ಭಾರತ-ಪಾಕ್ ಕದನ ವಿರಾಮಕ್ಕೆ ಮಧ್ಯಸ್ಥಿಕೆ ಹೇಳಿಕೆ : ಟ್ರಂಪ್​​  ವಿರುದ್ಧ ಅಮೆರಿಕದ ಮಾಜಿ  ಭದ್ರತಾ ಸಲಹೆಗಾರ ಬೋಲ್ಟನ್ ಕಿಡಿ
x

ದೊನಾಲ್ಡ್‌ ಟ್ರಂಪ್‌ 

ಭಾರತ-ಪಾಕ್ ಕದನ ವಿರಾಮಕ್ಕೆ ಮಧ್ಯಸ್ಥಿಕೆ ಹೇಳಿಕೆ : ಟ್ರಂಪ್​​ ವಿರುದ್ಧ ಅಮೆರಿಕದ ಮಾಜಿ ಭದ್ರತಾ ಸಲಹೆಗಾರ ಬೋಲ್ಟನ್ ಕಿಡಿ

ಏಪ್ರಿಲ್ 2018 ರಿಂದ ಸೆಪ್ಟೆಂಬರ್ 2019 ರವರೆಗೆ ಜಾನ್ ಬೋಲ್ಟನ್ ಟ್ರಂಪ್ ಆಡಳಿತಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು. ಟ್ರಂಪ್ ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳುವಲ್ಲಿ ಬೋಲ್ಟನ್‌ ಪ್ರಮುಖ ಪಾತ್ರ ವಹಿಸಿದರು.


ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾವೇ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ನೀಡುತ್ತಿರುವ ಹೇಳಿಕೆಗೆ, ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಜಾನ್ ಬೋಲ್ಟನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಟ್ರಂಪ್‌ಗೆ ಕ್ರೆಡಿಟ್ ತೆಗೆದುಕೊಳ್ಳುವ ಅಭ್ಯಾಸವಿದೆ" ಎಂದು ಬೋಲ್ಟನ್ ಆರೋಪಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮತ್ತೊಮ್ಮೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾವು ಮಧ್ಯವರ್ತಿ ಎಂದು ಪುನರುಚ್ಚರಿಸಿದ್ದರು. ಉಲ್ಬಣಗೊಳ್ಳುತ್ತಿದ್ದ ಯುದ್ಧವನ್ನು ತಾವು 'ವ್ಯಾಪಾರ'ದ ಮೂಲಕ ಕೊನೆಗೊಳಿಸಿದ್ದೇವೆ ಎಂದು ಅವರು ಹೇಳಿದ್ದರು. .

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಂಪ್ "ಭಾರತ ಪಾಕಿಸ್ತಾನ ಯುದ್ಧವನ್ನು ನಾನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದೆ. ನಾವು ಭಾರತ ಮತ್ತು ಪಾಕಿಸ್ತಾನದೊಂದಿಗೆ ದೊಡ್ಡ ಒಪ್ಪಂದ ಮಾಡುತ್ತಿದ್ದೇವೆ" ಎಂದು ಅವರು ಹೇಳಿಕೆ ನೀಡಿದ್ದರು.

ಈ ಹಿಂದೆ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಅಧಿಕೃತವಾಗಿ ಬಹಿರಂಗಪಡಿಸುವ ಮೊದಲೇ. ತಮ್ಮ ಟ್ರುತ್ ಸೋಷಿಯಲ್ ಮಿಡಿಯಾ ಖಾತೆಯಲ್ಲಿ "ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಸುದೀರ್ಘ ಮಾತುಕತೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆ ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು," ಎಂದು ಬರೆದುಕೊಂಡಿದ್ದರು.

ಕಾಶ್ಮೀರ ದ್ವಿಪಕ್ಷೀಯ ವಿಷಯ: ಭಾರತದ ಸ್ಪಷ್ಟನೆ

ಭಾರತ-ಪಾಕಿಸ್ತಾನ ಕದನ ವಿರಾಮವನ್ನು ಕೇವಲ 'ಮಧ್ಯಸ್ಥಿಕೆ' ವಹಿಸಿದ್ದಲ್ಲದೆ, 'ಪರಮಾಣು ಯುದ್ಧ'ವನ್ನು ತಡೆದದ್ದು ತಾವೇ ಎಂದು ಅಮೆರಿಕ ಅಧ್ಯಕ್ಷರು ಎಲ್ಲೆಡೆ ಪ್ರತಿಪಾದಿಸುವುದನ್ನು ವಿದೇಶಾಂಗ ಇಲಾಖೆ ವಿರೋಧಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಾರತೀಯ ಅಧಿಕಾರಿಗಳು ಕಾಶ್ಮೀರ ಸಮಸ್ಯೆ 'ದ್ವಿಪಕ್ಷೀಯ ವಿಷಯ, ಆದ್ದರಿಂದ ಈ ಒಪ್ಪಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತ್ರ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

'ಆಪರೇಷನ್ ಸಿಂದೂರ್' ಸಮಯದಲ್ಲಿ ಅಥವಾ ನಂತರ ಭಾರತ ಮತ್ತು ಯುಎಸ್ ನಾಯಕರ ನಡುವೆ ವ್ಯಾಪಾರದ ವಿಚಾರ ಚರ್ಚೆಯಾಗಿಲ್ಲ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.

ಟ್ರಂಪ್ ವಿರುದ್ಧ ಜಾನ್ ಬೋಲ್ಟನ್ ವಾಗ್ದಾಳಿ

"ಟ್ರಂಪ್ ಎಲ್ಲದಕ್ಕೂ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ. ಇದು ಅವರ ವಿಶಿಷ್ಟ ನಡವಳಿಕೆ ಮತ್ತು ಟ್ರಂಪ್ ಅವರ ಹೇಳಿಕೆಗೆ ಪೂರಕವಾಗಿ ಅಗತ್ಯ ಮಾಹಿತಿಗಳು ಇಲ್ಲ. ತಮ್ಮ ಗಮನ ಸೆಳೆಯಲು ಅವರು ಈ ರೀತಿಯ ಹೇಳಿಕೆ ನೀಡುತ್ತಾರೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

"ಟ್ರಂಪ್ ಅವರು ಪ್ರಧಾನಿ ಮೋದಿಗೆ ಕರೆ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ಮಾತನಾಡಿದ್ದರು. ಇತರ ದೇಶಗಳೂ ತಮ್ಮಿಂದ ಏನು ಸಾಧ್ಯವೋ ಎಂಬುದನ್ನು ನೋಡಲು ಕರೆ ಮಾಡಿರಬಹುದು. ಆದರೆ, ಟ್ರಂಪ್‌ಗೆ ವಿಶೇಷ ಅಭ್ಯಾಸ. ಉಳಿದವರೆಲ್ಲರೂ ಕ್ರೆಡಿಟ್ ತೆಗೆದುಕೊಳ್ಳುವ ಮೊದಲು ತಾವೇ ತೆಗೆದುಕೊಳ್ಳುತ್ತಾರೆ. ಬಹುಶಃ ಅದು ಉಳಿದವರಿಗೆ ಕಿರಿಕಿರಿ ಉಂಟುಮಾಡಬಹುದು," ಎಂದು ಅವರು ಹೇಳಿದರು.

ಜಾನ್ ಬೋಲ್ಟನ್ ಯಾರು?

ಏಪ್ರಿಲ್ 2018ರಿಂದ ಸೆಪ್ಟೆಂಬರ್ 2019ರವರೆಗೆ ಜಾನ್ ಬೋಲ್ಟನ್ ಟ್ರಂಪ್ ಆಡಳಿತಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು. ಟ್ರಂಪ್ ಇರಾನ್ ಪರಮಾಣು ಒಪ್ಪಂದವನ್ನು ಅಮೆರಿಕ ಹಿಂತೆಗೆದುಕೊಳ್ಳುವಲ್ಲಿ ಬೋಲ್ಟನ್ ಮುಖ್ಯ ಪಾತ್ರ ವಹಿಸಿದ್ದರು. ಆದರೆ ಟ್ರಂಪ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಬಳಿಕ ಅವರನ್ನು ಟ್ರಂಪ್ ಆಡಳಿತದಿಂದ ಕೈಬಿಡಲಾಗಿತ್ತು. ಅವರು ಟ್ರಂಪ್ ಆಡಳಿತದ ಅವಧಿಯಲ್ಲಿನ ತಮ್ಮ ಅನುಭವದ ಕುರಿತು 'ದಿ ರೂಮ್ ವೇರ್ ಇಟ್ ಹ್ಯಾಪನ್ಡ್' ಎಂಬ ಶೀರ್ಷಿಕೆಯಡಿ 2020 ರಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದ್ದರು, ಇದು ಅತಿ ಹೆಚ್ಚು ಮಾರಾಟವಾಗಿತ್ತು.

ಆಪರೇಷನ್ ಸಿಂದೂರ್ ಪರಿಣಾಮಗಳು

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರೇರಣೆ ನೀಡಿದ ಪಾಕಿಸ್ತಾನದೊಂದಿಗೆ ಪ್ರತೀಕಾರ ತೀರಿಸಲು ಭಾರತ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿತ್ತು. ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಹಲವಾರು ವಿಫಲ ಪ್ರತೀಕಾರದ ದಾಳಿ ನಡೆಸಿತ್ತು. ಬಳಿಕ ಸಂಘರ್ಷ ನಿಲ್ಲಿಸಲು ಎರಡು ಕಿತ್ತಾಟ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

Read More
Next Story