ಗುಂಡೇಟಿನಿಂದ ಟ್ರಂಪ್ ಚೇತರಿಸಿಕೊಳ್ಳುತ್ತಿದ್ದಾರೆ: ವೈದ್ಯರು ಹೇಳಿಕೆ
ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಹತ್ಯೆಯ ಪ್ರಯತ್ನ ನಡೆದಿತ್ತು. ಈ ಸಂದರ್ಭದಲ್ಲಿ ಉಂಟಾದ ಗುಂಡಿನ ಗಾಯದಿಂದ ಟ್ರಂಪ್ ನಿರೀಕ್ಷೆಯಂತೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಬಂದೂಕುಧಾರಿ ಯುವಕನೊಬ್ಬ ಟ್ರಂಪ್ ಮೇಲೆ ಗುಂಡುಗಳನ್ನು ಹಾರಿಸಿದಾಗ, ಅವರ ಬಲ ಕಿವಿಗೆ ಗಾಯವಾಗಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡಿನ ದಾಳಿಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. 20 ವರ್ಷದ ಶಂಕಿತ ಶೂಟರ್‌ನನ್ನು ರಹಸ್ಯ ಸೇವೆಯ ಸದಸ್ಯರೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ.
ಟ್ರಂಪ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಡಾ. ರೋನಿ ಎಲ್ ಜಾಕ್ಸನ್ ಅವರು ಟಿಪ್ಪಣಿಯೊಂದು ಬರೆದಿದ್ದಾರೆ. ʻʻಟ್ರಂಪ್ ಅವರ ಹತ್ಯೆಯ ಪ್ರಯತ್ನದ ನಂತರ ಅವರ ಯೋಗಕ್ಷೇಮದ ಬಗ್ಗೆ ಇಡೀ ವಿಶ್ವದಂತೆ ಅವರು ತುಂಬಾ ಕಾಳಜಿ ವಹಿಸಿದ್ದಾರೆ. ಆದ್ದರಿಂದ, ಟ್ರಂಪ್ ಅವರನ್ನು ನ್ಯೂಜೆರ್ಸಿಯ ಬೆಡ್‌ಮಿನ್‌ಸ್ಟರ್‌ನಲ್ಲಿ ವೈಯಕ್ತಿಕವಾಗಿ ಭೇಟಿಯಾಗಿರುವೆ. ಅವರಿಗಾದ ಗಾಯವನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದೇನೆ. ಅವರೊಂದಿಗೆ ಸದಾ ಇರುತ್ತೇನೆ. ಟ್ರಂಪ್ ಅವರು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕೊಲೆಗಡುಕನು ಹೆಚ್ಚಿನ ಶಕ್ತಿಯ ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ ಗುಂಡು ಅವರ ಬಲ ಕಿವಿಗೆ ಬಿದ್ದಿದ್ದರಿಂದ ತೀವ್ರ ಗಾಯಗೊಂಡಿದೆʼʼ ಎಂದು ವೈದ್ಯರು ಹೇಳಿದ್ದಾರೆ.
ಆ ಗುಂಡು ಟ್ರಂಪ್ ತಲೆಗೆ ತಾಗಲು ಕಾಲು ಇಂಚಿನಷ್ಟು ಮಾತ್ರ ಕಡಿಮೆ ಇತ್ತು ಮತ್ತು ಅವರ ಬಲ ಕಿವಿಯ ಮೇಲ್ಭಾಗಕ್ಕೆ ಬಡಿದು, 2-ಸೆಂ ಅಗಲದ ಗಾಯವನ್ನು ಉಂಟುಮಾಡಿತು, ಅದು ಕಿವಿಯ ಕಾರ್ಟಿಲ್ಯಾಜಿನಸ್ ಮೇಲ್ಮೈಗೆ ವಿಸ್ತರಿಸಿದೆ. ಆರಂಭದಲ್ಲಿ, ಗಮನಾರ್ಹವಾದ ರಕ್ತಸ್ರಾವವಿತ್ತು, ನಂತರ ಸಂಪೂರ್ಣ ಮೇಲ್ಭಾಗದ ಕಿವಿಯಲ್ಲಿ ಊತ ಕಾಣಿಸಿಕೊಂಡಿತುʼʼ ಎಂದು ಡಾ ಜಾಕ್ಸನ್ ಹೇಳಿದರು.
ʻಗಾಯ ಗುಣವಾಗಲು ಆರಂಭʼ
ʻʻಅಂದಿನಿಂದ ಊತವು ಕಡಿಮೆಯಾಗುತ್ತಿದೆ ಮತ್ತು ಸರಿಯಾಗಿ ವಾಸಿಯಾಗಲು ಪ್ರಾರಂಭಿಸಿದೆ. ಕಿವಿಗೆ ಡ್ರೆಸ್ಸಿಂಗ್ ಅಗತ್ಯವಿರುವ ಸ್ಥಳದಲ್ಲಿ ಇನ್ನೂ ಸ್ವಲ್ಪ ರಕ್ತಸ್ರಾವವಿದೆ. ಯಾವುದೇ ಹೊಲಿಗೆಯ ಅಗತ್ಯವಿಲ್ಲʼʼ ಅವರು ಹೇಳಿದರು.
ಟ್ರಂಪ್‌ಗೆ ಆರಂಭದಲ್ಲಿ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿರುವ ಬಟ್ಲರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು, ʻʻಅವರು ಟ್ರಂಪ್ ಕಿವಿ ಗಾಯಕ್ಕೆ ಅತ್ಯುತ್ತಮ ಚಿಕಿತ್ಸೆ ನೀಡಿದ್ದಾರೆ. ಅವರ ಅತ್ಯುತ್ತಮ ಆರೈಕೆಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಅಗತ್ಯವಿರುವಂತೆ ಸಮಗ್ರ ಶ್ರವಣ ಪರೀಕ್ಷೆ ಸೇರಿದಂತೆ ಹೆಚ್ಚಿನ ಪರೀಕ್ಷೆ ನಡೆಸಿದ್ದಾರೆʼʼ ಎಂದು ಡಾ ಜಾಕ್ಸನ್ ಟಿಪ್ಪಣಿಯಲ್ಲಿ ಬರೆದಿದ್ದಾರೆ.
ʻʻಸಾರಾಂಶದಲ್ಲಿ, ಮಾಜಿ ಅಧ್ಯಕ್ಷ ಟ್ರಂಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರು ಗುಂಡೇಟಿನ ಗಾಯದಿಂದ ನಿರೀಕ್ಷಿಸಿದಂತೆ ಚೇತರಿಸಿಕೊಳ್ಳುತ್ತಿದ್ದಾರೆ ... ಅವರ ಜೀವವನ್ನು ಉಳಿಸಲಾಗಿದೆ ಎಂದು ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವರು ಬದುಕಿಬಂದಿರುವುದು ಒಂದು ಸಂಪೂರ್ಣ ಪವಾಡʼʼ ಎಂದು ಡಾ. ಜಾಕ್ಸನ್ ಹೇಳಿದರು.