ಇರಾನ್ ವಿರುದ್ಧ ಸಮರ ಸಾರಲು ಬ್ರಿಟನ್ ಸಜ್ಜು: ಎಚ್‌ಎಂಎಸ್ ಆನ್ಸನ್ ನೌಕೆ ನಿಯೋಜನೆ
x

ಇರಾನ್ ವಿರುದ್ಧ ಸಮರ ಸಾರಲು ಬ್ರಿಟನ್ ಸಜ್ಜು: 'ಎಚ್‌ಎಂಎಸ್ ಆನ್ಸನ್' ನೌಕೆ ನಿಯೋಜನೆ

ಬ್ರಿಟನ್ ನೌಕಾಪಡೆಗೆ ಸೇರ್ಪಡೆಗೊಂಡಿರುವ ಹೊಸ ಹಾಗೂ ಅತ್ಯಾಧುನಿಕ 'ಅಸ್ಟೂಟ್ ಕ್ಲಾಸ್' ಶ್ರೇಣಿಯ ಜಲಾಂತರ್ಗಾಮಿ ನೌಕೆಗಳ ಪೈಕಿ ಎಚ್‌ಎಂಎಸ್ ಆನ್ಸನ್ ಐದನೆಯದಾಗಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ನಡುವೆ ಅಮೆರಿಕದ ಬೆಂಬಲಕ್ಕೆ ನಿಂತಿರುವ ಬ್ರಿಟನ್ ಕೂಡ ನೇರ ಯುದ್ಧಕ್ಕೆ ಧುಮುಕುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದೆ.

ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ ಮತ್ತು ಬ್ರಿಟನ್ ಜಂಟಿ ಮಿಲಿಟರಿ ನೆಲೆಯ ಮೇಲೆ ಇರಾನ್ ಪಡೆಗಳು ದಾಳಿ ನಡೆಸಿದ ಬೆನ್ನಲ್ಲೇ ರೊಚ್ಚಿಗೆದ್ದಿರುವ ಬ್ರಿಟನ್, ತನ್ನ ಅತ್ಯಂತ ಶಕ್ತಿಶಾಲಿ ಹಾಗೂ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯಾದ 'ಎಚ್‌ಎಂಎಸ್ ಆನ್ಸನ್' ಅನ್ನು ಅರಬ್ಬೀ ಸಮುದ್ರದಲ್ಲಿ ನಿಯೋಜಿಸಿದೆ ಎಂದು ವರದಿಯಾಗಿದೆ.

ಟೊಮಾಹಾಕ್ ಕ್ಷಿಪಣಿಗಳಿಂದ ಸಜ್ಜಾದ ನೌಕೆ

ಡೈಲಿ ಮೇಲ್ ವರದಿ ಮಾಡಿರುವ ಮಿಲಿಟರಿ ಮೂಲಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾದ ಪರ್ತ್‌ನಿಂದ ಹೊರಟ ಎಚ್‌ಎಂಎಸ್ ಆನ್ಸನ್, ಬರೋಬ್ಬರಿ 5,500 ಮೈಲುಗಳಷ್ಟು ಸುದೀರ್ಘ ಪ್ರಯಾಣ ಬೆಳೆಸಿ ಇದೀಗ ಯುದ್ಧಪೀಡಿತ ಅರಬ್ಬೀ ಸಮುದ್ರ ಪ್ರದೇಶವನ್ನು ತಲುಪಿದೆ. ಈ ಬಲಿಷ್ಠ ಬ್ರಿಟಿಷ್ ಜಲಾಂತರ್ಗಾಮಿಯು ಅತ್ಯಾಧುನಿಕ 'ಟೊಮಾಹಾಕ್ ಬ್ಲಾಕ್ IV' ಕ್ರೂಸ್ ಕ್ಷಿಪಣಿಗಳು ಹಾಗೂ 'ಸ್ಪಿಯರ್‌ಫಿಶ್ ಹೆವಿವೇಯ್ಟ್ ಟಾರ್ಪಿಡೊ'ಗಳಿಂದ ಸಂಪೂರ್ಣವಾಗಿ ಶಸ್ತ್ರಸಜ್ಜಿತವಾಗಿದೆ. ಈ ನೌಕೆಯು ಸಮುದ್ರದಾಳದಿಂದಲೇ ಸುಮಾರು 1,000 ಮೈಲುಗಳಷ್ಟು (1,600 ಕಿಲೋಮೀಟರ್) ದೂರದ ಗುರಿಯನ್ನು ನಿಖರವಾಗಿ ಭೇದಿಸಬಲ್ಲ ಮಾರಕ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಸಂಘರ್ಷ ಮತ್ತಷ್ಟು ಉಲ್ಬಣಗೊಂಡರೆ ಕ್ಷಣಾರ್ಧದಲ್ಲಿ ಇರಾನ್ ಮೇಲೆ ನೇರ ದಾಳಿ ನಡೆಸಲು ಇದು ಸನ್ನದ್ಧ ಸ್ಥಿತಿಯಲ್ಲಿದೆ.

ಬ್ರಿಟಿಷ್ ನೌಕಾಪಡೆಯ ಅತಿದೊಡ್ಡ ಅಸ್ತ್ರ

ಬ್ರಿಟನ್ ನೌಕಾಪಡೆಗೆ ಸೇರ್ಪಡೆಗೊಂಡಿರುವ ಹೊಸ ಹಾಗೂ ಅತ್ಯಾಧುನಿಕ 'ಅಸ್ಟೂಟ್ ಕ್ಲಾಸ್' (Astute class) ಶ್ರೇಣಿಯ ಜಲಾಂತರ್ಗಾಮಿ ನೌಕೆಗಳ ಪೈಕಿ ಎಚ್‌ಎಂಎಸ್ ಆನ್ಸನ್ ಐದನೆಯದಾಗಿದೆ. ಇದಕ್ಕೂ ಮುನ್ನ ಎಚ್‌ಎಂಎಸ್ ಅಸ್ಟೂಟ್, ಆಂಬುಷ್, ಆರ್ಟ್‌ಫುಲ್ ಮತ್ತು ಆಡಾಸಿಯಸ್ ಎಂಬ ಇದೇ ಮಾದರಿಯ ನಾಲ್ಕು ನೌಕೆಗಳು ಸೇವೆಗೆ ಮುಡಿಪಾಗಿವೆ. ಈ ಅಸ್ಟೂಟ್ ಶ್ರೇಣಿಯ ನೌಕೆಗಳು ಬ್ರಿಟಿಷ್ ನೌಕಾಪಡೆಯ ಬತ್ತಳಿಕೆಯಲ್ಲಿರುವ ಅತಿದೊಡ್ಡ, ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಮತ್ತು ಪ್ರಬಲ ದಾಳಿ ಸಾಮರ್ಥ್ಯ ಹೊಂದಿರುವ ಜಲಾಂತರ್ಗಾಮಿಗಳಾಗಿವೆ. ಇರಾನ್ ವಿರುದ್ಧದ ಕಾರ್ಯಾಚರಣೆಗಾಗಿಯೇ ಈ ನೌಕೆಯನ್ನು ನಿಯೋಜಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇದ್ದರೂ, ಬ್ರಿಟಿಷ್ ರಕ್ಷಣಾ ಸಚಿವಾಲಯವು ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಹೊರ್ಮುಜ್ ಜಲಸಂಧಿ ದಿಗ್ಬಂಧನಕ್ಕೆ ತಕ್ಕ ಪ್ರತ್ಯುತ್ತರ

ಇರಾನ್ ಸೇನೆಯು ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಗೆ ದಿಗ್ಬಂಧನ ವಿಧಿಸಿರುವುದು ಮತ್ತು ಕೊಲ್ಲಿ ಪ್ರದೇಶದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವುದನ್ನು ಖಂಡಿಸಿ, ಬ್ರಿಟನ್ ಸೇರಿದಂತೆ ಜಗತ್ತಿನ 22 ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದವು. ಇದರ ಬೆನ್ನಲ್ಲೇ 48 ಗಂಟೆಗಳ ಒಳಗೆ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬ್ರಿಟನ್ ತನ್ನ ಅತ್ಯಂತ ಪ್ರಬಲ ನೌಕೆಯನ್ನು ಅರಬ್ಬೀ ಸಮುದ್ರದಲ್ಲಿ ನಿಯೋಜಿಸುವ ಮೂಲಕ ಇರಾನ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Read More
Next Story