
ಬ್ರಿಟನ್ ಅಧ್ಯಕ್ಷ ಕೀರ್ ಸ್ಟಾರ್ಮರ್, ಉಕ್ರೇನ್ ಅಧ್ಯಕ್ಷರಿಗೆ ಸ್ವಾಗತ ನೀಡಿದರು.
ನಿಮ್ಮೊಂದಿಗೆ ನಾವಿದ್ದೇವೆ: ಉಕ್ರೇನ್ ಅಧ್ಯಕ್ಷರಿಗೆ ಬ್ರಿಟನ್ ಅಭಯ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಶ್ವೇತಭವನದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಕತೆ ನಡೆಸುವ ವೇಳೆ ಅನಿರೀಕ್ಷಿತ ಘಟನೆ ನಡೆದಿತ್ತು. ಟ್ರಂಪ್, ಉಪಾಧ್ಯಕ್ಷ ಜೆ. ಡಿ ವ್ಯಾನ್ಸ್ ಸೇರಿಕೊಂಡು ಜೆಲೆನ್ಸ್ಕಿ ವಿರುದ್ಧ ಯುದ್ಧ ಸಂಚಿನ ಆರೋಪ ಮಾಡಿದ್ದರು.
ರಷ್ಯಾ ಜತೆಗಿನ ಯುದ್ಧ ಕೊನೆಗೊಳಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಯ ವೇಳೆ ಉಂಟಾಗಿರುವ ವಿವಾದದಿಂದ ಬೇಸತ್ತಿದ್ದ ಉಕ್ರೇನ್ ಅಧ್ಯಕ್ಷರಿಗೆ ಬ್ರಿಟನ್ ಪೂರ್ಣ ಅಭಯ ನೀಡಿದೆ. ಯನೈಟೆಡ್ ಕಿಂಗ್ಡಮ್ಗೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರನ್ನು ಲಂಡನ್ನಲ್ಲಿ ಶನಿವಾರ ಅಲ್ಲಿನ ಪ್ರಧಾನಿ ಕೀರ್ ಸ್ಟಾರ್ಮರ್ ಅಪ್ಪಿಕೊಂಡು ಸ್ವಾಗತಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಶ್ವೇತಭವನದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಕತೆ ನಡೆಸುವ ವೇಳೆ ಅನಿರೀಕ್ಷಿತ ಘಟನೆ ನಡೆದಿತ್ತು. ಟ್ರಂಪ್, ಉಪಾಧ್ಯಕ್ಷ ಜೆ. ಡಿ ವ್ಯಾನ್ಸ್ ಸೇರಿಕೊಂಡು ಜೆಲೆನ್ಸ್ಕಿ ವಿರುದ್ಧ ಯುದ್ಧ ಸಂಚಿನ ಆರೋಪ ಮಾಡಿದ್ದರು. ಅದನ್ನು ಒಪ್ಪಿಕೊಳ್ಳದ ಉಕ್ರೇನ್ ಅಧ್ಯಕ್ಷ ಲೈವ್ ಕ್ಯಾಮೆರಾಗಳ ಮುಂದೆಯೇ ತಿರಗೇಟು ಕೊಟ್ಟು ಎದ್ದು ನಡೆದಿದ್ದರು. ಮಾತುಕತೆ ಮುರಿದು ಬಿದ್ದು ಉಕ್ರೇನ್ ನಿಯೋಗವನ್ನು ವೈಟ್ಹೌಸ್ನಿಂದ ಹೊರಕ್ಕೆ ಕಳುಹಿಸಲಾಗಿತ್ತು. ಅದಾಗಿ ಒಂದು ದಿನದ ಬಳಿಕ ಉಕ್ರೇನ್ ಮತ್ತು ಬ್ರಿಟನ್, ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ 2.26 ಬಿಲಿಯನ್ ಪೌಂಡ್ ಮೌಲ್ಯದ ಸಾಲ ಒಪ್ಪಂದಕ್ಕೆ ಸಹಿ ಹಾಕಿದವು.
2.26 ಬಿಲಿಯನ್ ಪೌಂಡ್ ಸಾಲವು ಉಕ್ರೇನಿಯನ್ ಮಿಲಿಟರಿ ಸಾಮರ್ಥ್ಯ ಹೆಚ್ಚಿಸುತ್ತದೆ. ಸಾರ್ವಭೌಮ ಸ್ವತ್ತುಗಳ ಮೇಲೆ ಉತ್ಪತ್ತಿಯಾಗುವ ಲಾಭ ಬಳಸಿಕೊಂಡು ಮರುಪಾವತಿ ಮಾಡಲಾಗುತ್ತದೆ. ಚಾನ್ಸಲರ್ ರಾಚೆಲ್ ರೀವ್ಸ್ ಮತ್ತು ಉಕ್ರೇನಿಯನ್ ಹಣಕಾಸು ಸಚಿವ ಸೆರ್ಗಿ ಮಾರ್ಚೆಂಕೊ ಸಾಲ ಒಪ್ಪಂದಕ್ಕೆ ಸಹಿ ಹಾಕಿದರು. ಮೊದಲ ಕಂತಿನ ಧನಸಹಾಯವು ಮುಂದಿನ ವಾರದ ಕೊನೆಯಲ್ಲಿ ಉಕ್ರೇನ್ ತಲುಪುವ ನಿರೀಕ್ಷೆಯಿದೆ.
ವಿಭಿನ್ನ ಪರಿಸ್ಥಿತಿ
ಟ್ರಂಪ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ ಓವಲ್ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರೆ, ಸ್ಟಾರ್ಮರ್ ತಮ್ಮ 10 ಡೌನಿಂಗ್ ಸ್ಟ್ರೀಟ್ ನಿವಾಸದ ಹೊರಗೆ ಜೆಲೆನ್ಸ್ಕಿ ಅವರನ್ನು ಅಪ್ಪಿ ಬರಮಾಡಿಕೊಂಡು ವಿಭಿನ್ನ ಪರಿಸ್ಥಿತಿ ಸೃಷ್ಟಿಸಿದರು. ಮೂರು ವರ್ಷಗಳ ಹಿಂದೆ ರಷ್ಯಾದಿಂದ ಆಕ್ರಮಣಕ್ಕೆ ಒಳಗಾದ ಬಳಿಕ ನೀಡಿದ ನಿರಂತರ ಬೆಂಬಲಕ್ಕಾಗಿ ಉಕ್ರೇನ್ ಅಧ್ಯಕ್ಷರು ಯುಕೆಗೆ ಧನ್ಯವಾದ ತಿಳಿಸಿದರು. ಇದೇ ವೇಳೆ, ಯುದ್ಧ ಪೀಡಿತ ಯುರೋಪಿಯನ್ ರಾಷ್ಟ್ರಕ್ಕೆ ಯುಕೆಯ ಬೆಂಬಲ ಅಚಲ ಎಂದು ಸ್ಟಾರ್ಮರ್ ಹೇಳಿದರು.
ಉಕ್ರೇನ್ ಶಾಂತಿ ಒಪ್ಪಂದ ಯೋಜನೆಯ ಬಗ್ಗೆ ಚರ್ಚಿಸಲು ಯುರೋಪಿಯನ್ ನಾಯಕರ ಪ್ರಮುಖ ಶೃಂಗಸಭೆಗೆ ಒಂದು ದಿನ ಮೊದಲು ನಡೆದ ಸಭೆಯಲ್ಲಿ, ಸ್ಟಾರ್ಮರ್ ಜೆಲೆನ್ಸ್ಕಿಗೆ "ಯುನೈಟೆಡ್ ಕಿಂಗ್ಡಮ್ನಾದ್ಯಂತ ಸಂಪೂರ್ಣ ಬೆಂಬಲವಿದೆ" ಎಂದು ಹೇಳಿದರು. "ನಾವು ನಿಮ್ಮೊಂದಿಗೆ ಮತ್ತು ಉಕ್ರೇನ್ ಅವರೊಂದಿಗೆ ನಿಲ್ಲುತ್ತೇವೆ" ಎಂದು ಅವರು ಹೇಳಿದರು.
ಉಕ್ರೇನ್ ಅಧ್ಯಕ್ಷರು ಪ್ರತಿಕ್ರಿಯಿಸಿ, "ನಾವು ನಿಮ್ಮಂಥ ಸ್ನೇಹಿತರನ್ನು ಹೊಂದಿರುವುದಕ್ಕೆ ಸಂತೋಷವಿದ. ಈ ಯುದ್ಧದ ಆರಂಭದಿಂದಲೂ ಬೆಂಬಲ ನೀಡಿದ್ದಕ್ಕಾಗಿ ನಾನು ಯುನೈಟೆಡ್ ಕಿಂಗ್ಡಮ್ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.