
ನಾನು ಸಹಾಯಕ್ಕೆ ರೆಡಿ; ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದ ತಕ್ಷಣ ಪ್ರತಿಕ್ರಿಯಿಸಿದ ಟ್ರಂಪ್
ಈಗಲೇ ಇದು ನಿಲ್ಲಬೇಕು. ಎರಡೂ ದೇಶಗಳೊಂದಿಗೆ ನಮಗೆ ಒಳ್ಳೆಯ ಸಂಬಂಧವಿದೆ. ನಾನು ಏನಾದರೂ ಸಹಾಯ ಮಾಡಬಹುದಾದರೆ, ನಾನು ಇರುತ್ತೇನೆ," ಎಂದು ಭಾರತ-ಪಾಕಿಸ್ತಾನದ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾನು ಏನಾದರೂ ಸಹಾಯ ಮಾಡಬಹುದಾದರೆ ನಾನು ಜತೆಗಿರುತ್ತೇನೆ" ಎಂದು ಹೇಳಿದ್ದಾರೆ. ಎರಡು ದೇಶಗಳ ನಡುವಿನ ಸಂಘರ್ಷವನ್ನು ನಿಲ್ಲಿಸಲು ನಾನು ಸಿದ್ದ ಎಂಬರ್ಥದಲ್ಲಿ ಮಾತನಾಡಿದ್ದಾರೆ.
"ಇದು ತುಂಬಾ ಭಯಾನಕ. ನಾನು ಎರಡೂ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದೇನೆ. ಎರಡನ್ನೂ ಚೆನ್ನಾಗಿ ತಿಳಿದಿದ್ದೇನೆ. ಅವರವರೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಈಗಲೇ ಇದು ನಿಲ್ಲಬೇಕೆಂದು ಆಶಿಸುತ್ತೇನೆ. ಅವರು ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ. ಈಗಲೇ ಇದು ನಿಲ್ಲಬೇಕು. ಎರಡೂ ದೇಶಗಳೊಂದಿಗೆ ನಮಗೆ ಒಳ್ಳೆಯ ಸಂಬಂಧವಿದೆ. ನಾನು ಏನಾದರೂ ಸಹಾಯ ಮಾಡಬಹುದಾದರೆ, ನಾನು ಇರುತ್ತೇನೆ," ಎಂದು ಭಾರತ-ಪಾಕಿಸ್ತಾನದ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ.
ಈ ಮೊದಲು, ಟ್ರಂಪ್, ಈ ಸಂಘರ್ಷವು "ಬಹಳ ಬೇಗನೆ ಕೊನೆಗೊಳ್ಳಲಿ" ಎಂದು ಆಶಿಸಿದ್ದರು. "ಇದು ನಾಚಿಕೆಗೇಡಿನ ಸಂಗತಿ," ಎಂದು ಅವರು ಹೇಳಿದ್ದಾರೆ. "ನಾವು ಓವಲ್ ಕಚೇರಿಗೆ ಬರುವಾಗ ಈ ಸುದ್ದಿ ಕೇಳಿದೆವು. ಕೆಲವು ಜನರಿಗೆ ಈ ಹಿಂದಿನ ಕೆಲವು ಘಟನೆಗಳ ಆಧಾರದ ಮೇಲೆ ಏನೋ ಆಗಲಿದೆ ಎಂದು ತಿಳಿದಿತ್ತು. ಇವರು ದೀರ್ಘಕಾಲದಿಂದ ಹೋರಾಡುತ್ತಿದ್ದಾರೆ. ಶತಮಾನಗಳಿಂದಲೂ ಹೋರಾಡುತ್ತಿದ್ದಾರೆ," ಎಂದು ಟ್ರಂಪ್ ಹೇಳಿದ್ದಾರೆ.
"ಇಲ್ಲ, ಇದು ಬಹಳ ಬೇಗ ಕೊನೆಗೊಳ್ಳಲಿ ಎಂದು ಆಶಿಸುತ್ತೇನೆ," ಎಂದರು.
ಭಾರತವು ಬುಧವಾರ ರಾತ್ರಿಯಿಂದ ಆರಂಭವಾದ ಆಪರೇಷನ್ ಸಿಂದೂರ್‌ನಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಂಜಾಬ್‌ನಲ್ಲಿ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ದಾಳಿ ನಡೆಸಿತು. ಇದು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿತ್ತು, ಆ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು.