
ಮಕ್ಕಳಿಗಿಲ್ಲ ಇನ್ಸ್ಟಾಗ್ರಾಂ, ಟಿಕ್‌ಟಾಕ್: ಬ್ರಿಟನ್‌ನಲ್ಲಿ 16 ವರ್ಷದೊಳಗಿನವರಿಗೆ ನಿಷೇಧ
16 ವರ್ಷದೊಳಗಿನ ಮಕ್ಕಳು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ಬ್ರಿಟನ್ ಸಂಪೂರ್ಣ ನಿಷೇಧ ಹೇರಿದ್ದಾರೆ. ಈ ಮೂಲಕ ಕಠಿಣ ಕ್ರಮ ಕೈಗೊಂಡ ವಿಶ್ವದ ನಾಲ್ಕನೇ ದೇಶವಾಗಿ ಬ್ರಿಟನ್ ಹೊರಹೊಮ್ಮಿದೆ.
ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರವು ಐತಿಹಾಸಿಕ ಹಾಗೂ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದೆ. 16 ವರ್ಷದೊಳಗಿನ ಮಕ್ಕಳು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸಂಪೂರ್ಣ ನಿಷೇಧ ಹೇರಿದ್ದಾರೆ. ಈ ಮೂಲಕ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡ ವಿಶ್ವದ ನಾಲ್ಕನೇ ದೇಶವಾಗಿ ಬ್ರಿಟನ್ ಹೊರಹೊಮ್ಮಿದೆ.
ಆಸ್ಟ್ರೇಲಿಯಾದ ಕಠಿಣ ಕಾನೂನು ಮಾದರಿಯನ್ನೇ ಅನುಸರಿಸುತ್ತಿರುವ ಬ್ರಿಟನ್, ಪ್ರಸ್ತುತ ಮಕ್ಕಳ ದೈನಂದಿನ ಜೀವನದ ಭಾಗವಾಗಿರುವ 10 ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದೆ. ಇವುಗಳಲ್ಲಿ ಟಿಕ್‌ಟಾಕ್, ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ರೆಡ್ಡಿಟ್, ಟ್ವಿಚ್, ಎಕ್ಸ್ (ಟ್ವಿಟರ್), ಥ್ರೆಡ್ಸ್, ಫೇಸ್‌ಬುಕ್ ಮತ್ತು ಕಿಕ್ ಸೇರಿವೆ. ಅಷ್ಟೇ ಅಲ್ಲದೆ, ಪ್ರಸ್ತುತ ತೀವ್ರ ಚರ್ಚೆಯಲ್ಲಿರುವ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ಗಳ ಬಳಕೆಯ ಮೇಲೂ ಹೆಚ್ಚಿನ ನಿಯಂತ್ರಣ ಹೇರಲು ಸರ್ಕಾರ ಮುಂದಾಗಿದೆ.
ಪ್ರಧಾನಿಯ ದೃಢ ನಿಲುವು: "ಮಕ್ಕಳಿಗೆ ಬಾಲ್ಯವನ್ನು ಮರಳಿ ನೀಡಿ"
ಈ ನಿರ್ಧಾರವನ್ನು ಘೋಷಿಸುವಾಗ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಆತಂಕ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಿದರು. ಇಂದಿನ ಡಿಜಿಟಲ್ ಕಾಲದಲ್ಲಿ ತಂತ್ರಜ್ಞಾನವು ಮಕ್ಕಳ ಮನಸ್ಸು ಮತ್ತು ಅವರ ಜೀವನಶೈಲಿಯ ಮೇಲೆ ಅಗಾಧ ಹಾಗೂ ಮಾರಕ ಪರಿಣಾಮಗಳನ್ನು ಬೀರುತ್ತಿದೆ. ಸೈಬರ್ ಬೆದರಿಕೆ, ಆತಂಕ, ಖಿನ್ನತೆ ಮತ್ತು ನಿದ್ರೆಯ ಅಭಾವಕ್ಕೆ ಸಾಮಾಜಿಕ ಜಾಲತಾಣಗಳು ಕಾರಣವಾಗುತ್ತಿವೆ. ಇಂತಹ ವಿಷಮ ವಾತಾವರಣದಲ್ಲಿ ಮಕ್ಕಳು ಬೆಳೆಯುವುದನ್ನು ಸುಮ್ಮನೆ ನೋಡುತ್ತಾ ಕೂರಲು ನಮಗೆ ಸಾಧ್ಯವಿಲ್ಲ. ಈ ನಿಷೇಧದ ಮೂಲಕ, ತಂತ್ರಜ್ಞಾನದ ಬಂಧನದಿಂದ ಬಿಡುಗಡೆಗೊಳಿಸಿ ಅವರಿಗೆ ಒಂದು ಸುಂದರ ಬಾಲ್ಯವನ್ನು ಮರಳಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಬೆಂಬಲ ಮತ್ತು ಸಮೀಕ್ಷೆ
ಈ ಕಾಯ್ದೆಯನ್ನು ಜಾರಿಗೆ ತರುವ ಮುನ್ನ ಬ್ರಿಟನ್ ಸರ್ಕಾರವು ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿತು. ಮೂರು ತಿಂಗಳ ಕಾಲ ನಡೆದ ಸಾರ್ವಜನಿಕ ಸಮಾಲೋಚನೆಯಲ್ಲಿ ಬರೋಬ್ಬರಿ 1,16,000 ಜನರು ಭಾಗವಹಿಸಿದ್ದರು. ಈ ಸಮೀಕ್ಷೆಯ ಫಲಿತಾಂಶ ಸರ್ಕಾರಕ್ಕೆ ಬಲವಾದ ಬೆಂಬಲವನ್ನು ನೀಡಿತು. ಶೇ.90ರಷ್ಟು ಪೋಷಕರು ಮಕ್ಕಳ ಮೇಲೆ ಸೋಶಿಯಲ್ ಮೀಡಿಯಾ ನಿಷೇಧಿಸುವುದನ್ನು ಮುಕ್ತವಾಗಿ ಬೆಂಬಲಿಸಿದರು. ಶೇ. 83ರಷ್ಟು ಪೋಷಕರು ಸಾಮಾಜಿಕ ಜಾಲತಾಣಗಳಿಂದ ಮಕ್ಕಳಿಗೆ ಸಿಗುವ ಲಾಭಕ್ಕಿಂತ, ಅವುಗಳ ಭೌತಿಕ ಮತ್ತು ಮಾನಸಿಕ ಹಾನಿಯೇ ಹೆಚ್ಚು ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ಪೋಷಕರ ಈ ಅಪಾರ ಬೆಂಬಲವೇ ಸರ್ಕಾರ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪ್ರೇರಣೆಯಾಯಿತು.
ಏಕೆ ಈ ನಿರ್ಧಾರ ಅನಿವಾರ್ಯವಾಯಿತು?
ಜಾಗತಿಕವಾಗಿ ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿನ 'ಲೈಕ್ಸ್' ಮತ್ತು 'ಕಮೆಂಟ್ಸ್'ಗಾಗಿ ಹಾತೊರೆಯುವ ಮಕ್ಕಳು, ಸಣ್ಣ ವಿಫಲತೆಗೂ ತೀವ್ರ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆನ್‌ಲೈನ್‌ನಲ್ಲಿ ನಡೆಯುವ ದೌರ್ಜನ್ಯಗಳು ಮಕ್ಕಳ ಆತ್ಮಹತ್ಯೆಗೂ ಕಾರಣವಾಗುತ್ತಿವೆ. ಅಪರಿಚಿತರು ಮಕ್ಕಳನ್ನು ಸಂಪರ್ಕಿಸಿ ಮೋಸಗೊಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ಪರದೆಯ ಮುಂದೆಯೇ ದಿನ ಕಳೆಯುವುದರಿಂದ ಮಕ್ಕಳು ದೈಹಿಕ ವ್ಯಾಯಾಮದಿಂದ ದೂರ ಉಳಿದಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ದೇಶಗಳು ಈ ಮಾದರಿಯ ನಿರ್ಬಂಧಗಳನ್ನು ಜಾರಿಗೆ ತಂದಿವೆ. ಬ್ರಿಟನ್ ಈ ಸಾಲಿಗೆ ಸೇರ್ಪಡೆಗೊಂಡಿರುವುದು, ಪಶ್ಚಿಮ ದೇಶಗಳಲ್ಲೂ ತಂತ್ರಜ್ಞಾನದ ವಿರುದ್ಧದ ಹೋರಾಟ ತೀವ್ರಗೊಂಡಿದೆ ಎಂಬುದನ್ನು ತೋರಿಸುತ್ತದೆ. ಮಕ್ಕಳ ಸುರಕ್ಷತೆಯನ್ನು ಖಾಸಗಿ ಕಂಪನಿಗಳ ಲಾಭದ ಉದ್ದೇಶಕ್ಕಿಂತ ಮೇಲಿಟ್ಟು ನೋಡಬೇಕು ಎಂಬ ಆಶಯ ಈ ಕಾಯ್ದೆಯಲ್ಲಿದೆ.
ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ವಯಸ್ಸಿನ ಪರಿಶೀಲನೆ ಹೇಗೆ ಮಾಡಲಾಗುತ್ತದೆ? ಮಕ್ಕಳು ವಿಪಿಎನ್ ಮೂಲಕ ಈ ನಿರ್ಬಂಧಗಳನ್ನು ಮೀರಿ ಜಾಲತಾಣಗಳಿಗೆ ಪ್ರವೇಶ ಪಡೆದರೆ ಏನು ಕ್ರಮ? ಎಂಬಿತ್ಯಾದಿ ತಾಂತ್ರಿಕ ಸವಾಲುಗಳನ್ನು ಎದುರಿಸಲು ಬ್ರಿಟನ್ ಸರ್ಕಾರವು ತಂತ್ರಜ್ಞಾನ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಠಿಣ ವಯೋಮಾನದ ಪರಿಶೀಲನೆ ನಡೆಸದಿದ್ದರೆ ಭಾರೀ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ತಂತ್ರಜ್ಞಾನವು ಬೆಳವಣಿಗೆಯ ಸಾಧನವಾಗಬೇಕೇ ಹೊರತು, ಮಕ್ಕಳ ಬಾಲ್ಯವನ್ನು ನುಂಗುವ ಅಸ್ತ್ರವಾಗಬಾರದು. ಬ್ರಿಟನ್ ಸರ್ಕಾರದ ಈ ಕ್ರಮವು ಪೋಷಕರಿಗೆ ದೊಡ್ಡ ಸಮಾಧಾನ ತಂದಿದೆ. ಸಾಮಾಜಿಕ ಜಾಲತಾಣಗಳು ಇಲ್ಲದ ಬದುಕಿನಲ್ಲಿ ಮಕ್ಕಳು ಮತ್ತೆ ಪುಸ್ತಕಗಳ ಜೊತೆ, ಕ್ರೀಡೆಗಳ ಜೊತೆ ಮತ್ತು ನೈಜ ಸ್ನೇಹಿತರ ಜೊತೆ ಕಾಲ ಕಳೆಯುವಂತಾಗಲಿ ಎಂಬುದು ಈ ಕಾಯ್ದೆಯ ಮೂಲ ಉದ್ದೇಶ. ಬ್ರಿಟನ್ ಕೈಗೊಂಡಿರುವ ಈ ಹೆಜ್ಜೆಯು ಜಗತ್ತಿನ ಇತರ ದೇಶಗಳಿಗೂ ಒಂದು ಪ್ರಮುಖ ದಿಕ್ಸೂಚಿಯಾಗುವುದರಲ್ಲಿ ಸಂಶಯವಿಲ್ಲ.

