
ಯುದ್ಧ ಅಂತ್ಯ? ಇಂದಿನಿಂದ ಯುಎಇಯಲ್ಲಿ ಉಕ್ರೇನ್-ಅಮೆರಿಕ-ರಷ್ಯಾ ತ್ರಿಪಕ್ಷೀಯ ಮಾತುಕತೆ: ಝೆಲೆನ್ಸ್ಕಿ ಘೋಷಣೆ
ಈ ಘೋಷಣೆಗೂ ಮುನ್ನ ಝೆಲೆನ್ಸ್ಕಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ದೀರ್ಘಕಾಲದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಉಕ್ರೇನ್, ಅಮೆರಿಕ ಮತ್ತು ರಷ್ಯಾ ದೇಶಗಳ ನಡುವೆ ತ್ರಿಪಕ್ಷೀಯ (Trilateral) ಮಾತುಕತೆ ಇಂದಿನಿಂದ (ಜ. 23) ಸಂಯುಕ್ತ ಅರಬ್ ಒಕ್ಕೂಟದಲ್ಲಿ (ಯುಎಇ) ನಡೆಯಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ.
ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲ್ಯುಇಎಫ್) ಮಾತನಾಡಿದ ನಂತರ ನಡೆದ ಸಂವಾದದಲ್ಲಿ ಝೆಲೆನ್ಸ್ಕಿ ಈ ವಿಷಯವನ್ನು ದೃಢಪಡಿಸಿದರು. ಜನವರಿ 23 ಮತ್ತು 24 ರಂದು ಯುಎಇಯಲ್ಲಿ ತಾಂತ್ರಿಕ ಮಟ್ಟದ ಸಭೆ ನಡೆಯಲಿದ್ದು, ಇದು ಯುದ್ಧವನ್ನು ಕೊನೆಗೊಳಿಸುವ ಹಾದಿಯನ್ನು ಸುಗಮಗೊಳಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಮೊದಲ ತ್ರಿಪಕ್ಷೀಯ ಮಾತುಕತೆ
ಈ ಕುರಿತು ಮಾಹಿತಿ ನೀಡಿರುವ ಝೆಲೆನ್ಸ್ಕಿ, "ಇದು ಉಕ್ರೇನ್, ರಷ್ಯಾ ಮತ್ತು ಅಮೆರಿಕ ನಡುವಿನ ಮೊದಲ ತ್ರಿಪಕ್ಷೀಯ ಮಾತುಕತೆಯಾಗಿದೆ. ಯಾವುದೇ ಸಂವಾದವಿಲ್ಲದಿರುವುದಕ್ಕಿಂತ ಮಾತುಕತೆ ನಡೆಯುವುದು ಉತ್ತಮ. ನಾಳೆ ಮತ್ತು ನಾಡಿದ್ದು (ಜ. 23-24) ನಮ್ಮ ತಂಡಗಳು ಸಭೆ ನಡೆಸಲಿವೆ," ಎಂದು ಹೇಳಿದ್ದಾರೆ.
ಟ್ರಂಪ್ ಭೇಟಿ ನಂತರದ ಮಹತ್ವದ ನಡೆ
ಈ ಘೋಷಣೆಗೂ ಮುನ್ನ ಝೆಲೆನ್ಸ್ಕಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಈ ಭೇಟಿಯನ್ನು ಟ್ರಂಪ್ 'ಉತ್ತಮ' ಎಂದು ಬಣ್ಣಿಸಿದ್ದಾರೆ.
ಮಾತುಕತೆಯ ಸ್ವರೂಪದ ಬಗ್ಗೆ ವಿವರಿಸಿದ ಝೆಲೆನ್ಸ್ಕಿ, "ನಮ್ಮ ತಂಡದ ಸದಸ್ಯರು ಇಂದು ಅಮೆರಿಕದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಇದಾದ ಬಳಿಕ ಅಮೆರಿಕದ ನಿಯೋಗವು ರಷ್ಯಾ ತಂಡದೊಂದಿಗೆ ಮಾತುಕತೆ ನಡೆಸಲಿದೆ. ರಷ್ಯಾ ಕೂಡ ರಾಜಿ ಮಾಡಿಕೊಳ್ಳಲು (Compromises) ಸಿದ್ಧರಿರಬೇಕು. ಕೇವಲ ಉಕ್ರೇನ್ ಮಾತ್ರವಲ್ಲ, ಪ್ರತಿಯೊಬ್ಬರೂ ಶಾಂತಿಗಾಗಿ ಸಿದ್ಧರಿರಬೇಕು," ಎಂದು ಹೇಳಿದ್ದಾರೆ. ಆದರೆ, ಈ ಮಾತುಕತೆಗಳು ನೇರ ಸಂವಾದವೇ ಅಥವಾ ಮಧ್ಯವರ್ತಿಗಳ ಮೂಲಕ ನಡೆಯುವುದೇ ಎಂಬ ಬಗ್ಗೆ ಅವರು ಸ್ಪಷ್ಟನೆ ನೀಡಿಲ್ಲ.
ಯುರೋಪ್ ಭದ್ರತೆಯ ಬಗ್ಗೆ ಎಚ್ಚರಿಕೆ
ಇದೇ ವೇಳೆ, ಯುರೋಪ್ ತನ್ನ ಭದ್ರತೆಗಾಗಿ ಅಮೆರಿಕದ ಮೇಲೆ ಅತಿಯಾಗಿ ಅವಲಂಬಿತವಾಗಿದೆ ಎಂದು ಝೆಲೆನ್ಸ್ಕಿ ಎಚ್ಚರಿಸಿದ್ದಾರೆ. "ಯುರೋಪ್‌ಗೆ ತನ್ನದೇ ಆದ ಸಮರ್ಥ ಸೇನೆಯ ಅಗತ್ಯವಿದೆ. ಅಪಾಯ ಎದುರಾದಾಗ ನ್ಯಾಟೋ (NATO) ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯಲ್ಲೇ ಯುರೋಪ್ ಇದೆ. ಆದರೆ ಮೈತ್ರಿಕೂಟದ ನಿಜವಾದ ಕಾರ್ಯಕ್ಷಮತೆಯನ್ನು ಯಾರೂ ಇನ್ನೂ ನೋಡಿಲ್ಲ," ಎಂದು ಅವರು ಕಟುವಾಗಿ ನುಡಿದಿದ್ದಾರೆ.
"ಒಂದು ವೇಳೆ ಅಮೆರಿಕ ಸಹಾಯಕ್ಕೆ ಬರದಿದ್ದರೆ ಏನಾಗಬಹುದು ಎಂಬ ಪ್ರಶ್ನೆ ಪ್ರತಿಯೊಬ್ಬ ಯುರೋಪಿಯನ್ ನಾಯಕನ ಮನಸ್ಸಿನಲ್ಲಿದೆ," ಎಂದು ಅವರು ಹೇಳಿದ್ದಾರೆ.
ಗ್ರೀನ್‌ಲ್ಯಾಂಡ್‌ನಲ್ಲಿ ರಷ್ಯನ್ ಹಡಗುಗಳ ಬಗ್ಗೆ ಪ್ರಸ್ತಾಪ
ಇದೇ ವೇಳೆ, ಉಕ್ರೇನ್ ನ್ಯಾಟೋಗೆ ಹೇಗೆ ಸಹಾಯ ಮಾಡಬಲ್ಲದು ಎಂಬುದನ್ನು ವಿವರಿಸಿದ ಝೆಲೆನ್ಸ್ಕಿ, ಗ್ರೀನ್‌ಲ್ಯಾಂಡ್ ಬಳಿ ಸಂಚರಿಸುವ ರಷ್ಯಾದ ಯುದ್ಧನೌಕೆಗಳನ್ನು ಮುಳುಗಿಸಲು ಉಕ್ರೇನ್ ನೆರವಾಗಬಲ್ಲದು ಎಂದರು. "ನಮಗೆ ಕ್ರೈಮಿಯಾದಲ್ಲಿ ರಷ್ಯನ್ ಹಡಗುಗಳನ್ನು ಹೇಗೆ ಎದುರಿಸಬೇಕು ಎಂಬ ಅನುಭವವಿದೆ. ನಾವೇನಾದರೂ ನ್ಯಾಟೋದಲ್ಲಿದ್ದರೆ, ಗ್ರೀನ್‌ಲ್ಯಾಂಡ್ ಬಳಿ ಮುಕ್ತವಾಗಿ ಸಂಚರಿಸುವ ರಷ್ಯನ್ ನೌಕೆಗಳ ಸಮಸ್ಯೆಯನ್ನು ಬಗೆಹರಿಸುತ್ತಿದ್ದೆವು. ನಮ್ಮಲ್ಲಿ ಆ ಪರಿಣತಿ ಮತ್ತು ಅಸ್ತ್ರಗಳಿವೆ," ಎಂದು ಅವರು ಪ್ರತಿಪಾದಿಸಿದ್ದಾರೆ.

