
ರಷ್ಯಾದಲ್ಲಿ 8.7 ತೀವ್ರತೆಯ ಭೂಕಂಪ: ಜಪಾನ್ ಕರಾವಳಿಗೆ ಅಪ್ಪಳಿಸಿದ ಸುನಾಮಿ, ಅಮೆರಿಕಕ್ಕೂ ಎಚ್ಚರಿಕೆ
ರಷ್ಯಾದ ಕುರಿಲ್ ದ್ವೀಪಗಳಲ್ಲಿನ ಪ್ರಮುಖ ವಸಾಹತು ಎನಿಸಿದ ಸೆವೆರೊ-ಕುರಿಲ್ಸ್ಕ್ಗೂ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಸ್ಥಳೀಯ ಗವರ್ನರ್ ವ್ಯಾಲೆರಿ ಲಿಮರೆಂಕೊ ಖಚಿತಪಡಿಸಿದ್ದಾರೆ.
ಇಂದು (ಜುಲೈ 30, ಬುಧವಾರ) ಮುಂಜಾನೆ ರಷ್ಯಾದ ಬಳಿ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಬೆನ್ನಲ್ಲೇ ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್ನ ಹೊಕ್ಕೈಡೋ ದ್ವೀಪದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಿದೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಹೊಕ್ಕೈಡೋದ ಪೂರ್ವ ಕರಾವಳಿಯ ನೆಮುರೋ ಪ್ರದೇಶಕ್ಕೆ ಸುಮಾರು 30 ಸೆಂಟಿಮೀಟರ್ ಎತ್ತರದ ಮೊದಲ ಸುನಾಮಿ ಅಲೆ ಅಪ್ಪಳಿಸಿದೆ.
ರಷ್ಯಾದ ಕುರಿಲ್ ದ್ವೀಪಗಳಲ್ಲಿನ ಪ್ರಮುಖ ವಸಾಹತು ಎನಿಸಿದ ಸೆವೆರೊ-ಕುರಿಲ್ಸ್ಕ್ಗೂ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಸ್ಥಳೀಯ ಗವರ್ನರ್ ವ್ಯಾಲೆರಿ ಲಿಮರೆಂಕೊ ಖಚಿತಪಡಿಸಿದ್ದಾರೆ. ನಿವಾಸಿಗಳು ಸುರಕ್ಷಿತವಾಗಿದ್ದು, ಮತ್ತೆ ಅಲೆಗಳು ಬರುವ ಭೀತಿ ದೂರವಾಗುವವರೆಗೂ ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭೂಕಂಪದ ಕೇಂದ್ರಬಿಂದುವಿಗೆ ಸಮೀಪದ ಪೆಟ್ರೊಪಾವ್ಲೋವ್ಸ್ಕ್-ಕಾಮ್ಚಟ್ಸ್ಕಿ ನಗರದಲ್ಲಿ, ಜನರು ಭಯಭೀತರಾಗಿ ಸರಿಯಾದ ಬಟ್ಟೆ, ಪಾದರಕ್ಷೆಗಳಿಲ್ಲದೆ ಮನೆಯಿಂದ ಹೊರಗೆ ಓಡಿಬಂದ ದೃಶ್ಯ ಕಂಡುಬಂದಿದೆ. ಮನೆಗಳಲ್ಲಿ ಕಪಾಟುಗಳು ಉರುಳಿ, ಕನ್ನಡಿಗಳು ಒಡೆದು, ಬೀದಿಗಳಲ್ಲಿ ಕಾರುಗಳು ಅಲುಗಾಡಿವೆ. ಈ ಪ್ರದೇಶದಲ್ಲಿ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಖಾಲಿನ್ ದ್ವೀಪದ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಹವಾಯಿ, ಚಿಲಿ, ಜಪಾನ್ ಮತ್ತು ಸೊಲೊಮನ್ ದ್ವೀಪಗಳ ಕರಾವಳಿಯಲ್ಲಿ 1 ರಿಂದ 3 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ರಷ್ಯಾ ಮತ್ತು ಈಕ್ವೆಡಾರ್ನ ಕೆಲವು ಕರಾವಳಿ ಪ್ರದೇಶಗಳಲ್ಲಿ 3 ಮೀಟರ್ಗಿಂತಲೂ ಎತ್ತರದ ಅಲೆಗಳು ಸಂಭವಿಸಬಹುದು ಎಂದು ಎಚ್ಚರಿಸಿದೆ.
ಅಮೆರಿಕದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಅಲಾಸ್ಕಾದ ಅಲ್ಯೂಷಿಯನ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಕ್ಯಾಲಿಫೋರ್ನಿಯಾ, ಒರೆಗಾನ್, ವಾಷಿಂಗ್ಟನ್ ಮತ್ತು ಹವಾಯಿ ಸೇರಿದಂತೆ ಪಶ್ಚಿಮ ಕರಾವಳಿಯ ಭಾಗಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಹವಾಯಿಯ ಹೊನೊಲುಲುವಿನಲ್ಲಿ ಸುನಾಮಿ ಸೈರನ್ಗಳು ಮೊಳಗಿದ್ದು, ಜನರನ್ನು ತಕ್ಷಣವೇ ಎತ್ತರದ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
1952ರಲ್ಲಿ ಇದೇ ಕಮ್ಚಟ್ಕಾ ಪ್ರದೇಶದಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿ, ಹವಾಯಿಯಲ್ಲಿ 9.1 ಮೀಟರ್ (ಸುಮಾರು 30 ಅಡಿ) ಎತ್ತರದ ಅಲೆಗಳನ್ನು ಸೃಷ್ಟಿಸಿತ್ತು ಎಂಬುದು ಗಮನಾರ್ಹ.