
Uganda Army Chief| “1 ಬಿಲಿಯನ್ ಡಾಲರ್ ಹಣ ಮತ್ತು ಸುಂದರ ಯುವತಿಯನ್ನು ಕೊಡಿ”- ಉಗಾಂಡಾ ಸೇನಾ ಮುಖ್ಯಸ್ಥನ ವಿಲಕ್ಷಣ ಬೇಡಿಕೆ
ಟರ್ಕಿ ದೇಶದಿಂದ 1 ಬಿಲಿಯನ್ ಡಾಲರ್ ಹಣ ಮತ್ತು ಸುಂದರ ಮಹಿಳೆಯನ್ನು ಪತ್ನಿಯಾಗಿ ನೀಡುವಂತೆ ಉಗಾಂಡಾ ಸೇನಾ ಮುಖ್ಯಸ್ಥ ಮುಹೂಜಿ ಕೈನೆರುಗಬಾ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.
ಉಗಾಂಡಾದ ಅಧ್ಯಕ್ಷ ಯೋವೇರಿ ಮುಸೆವೇನಿ ಅವರ ಪುತ್ರ ಮತ್ತು ಸೇನಾ ಮುಖ್ಯಸ್ಥ ಮುಹೂಜಿ ಕೈನೆರುಗಬಾ ಮತ್ತೊಮ್ಮೆ ತಮ್ಮ ವಿಲಕ್ಷಣ ಹೇಳಿಕೆಗಳಿಂದ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಟರ್ಕಿ ದೇಶದ ಮುಂದೆ ಬರೋಬ್ಬರಿ 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಹಣ ಮತ್ತು ಆ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತಮಗೆ ಪತ್ನಿಯಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
30 ದಿನಗಳ ಗಡುವು, ರಾಯಭಾರ ಕಚೇರಿ ಮುಚ್ಚುವ ಬೆದರಿಕೆ
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ 30 ದಿನಗಳಲ್ಲಿ ಉಗಾಂಡಾದಲ್ಲಿರುವ ಟರ್ಕಿ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಮುಹೂಜಿ ಎಚ್ಚರಿಸಿದ್ದಾರೆ. ಈ ಕುರಿತು 'X' (ಟ್ವಿಟರ್) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಅವರು, "ಟರ್ಕಿಗೆ ಇದು ತುಂಬಾ ಸರಳವಾದ ಡೀಲ್. ಒಂದೋ ಅವರು ನಮಗೆ ಹಣ ನೀಡಬೇಕು, ಇಲ್ಲವೇ ನಾನು ಇಲ್ಲಿನ ಅವರ ಎಂಬಸಿಯನ್ನು ಮುಚ್ಚುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಏನಿದು ವಿವಾದ?
ಸೋಮಾಲಿಯಾದಲ್ಲಿ ಟರ್ಕಿ ದೇಶವು ಬಂದರು ಮತ್ತು ವಿಮಾನ ನಿಲ್ದಾಣಗಳಂತಹ ಮೂಲಸೌಕರ್ಯ ಯೋಜನೆಗಳಿಂದ ಭಾರಿ ಲಾಭ ಗಳಿಸುತ್ತಿದೆ. ಆದರೆ ಕಳೆದ ಎರಡು ದಶಕಗಳಿಂದ ಉಗಾಂಡಾದ ಸೈನಿಕರು ಅಲ್ಲಿನ ಭದ್ರತೆಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ನಾವು ಭದ್ರತೆ ಒದಗಿಸುತ್ತಿದ್ದರೆ ಟರ್ಕಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಮುಹೂಜಿ, ಟರ್ಕಿಯು ಉಗಾಂಡಾಕ್ಕೆ 1 ಬಿಲಿಯನ್ ಡಾಲರ್ ಮೊತ್ತವನ್ನು ಸೆಕ್ಯೂರಿಟಿ ಡಿವಿಡೆಂಡ್ ರೂಪದಲ್ಲಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
This guy, Muhoozi Kainerubaga is the chief of the Ugandan 🇺🇬 Army, son of the dictator Museveni an possible future leader of the country
— Clément Molin (@clement_molin) April 11, 2026
Here, he is threatening Turkiye 🇹🇷, asking for 1 billion $ and the most beautiful turkish woman as a wife or he stops diplomatic relations. pic.twitter.com/xPORjQTVHm
ಸುಂದರಿಯನ್ನು ನೀಡುವಂತೆ ಆಗ್ರಹ
ಇದೇ ಸಂದರ್ಭದಲ್ಲಿ ಟರ್ಕಿಯ ಅತ್ಯಂತ ಸುಂದರ ಮಹಿಳೆಯನ್ನು ತಮಗೆ ಹಸ್ತಾಂತರಿಸಬೇಕು, ನಾನು ಆಕೆಯನ್ನು ಮದುವೆಯಾಗುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ. ಅಲ್ಲದೇ ಉಗಾಂಡಾದ ಜನರಿಗೆ ಟರ್ಕಿಗೆ ಪ್ರಯಾಣಿಸದಂತೆ ಸಲಹೆ ನೀಡಿದ್ದಾರೆ.
ಇಸ್ರೇಲ್‌ಗೆ 1 ಲಕ್ಷ ಸೈನಿಕರ ನೆರವು!
ಇಷ್ಟಕ್ಕೇ ನಿಲ್ಲದ ಮುಹೂಜಿ, ತಾವು ಇಸ್ರೇಲ್ ಪರವಾಗಿದ್ದು, "ಪವಿತ್ರ ಭೂಮಿ ಮತ್ತು ಏಸುಕ್ರಿಸ್ತನ ನಾಡನ್ನು ರಕ್ಷಿಸಲು ನನ್ನ ನೇತೃತ್ವದಲ್ಲಿ 1,00,000 ಉಗಾಂಡಾ ಸೈನಿಕರನ್ನು ಇಸ್ರೇಲ್‌ಗೆ ನಿಯೋಜಿಸಲು ನಾನು ಸಿದ್ಧನಿದ್ದೇನೆ" ಎಂದು ಘೋಷಿಸಿದ್ದಾರೆ.
ಇನ್ನು ಮುಹೂಜಿ ಇಂತಹ ವಿಲಕ್ಷಣ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2022ರ ಅಕ್ಟೋಬರ್‌ನಲ್ಲಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ವಿವಾಹವಾಗಲು ಪ್ರತಿಯಾಗಿ ಜಗತ್ತಿನ ಅತ್ಯಂತ ಸುಂದರವಾದ "100 ಅಂಕೋಲ್ ಹಸುಗಳನ್ನು" ನೀಡಲು ಸಿದ್ಧನಿದ್ದೇನೆ ಎಂದು ಹೇಳಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದರು.

