![Donald Trump: ಉಕ್ಕು ಮತ್ತು ಅಲ್ಯೂಮಿನಿಯಂ ಆಮದು ಮೇಲೆ 25% ತೆರಿಗೆ; ಟ್ರಂಪ್ ಘೋಷಣೆ Donald Trump: ಉಕ್ಕು ಮತ್ತು ಅಲ್ಯೂಮಿನಿಯಂ ಆಮದು ಮೇಲೆ 25% ತೆರಿಗೆ; ಟ್ರಂಪ್ ಘೋಷಣೆ](https://karnataka.thefederal.com/h-upload/2025/02/10/511744-donald-trump-9.webp)
Donald Trump: ಉಕ್ಕು ಮತ್ತು ಅಲ್ಯೂಮಿನಿಯಂ ಆಮದು ಮೇಲೆ 25% ತೆರಿಗೆ; ಟ್ರಂಪ್ ಘೋಷಣೆ
Donald Trump: ಅಮೆರಿಕಕ್ಕೆ ಉಕ್ಕು ರಫ್ತು ಮಾಡುವ ದೇಶಗಳ ಪೈಕಿ ಭಾರತವೂ ಒಂದು. ಹೀಗಾಗಿ ಇದರ ಪರಿಣಾಮ ಭಾರತಕ್ಕೂ ತಟ್ಟಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ವಾಷಿಂಗ್ಟನ್: ಅಮೆರಿಕ ಆಮದು ಮಾಡುವ ಎಲ್ಲ ಉಕ್ಕು ಮತ್ತು ಅಲುಮಿನಿಯಂಗಳಿಗೆ ಶೇಕಡಾ 25ರಷ್ಟು ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮೇಕ್ಸಿಕೋ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳ ಮೇಲೆ ಈ ಶೇಕಡಾವಾರು ಸುಂಕ ಅನ್ವಯವಾಗಲಿದೆ ಎಂದು ಹೇಳಿದ್ದಾರೆ. ಈ ವಾರದಲ್ಲಿ ಮತ್ತಷ್ಟು ವಸ್ತುಗಳ ಆಮದು ತೆರಿಗೆಗಳು ಜಾರಿಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕಕ್ಕೆ ಉಕ್ಕು ರಫ್ತು ಮಾಡುವ ದೇಶಗಳ ಪೈಕಿ ಭಾರತವೂ ಒಂದು. ಹೀಗಾಗಿ ಇದರ ಪರಿಣಾಮ ಭಾರತಕ್ಕೂ ತಟ್ಟಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
"ಯಾವುದೇ ಉಕ್ಕು ಅಮೆರಿಕಾದೊಳಗೆ ಬಂದರೆ ಶೇಕಡಾ 25 ತೆರಿಗೆ ವಿಧಿಸಲಾಗುವುದು," ಎಂದು ಟ್ರಂಪ್ ಭಾನುವಾರ ಫ್ಲೊರಿಡಾದಿಂದ ನ್ಯೂ ಓರ್ಲೀನ್ಸ್ ಗೆ ಪ್ರಯಾಣಿಸುವಾಗ ಪತ್ರಕರ್ತರಿಗೆ ತಿಳಿಸಿದ್ದಾರೆ.
ಅಲ್ಯೂಮಿನಿಯಂ ಮೇಲಿನ ತೆರಿಗೆ ಕುರಿತು ಕೇಳಿದಾಗ, "ಅಲ್ಯೂಮಿನಿಯಂ ಕೂಡ ಸೇರಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಶುಲ್ಕ ಎಲ್ಲರಿಗೂ ಅನ್ವಯ
ಮೆಕ್ಸಿಕೋ ಮತ್ತು ಕೆನಡಾ ಕೂಡ ಈ ತೆರಿಗೆಗಳ ವ್ಯಾಪ್ತಿಗೆ ಒಳಗಾಗುತ್ತವೆಯಾ ಎಂದು ಕೇಳಿದಾಗ, "ಎಲ್ಲರಿಗೂ ಅನ್ವಯವಾಗಲಿದೆ" ಎಂದು ಹೇಳಿದ್ದಾರೆ. ಆದರೆ, ಈ ತೆರಿಗೆಗಳು ಯಾವಾಗ ಜಾರಿಗೆ ಬರಲಿವೆ ಎಂಬುದರ ಬಗ್ಗೆ ವಿವರ ನೀಡಿಲ್ಲ.
ಅಮೇರಿಕಾ ತನ್ನ ಅಲ್ಯೂಮಿನಿಯಂ ಆಮದುಗಳಿಗೆ ಕೆನಡಾ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ಅವಲಂಬಿತವಾಗಿದೆ. ಉಕ್ಕಿನ ಆಮದು ಹೆಚ್ಚಿಲ್ಲ. ಆದರೆ ಪವನ ಶಕ್ತಿ ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಅವಶ್ಯಕವಾಗಿರುವ ವಿಶೇಷ ಶ್ರೇಣಿಯ ಉಕ್ಕು ಪೂರೈಸುವಲ್ಲಿ ಸಮಸ್ಯೆ ಎದುರಾಗಿದೆ.
ಅಮೆರಿಕಾದ ಉಕ್ಕು ಉದ್ಯಮವು ಕಳೆದ ವರ್ಷದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕೆಲವು ಉದ್ಯಮಿಗಳು ಉಕ್ಕಿನ ಆಮದು ಹೆಚ್ಚಾಗಿರುವುದರಿಂದ ತಮ್ಮ ಆದಾಯ ಕುಸಿತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಭಾರತದ ಮೇಲಿನ ಪರಿಣಾಮ ದೊಡ್ಡದಾಗದು. ಏಕೆಂದರೆ ಅಮೆರಿಕಗೆ ಹೆಚ್ಚು ಪ್ರಮಾಣದಲ್ಲಿ ಉಕ್ಕು ಅಥವಾ ಅದರ ಉತ್ಪನ್ನಗಳನ್ನು ರಫ್ತು ಮಾಡುತ್ತಿಲ್ಲ.
ಜಪಾನ್‌ನ ಯುಎಸ್ ಸ್ಟೀಲ್ ಖರೀದಿಗೆ ವಿಳಂಬ
ಜಪಾನ್‌ನ ನಿಪ್ಪಾನ್ ಸ್ಟೀಲ್ ಕಾರ್ಪ್, ಅಮೇರಿಕಾದ ಯುಎಸ್ ಸ್ಟೀಲ್ ಕಂಪನಿಯನ್ನು ಖರೀದಿಸಲು 14.1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯತ್ನಿಸುತ್ತಿದೆ. ಆದರೆ ತೆರಿಗೆಗಳ ಬದಲಾವಣೆ ಬಳಿಕ ಈ ಪ್ರಕ್ರಿಯೆ ನಿಂತಿದೆ. ಆದಾಗ್ಯೂ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಶಿಗೆರು ಇಶಿಬಾ ಅವರ ನಡುವಿನ ಸಭೆಯ ನಂತರ, ನಿಪ್ಪಾನ್ ಸ್ಟೀಲ್ ಕಂಪನಿಯು ಯುಎಸ್ ಸ್ಟೀಲ್ ಕಂಪನಿಯಲ್ಲಿ ಹೂಡಿಕೆ ಮಾಡಲು ನಿರ್ಧರಿಸುತ್ತಿರುವುದಾಗಿ ತಿಳಿದು ಬಂದಿದೆ.
ಪರಸ್ಪರ ತೆರಿಗೆಗಳ ಘೋಷಣೆ
ಟ್ರಂಪ್ ಮಂಗಳವಾರ ಅಥವಾ ಬುಧವಾರ "ಪರಸ್ಪರ ತೆರಿಗೆ"ಗಳನ್ನು ಘೋಷಿಸಲಿದ್ದಾರೆ. ಇತರ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದ್ದರೆ, ಅಮೇರಿಕ ಕೂಡ ಅದೇ ರೀತಿಯ ಸುಂಕ ವಿಧಿಸಲಿದೆ.
"ಅಮೇರಿಕಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಿಗೆ ನಾವು ಪರಸ್ಪರ ತೆರಿಗೆ ವಿಧಿಸುತ್ತೇವೆ. ಇದು ಎಲ್ಲರಿಗೂ ಪ್ರಯೋಜನಕಾರಿ," ಎಂದು ಟ್ರಂಪ್ ಹೇಳಿದರು.