
ಅಮೆರಿಕದಿಂದ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಮತ್ತೆ ದಾಳಿ ಎಚ್ಚರಿಕೆ: ಡೊನಾಲ್ಡ್ ಟ್ರಂಪ್
ಇರಾನ್‌ನ ದಕ್ಷಿಣ ಕರಾವಳಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಖಾರ್ಗ್ ದ್ವೀಪವು, ಆ ದೇಶದ ಶೇ. 90ರಷ್ಟು ಕಚ್ಚಾ ತೈಲ ರಫ್ತನ್ನು ನಿರ್ವಹಿಸುತ್ತದೆ.
ಇರಾನ್‌ನ ಪ್ರಮುಖ ತೈಲ ಕೇಂದ್ರವಾಗಿರುವ 'ಖಾರ್ಗ್ ದ್ವೀಪ'ದ (Kharg Island) ಮೇಲೆ ಅಮೆರಿಕ ಸೇನೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್ ಮಾತುಕತೆಗೆ ಸಿದ್ಧವಿರುವುದಾಗಿ ಹೇಳುತ್ತಿದ್ದರೂ, ಪ್ರಸ್ತುತ ಷರತ್ತುಗಳು ಅಮೆರಿಕಕ್ಕೆ ತೃಪ್ತಿದಾಯಕವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕ ನಡೆಸಿದ ವೈಮಾನಿಕ ದಾಳಿಯಿಂದ ಖಾರ್ಗ್ ದ್ವೀಪದ ಬಹುಪಾಲು ನೆಲೆಗಳು "ಸಂಪೂರ್ಣವಾಗಿ ನಾಶವಾಗಿವೆ" ಎಂದು ಎನ್‌ಬಿಸಿ (NBC) ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ತಿಳಿಸಿದ್ದಾರೆ. "ಷರತ್ತುಗಳು ಇನ್ನೂ ಸರಿಯಿಲ್ಲ, ಹೀಗಾಗಿ ಕೇವಲ ತಮಾಷೆಗಾಗಿ (just for fun) ನಾವು ಮತ್ತೆ ಕೆಲವು ಬಾರಿ ಅಲ್ಲಿ ದಾಳಿ ನಡೆಸಬಹುದು," ಎಂದು ಅವರು ಹೇಳಿದ್ದಾರೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿ ಎದುರಾಗಿದೆ.
ಜಾಗತಿಕ ತೈಲ ಬೆಲೆ ಭೀತಿ
ಇರಾನ್‌ನ ದಕ್ಷಿಣ ಕರಾವಳಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಖಾರ್ಗ್ ದ್ವೀಪವು, ಆ ದೇಶದ ಶೇ. 90ರಷ್ಟು ಕಚ್ಚಾ ತೈಲ ರಫ್ತನ್ನು ನಿರ್ವಹಿಸುತ್ತದೆ. ಪ್ರಪಂಚದ ಐದನೇ ಒಂದರಷ್ಟು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯ ಸಮೀಪದಲ್ಲೇ ಈ ದ್ವೀಪವಿದೆ. ಈ ಪ್ರದೇಶದಲ್ಲಿ ನಿರಂತರ ಅಡಚಣೆ ಉಂಟಾದರೆ ಜಾಗತಿಕ ಇಂಧನ ಬೆಲೆಗಳು ತೀವ್ರವಾಗಿ ಏರಿಕೆಯಾಗುವ ಮತ್ತು ಅಂತರರಾಷ್ಟ್ರೀಯ ಪೂರೈಕೆ ಸರಪಳಿಗೆ ಹಾನಿಯಾಗುವ ಸಾಧ್ಯತೆಯಿದೆ.
ತೈಲ ಸೌಲಭ್ಯಗಳ ನಾಶ ಮಾಡಿಲ್ಲ
ವೈಟ್ ಹೌಸ್ ಮಾಹಿತಿಯ ಪ್ರಕಾರ, ಖಾರ್ಗ್ ದ್ವೀಪದಲ್ಲಿರುವ ಸೇನಾ ಮೂಲಸೌಕರ್ಯಗಳನ್ನು ಮಾತ್ರ ಅಮೆರಿಕ ಪಡೆಗಳು ಗುರಿಯಾಗಿಸಿದ್ದು, ತೈಲ ಸೌಲಭ್ಯಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿಲ್ಲ. "ಮಾನವೀಯತೆಯ ದೃಷ್ಟಿಯಿಂದ ನಾನು ದ್ವೀಪದ ತೈಲ ಮೂಲಸೌಕರ್ಯಗಳನ್ನು ನಾಶ ಮಾಡದಿರಲು ನಿರ್ಧರಿಸಿದ್ದೇನೆ, ಆದರೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕಡಲ ಸಂಚಾರಕ್ಕೆ ಅಡ್ಡಿಪಡಿಸಿದರೆ ಈ ನಿರ್ಧಾರ ಬದಲಾಗಬಹುದು," ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಬೆದರಿಕೆ ಮತ್ತು ತಿರುಗೇಟು
ಇರಾನ್, ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಬೆದರಿಕೆ ಹಾಕಿದ್ದು, ಅಮೆರಿಕ ಪಡೆಗಳಿಗೆ ಆಶ್ರಯ ನೀಡಿರುವ ಯುಎಇ (ದುಬೈನ ಜೆಬೆಲ್ ಅಲಿ, ಅಬುಧಾಬಿಯ ಖಲೀಫಾ ಬಂದರು) ಸೇರಿದಂತೆ ನೆರೆಯ ರಾಷ್ಟ್ರಗಳ ಮೇಲೂ ದಾಳಿ ನಡೆಸುವುದಾಗಿ ಎಚ್ಚರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸಲು ಯುದ್ಧನೌಕೆಗಳನ್ನು ಕಳುಹಿಸುವಂತೆ ಹಾಗೂ ಅಮೆರಿಕದೊಂದಿಗೆ ಕೈಜೋಡಿಸುವಂತೆ ಗಲ್ಫ್ ತೈಲವನ್ನು ಅವಲಂಬಿಸಿರುವ ಪ್ರಮುಖ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

