರು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದವರಿದ್ದಾರೆ.
ಈ ಅಕ್ರಮ ವಲಸಿಗರ ಕೆಲವು ಕುಟುಂಬದ ಸದಸ್ಯರು ಅಮೃತಸರದ ಶ್ರೀ ಗುರು ರಾಮದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ತಮ್ಮ ಸಂಬಂಧಿಗಳನ್ನು ಕರೆದುಕೊಂಡು ಹೋಗಲು ಕಾಯುತ್ತಿದ್ದರು.
ಇಮಿಗ್ರೇಷನ್, ಪರಿಶೀಲನೆ ಮತ್ತು ಹಿಂದಿನ ದಾಖಲೆಗಳ ಪರಿಶೀಲನೆ ಮುಗಿದ ಬಳಿಕ, ಗಡಿಪಾರು ಮಾಡಲಾದ ವ್ಯಕ್ತಿಗಳನ್ನು ತಮ್ಮ ತಮ್ಮ ಊರಿಗೆ ತೆರಳಲು ಕಳುಹಿಸಲಾಗುತ್ತದೆ.
ಎರಡನೇ ವಿಮಾಣದಲ್ಲಿದ್ದರು 116 ಭಾರತೀಯರು
ಶನಿವಾರ ತಡರಾತ್ರಿ, ಅಮೆರಿಕಾ ಸೇನಾ ವಿಮಾನ 116 ಭಾರತೀಯ ವಲಸಿಗರನ್ನು ಹೊತ್ತುಕೊಂಡು ಅಮೃತಸರದ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಅವರೆಲ್ಲರೂ ತಮ್ಮ ಮೇಲೆ ಅಮೆರಿಕ ಅಧಿಕಾರಿಗಳು ದೌರ್ಜನ್ಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು.
ಆ ತಂಡದಲ್ಲಿದ್ದ 116 ಭಾರತೀಯರಲ್ಲಿ 65 ಜನ ಪಂಜಾಬ್, 33 ಜನ ಹರಿಯಾಣ, 8 ಜನ ಗುಜರಾತ್, ತಲಾ ಇಬ್ಬರು ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ತಲಾ ಒಬ್ಬರು ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದವರಾಗಿದ್ದರು.
ಬೇಡಿ ಹಾಕಿ ಕರೆದುಕೊಂಡು ಬಂದಿದ್ದರು
"ನಮ್ಮ ಕಾಲುಗಳಿಗೆ ಬೇಡಿಗಳನ್ನು ಹಾಕಲಾಗಿತ್ತು ಮತ್ತು ಕೈಗಳನ್ನು ಕಟ್ಟಲಾಗಿತ್ತು. ಆ ವಿಮಾನದಲ್ಲಿ 3 ಮಹಿಳೆಯರು ಮತ್ತು 3 ಮಕ್ಕಳು ಇದ್ದರು. ಅವರಿಗೆ ವಿನಾಯಿತಿ ನೀಡಲಾಗಿತ್ತು. ಅಮೃತಸರ ವಿಮಾನ ನಿಲ್ದಾಣಕ್ಕೆ ತಲುಪುವ ಮುನ್ನ ಬೇಡಿಗಳನ್ನು ತೆಗೆದುಹಾಕಲಾಯಿತು," ಎಂದು ವ್ಯಕ್ತಿಯೊಬ್ಬರು ವಿವರಿಸಿದ್ದರು.
ಎರಡನೇ ತಂಡದಲ್ಲಿ ಬಂದ, ಪಂಜಾಬ್ನ ಪಟಿಯಾಲಾ ಜಿಲ್ಲೆಯ ರಾಜಪುರದ ಇಬ್ಬರನ್ನು ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣಲೇ ಬಂಧಿಸಲಾಗಿದೆ. ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ ಮತ್ತು ಪ್ರದೀಪ್ ಸಿಂಗ್ ಬಂಧಿತರು. ಇವರ ಮೇಲೆ 2023ರಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಬಳಿಕ ಅವರು ಪರಾರಿಯಾಗಿದ್ದರು.
ಫೆಬ್ರವರಿ 5ರಂದು, ಅಮೆರಿಕಾದಿಂದ 104 ಭಾರತೀಯರನ್ನು ಗಡಿಪಾರು ಮಾಡಲಾಗಿತ್ತು. ಅವರಲ್ಲಿ 13 ಮಕ್ಕಳು ಸೇರಿದ್ದರು. ಈ ವೇಳೆ ಅಮೃತಸರ ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ, ಜಸ್ಪಾಲ್ ಸಿಂಗ್ ಎಂಬುವರು ಮಾತನಾಡಿ, "ನಾವು ಮೊದಲು ಇನ್ನೊಂದು ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಭಾವಿಸಿದ್ದೆವು. ನಂತರ ಪೊಲೀಸ್ ಅಧಿಕಾರಿಯೊಬ್ಬರು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಮಾಹಿತಿ ಕೊಟ್ಟರು, " ಎಂದು ಹೇಳಿದ್ದರು.
332 ಭಾರತೀಯರು ವಾಪಸ್
ಅಮೆರಿಕದಿಂದ ಇದುವರೆಗೆ ಒಟ್ಟು 332 ಭಾರತೀಯರನ್ನು ಮೂರು ವಿಮಾನಗಳ ಮೂಲಕ ಗಡಿಪಾರು ಮಾಡಿ ಕಳುಹಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅಮೃತಸರ ವಿಮಾನ ನಿಲ್ದಾಣದಲ್ಲಿ ಯುಎಸ್ ವಿಮಾನಗಳನ್ನು ಇಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ "ನಮ್ಮ ಪವಿತ್ರ ನಗರವನ್ನು ಅಕ್ರಮ ವಲಸಿಗರ ಕೇಂದ್ರವನ್ನಾಗಿ ಮಾಡಬೇಡಿ" ಎಂದು ಅವರು ಕಿಡಿ ಕಾರಿದ್ದಾರೆ.