ಇರಾನ್ ಪರಮೋಚ್ಚ ನಾಯಕ ಖಮೇನಿ ಭೇಟಿಗೆ ಟ್ರಂಪ್ ಸಿದ್ಧ; ರುಬಿಯೊ
x

ಇರಾನ್ ಪರಮೋಚ್ಚ ನಾಯಕ ಖಮೇನಿ ಭೇಟಿಗೆ ಟ್ರಂಪ್ ಸಿದ್ಧ; ರುಬಿಯೊ

ಇರಾನ್‌ನಲ್ಲಿ ಪ್ರತಿಭಟನಾಕಾರರ ಮೇಲಿನ ದಬ್ಬಾಳಿಕೆ ಮತ್ತು ಪರಮಾಣು ಕಾರ್ಯಕ್ರಮದ ವಿಚಾರವಾಗಿ ಅಮೆರಿಕ ಈಗಾಗಲೇ ಎಚ್ಚರಿಕೆ ನೀಡಿದ್ದು, ಈ ಬಗ್ಗೆಯೂ ಮಾತುಕತೆ ನಡೆಯಲಿದೆ.


Click the Play button to hear this message in audio format

ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದರೂ ಮತ್ತು ಸೇನಾ ಒತ್ತಡ ಹೆಚ್ಚಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಭೇಟಿಯಾಗಲು ಮುಕ್ತ ಮನಸ್ಸು ಹೊಂದಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ 'ಬ್ಲೂಮ್‌ರ್ಗ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರುಬಿಯೊ, "ಟ್ರಂಪ್ ಅವರು ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಲು ಯಾರನ್ನಾದರೂ ಭೇಟಿಯಾಗಲು ಸಿದ್ಧರಿದ್ದಾರೆ. ಒಂದು ವೇಳೆ ಅಯತೊಲ್ಲಾ ಅವರು ಟ್ರಂಪ್ ಅವರನ್ನು ಭೇಟಿಯಾಗಲು ಬಯಸಿದರೆ, ಆ ಸಭೆ ಖಂಡಿತವಾಗಿಯೂ ನಡೆಯಲಿದೆ," ಎಂದು ಸ್ಪಷ್ಟಪಡಿಸಿದರು.

"ನಾನು ಯಾರನ್ನಾದರೂ ಭೇಟಿಯಾಗಲು ಸಿದ್ಧವಿರುವ ಅಧ್ಯಕ್ಷರ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಖಮೇನಿ ಅವರ ಸಿದ್ಧಾಂತಗಳನ್ನು ಟ್ರಂಪ್ ಒಪ್ಪುತ್ತಾರೆ ಎಂದರ್ಥವಲ್ಲ. ಆದರೆ, ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸಲು ನೇರ ಮಾತುಕತೆ ಒಂದು ಮಾರ್ಗ ಎಂದು ಅವರು ನಂಬಿದ್ದಾರೆ," ಎಂದು ರುಬಿಯೊ ವಿವರಿಸಿದರು.

ಒಂದೆಡೆ ಮಾತುಕತೆ, ಇನ್ನೊಂದೆಡೆ ಸೇನಾ ಒತ್ತಡ

ಮಾತುಕತೆಯ ಪ್ರಸ್ತಾಪದ ನಡುವೆಯೂ, ಅಮೆರಿಕ ಇರಾನ್ ಮೇಲೆ ಸೇನಾ ಒತ್ತಡವನ್ನೂ ಹೆಚ್ಚಿಸುತ್ತಿದೆ. ಪರಮಾಣು ಕಾರ್ಯಕ್ರಮದ ಮಾತುಕತೆಗಳು ನಡೆಯುತ್ತಿರುವಂತೆಯೇ, ಮಧ್ಯಪ್ರಾಚ್ಯಕ್ಕೆ ಎರಡನೇ ವಿಮಾನವಾಹಕ ನೌಕೆಯನ್ನು ಕಳುಹಿಸಲು ಟ್ರಂಪ್ ನಿರ್ಧರಿಸಿದ್ದಾರೆ.

ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ (USS Gerald R Ford) ನೌಕೆಯು ಕೆರಿಬಿಯನ್‌ನಿಂದ ಹೊರಟು ಶೀಘ್ರದಲ್ಲೇ ಪರ್ಷಿಯನ್ ಕೊಲ್ಲಿಯಲ್ಲಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ನೌಕೆಯನ್ನು ಸೇರಿಕೊಳ್ಳಲಿದೆ. "ಪರಮಾಣು ಒಪ್ಪಂದದ ಮಾತುಕತೆಗಳು ವಿಫಲವಾದರೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವೇಳೆ ನಾವು ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನಮಗೆ ಇದರ ಅವಶ್ಯಕತೆ ಬೀಳಲಿದೆ," ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು.

ಇರಾನ್‌ನಲ್ಲಿ ಪ್ರತಿಭಟನಾಕಾರರ ಮೇಲಿನ ದಬ್ಬಾಳಿಕೆ ಮತ್ತು ಪರಮಾಣು ಕಾರ್ಯಕ್ರಮದ ವಿಚಾರವಾಗಿ ಅಮೆರಿಕ ಈಗಾಗಲೇ ಎಚ್ಚರಿಕೆ ನೀಡಿದೆ. ಆದರೆ, ಇರಾನ್ ಮೇಲೆ ಯಾವುದೇ ಸೇನಾ ದಾಳಿ ನಡೆದರೆ ಅದು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಕೊಲ್ಲಿ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.

ಯುರೋಪ್ ಸಂಬಂಧದ ಬಗ್ಗೆ ಒಲವು

ಇದೇ ವೇಳೆ, ಅಮೆರಿಕ ಮತ್ತು ಯುರೋಪ್ ನಡುವಿನ ಸಂಬಂಧದ ಬಗ್ಗೆಯೂ ರುಬಿಯೊ ಮಾತನಾಡಿದ್ದು, "ನಾವೆಲ್ಲರೂ ಒಂದೇ ನಾಗರಿಕತೆಯ ಉತ್ತರಾಧಿಕಾರಿಗಳು. ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯದ ಕಾರಣ ಯುರೋಪ್ ಅಭಿವೃದ್ಧಿ ಹೊಂದಬೇಕು ಎಂಬುದು ಅಮೆರಿಕದ ಆಶಯ," ಎಂದು ಹೇಳಿದರು. ಕಳೆದ ವರ್ಷ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೀಡಿದ್ದ ಕಟು ಹೇಳಿಕೆಗಳಿಗೆ ಹೋಲಿಸಿದರೆ, ರುಬಿಯೊ ಅವರ ಮಾತುಗಳು ಹೆಚ್ಚು ಸೌಹಾರ್ದಯುತವಾಗಿದ್ದವು.

Read More
Next Story