
ಮುರಿದು ಬಿದ್ದ ಟ್ರಂಪ್-ಮಸ್ಕ್ ಮದುರ ಬಾಂಧವ್ಯ: ಕಾರಣಗಳು ಹಲವು
ಎಲಾನ್ ಮಸ್ಕ್ ಅವರ ಜನಪ್ರಿಯತೆಯ ಗ್ರಾಫ್ ಇಳಿಯುತ್ತಿರುವುದು ರಿಪಬ್ಲಿಕನ್ನರನ್ನು ರಾಜಕೀಯವಾಗಿ ಘಾಸಿಗೊಳಿಸಿರುವುದು ಒಂದು ಕಡೆಯಾದರೆ ಅವರದೇ ಉದ್ಯಮ ಟೆಲ್ಸಾ ಕೂಡ ಕುಸಿಯುತ್ತಿರುವುದು ಚಿಂತೆಗೆ ಕಾರಣವಾಗಿದೆ. ಇದು ಮಸ್ಕ್-ಟ್ರಂಪ್ ಹನಿಮೂನ್ ಮುಗಿದಿದೆ ಎಂಬುದರ ಸೂಚನೆಯೇ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಕ್-ಶತಕೋಟ್ಯಧಿಪತಿ ಎಲಾನ್ ಮಸ್ಕ್ ಅವರ ನಡುವಿನ ಸ್ನೇಹದ ತೂಗುಯ್ಯಾಲೆಗೆ ಈಗಲಾದರೂ ಬ್ರೇಕ್ ಬಿದ್ದಿದೆ.
ಮಸ್ಕ್ ಯಾವತ್ತು ಸರ್ಕಾರಿ ದಕ್ಷತೆ ವಿಭಾಗ (DOGE)ದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರೋ ಆವತ್ತಿನಿಂದಲೇ ಅವರು ಅಮೆರಿಕ ಮತ್ತು ಅದರಾಚೆಗಿನ ಜನರ ಪಾಲಿಗೆ ಹೆಚ್ಚು ಇಷ್ಟಪಡದ ವ್ಯಕ್ತಿಗಳಲ್ಲಿ ಒಬ್ಬರಾದರು. ಜೊತೆಗೆ ಅದು ದಿನದಿಂದ ದಿನಕ್ಕೆ ರಿಪಬ್ಲಿಕನ್ನರ ಪಾಲಿಗೆ ರಾಜಕೀಯವಾಗಿ ಹಾನಿಮಾಡುತ್ತಿತ್ತು. ಇನ್ನೊಂದು ಕಡೆ ಮಸ್ಕ್ ತಳೆದ ರಾಜಕೀಯ ನಿಲುವು ಅವರದೇ ಉದ್ಯಮದ ಕೀಲು ಮುರಿಯುವಂತೆ ಮಾಡಿತ್ತು.
ತಾವು ಧರಿಸಿದ ಹ್ಯಾಟನ್ನು ಚಕಚಕನೆ ಬದಲಿಸಿದಂತೆ (ಅಥವಾ ತಮ್ಮದೇ ಟ್ರೇಡ್-ಮಾರ್ಕ್ ಇರುವ ಬೇಸ್-ಬಾಲ್ ಟೊಪ್ಪಿ) DOGE ಮೂಲಕ ಅದೆಷ್ಟೋ ಸಿಬ್ಬಂದಿಯನ್ನು ಫಟಾಫಟ್ ಕಿತ್ತೆಸೆದರು, ಇಡೀ ವಿಭಾಗಗಳನ್ನೇ ಇನ್ನಿಲ್ಲದಂತೆ ಮಾಡಿದರು, ಫೆಡರಲ್ ಉದ್ಯೋಗಿಗಳನ್ನು ತಮ್ಮ ವೈಯಕ್ತಿಕ ಸಿಬ್ಬಂದಿಯೇನೋ ಎಂಬಂತೆ ಕೂಗಾಡಿದರು. ಕಳೆದ ವಾರಗಳಲ್ಲಿ ನೀವೇನೇನು ಮಾಡಿದ್ದೀರಿ ಎಂಬುದರ ಡಿಟೇಲ್ ಒದಗಿಸಲು ಕೇವಲ 48 ಗಂಟೆಗಳ ಕಾಲಾವಕಾಶ ಕೊಡುತ್ತೇನೆ ಎಂದು ತಾಕೀತು ಮಾಡಿದರು.
ಗರಗಸ ಹಿಡಿದರು!
“ಮಸ್ಕ್ ಉಳಿ ಹಿಡಿದು ಬರಲಿಲ್ಲ, ಗರಗಸವನ್ನೇ ಹಿಡಿದು ಬಂದರು!” ಹೀಗೆಂದು DOGEನಲ್ಲಿ ಮಸ್ಕ್ ಅವರ ಸಹ-ನಾಯಕನಾಗಬೇಕಿದ್ದ ಉದ್ಯಮಿ-ರಾಜಕಾರಣಿ ವಿವೇಕ್ ರಾಮಸ್ವಾಮಿ ಕಳೆದ ವರ್ಷ ಹೇಳಿದ ಮಾತು ನಿಜವಾಗಿತ್ತು. ಕಳೆದ ಫೆಬ್ರುವರಿ ತಿಂಗಳಲ್ಲಿ ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ ನಡೆದಾಗ ಮಸ್ಕ್ ತಮ್ಮದೇ ಆದ ಅನುಕರಣೀಯ ಶೈಲಿಯಲ್ಲಿ ಅಕ್ಷರಶಃ ಕೆಂಪು ಲೋಹದ ಗರಗಸವನ್ನೇ ಝಳಪಿಸಿದ್ದರು.
“ಇದು ಅಧಿಕಾರಶಾಹಿಗೇ ಗರಗಸ!” ಎಂದು ಅವರು ಘೋಷಿಸಿದ್ದರು. ಆ ಮೂಲಕ ಅವರು ತಮ್ಮ DOGE ಸಹಭಾಗಿಗಳಿಗೇ ಮರ್ಮಾಘಾತ ಉಂಟುಮಾಡಿದ್ದರು.
ಟ್ರಂಪ್ ಆಗಿನ್ನೂ ಅಮೆರಿಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರಲಿಲ್ಲ. ಆಗಲೇ ಅವರು ತಮ್ಮ ಟೀಮ್ ಘೋಷಣೆ ಮಾಡಿ ಕೇವಲ 69 ದಿನಗಳು ಕಳೆದಿದ್ದವು. ರಾಮಸ್ವಾಮಿ ಅವರು ಈ DOGE ಸಹವಾಸ ಬೇಡವೆಂದು ದೂರ ಉಳಿದರು. ಆಗ ಅವರು ಆಯ್ಕೆ ಮಾಡಿಕೊಂಡಿದ್ದು 2026ರಲ್ಲಿ ಓಹಿಯೋ ಗವರ್ನರ್ ಆಗುವುದು. ಈ ಅನೌಪಚಾರಿಕ ನಿರ್ಗಮನದಲ್ಲಿ ಮಸ್ಕ್ ಯಾವ ಪಾತ್ರ ಇಲ್ಲ ಎಂದು ಅಮೆರಿಕದ ಮಾಧ್ಯಮಗಳು ಬರೆದವು.
ಬಹುಷ ಮಸ್ಕ್ ಬಹಳ ದೊಡ್ಡ ಶಾಕ್-ಟ್ರೀಟ್ಮೆಂಟ್ ಕೊಟ್ಟಿದ್ದು ಫೆಬ್ರುವರಿ ತಿಂಗಳಲ್ಲಿ. ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿರುವ ಅಮೆರಿಕದ ಸಂಸ್ಥೆ (USAID)ಯನ್ನು ‘ಕೆಲಸಕ್ಕೆ ಬಾರದ ಹುಳುಗಳ ಗೂಡು, ಅದು ದುರಸ್ತಿಗೂ ಮೀರಿದ್ದು’ ಎಂದು ಘೋಷಿಸಿದ್ದು. ‘ಅದೊಂದು ಕ್ರಿಮಿನಲ್ ಸಂಸ್ಥೆ. ಅದಕ್ಕೀಗ ಅಂತ್ಯ ಕಾಲ ಸಮೀಪಿಸಿದೆ’ ಎಂದು ಹೇಳಿದ ಮಸ್ಕ್ ಕೆಲವು ವಿಫಲ ಪ್ರಯತ್ನಗಳ ಬಳಿಕ ಕೊನೆಗೂ ಮುಗಿಸಿಯೇ ಬಿಟ್ಟರು.
ಟ್ರಂಪ್ ಕೊಟ್ಟ ಅಚಲ ಬೆಂಬಲ
ಇಷ್ಟೆಲ್ಲ ಆದರೂ ಟ್ರಂಪ್ ಮಾತ್ರ ಮುಗುಮ್ಮಾಗಿ ಮಸ್ಕ್ ಬೆಂಬಲಕ್ಕೆ ನಿಂತರು. ಆತ ಮಾಡಿದ್ದಕ್ಕೆಲ್ಲ ದನಿಗೂಡಿಸಿದರು. ಅನೇಕರು ಈ ವಿಲಕ್ಷಣ ಟೆಕ್ ಮುಖ್ಯಸ್ಥನನ್ನು ‘ಅಧ್ಯಕ್ಷ ಮಸ್ಕ್’ ಎಂದು ಅಣಕಿಸಿದರು. ‘ಟ್ರಂಪ್ ಕೇವಲ ಕಾಗದದ ಹುಲಿ, ಅಸಲಿ ಸೂತ್ರಧಾರ ಮಸ್ಕ್’ ಎಂದು ಹಲವರು ಪರೋಕ್ಷವಾಗಿ ಟೀಕಿಸಿದರೂ ಟ್ರಂಪ್ ಜಗ್ಗಲಿಲ್ಲ. ‘ಮಸ್ಕ್ ನನ್ನ ಅನುಮತಿ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ಮಾಡಬಾರದು’ ಎಂದರಾದರೂ USAID ನಲ್ಲಿ ಮಸ್ಕ್ ಮಾಡಿದ್ದನ್ನು ಸಮರ್ಥಿಸಿಕೊಂಡರು. ‘ಆ ಸಂಸ್ಥೆ ಹುಚ್ಚರ ಗುಂಪಿನಿಂದ ನಡೆಯುತ್ತಿದೆ. ಅವರೆನ್ನೆಲ್ಲ ನಾವು ಹೊರದಬ್ಬುತ್ತಿದ್ದೇವೆ’ ಎಂದು ಬೆನ್ನುತಟ್ಟಿದರು.
ಅದಾಗಿ ತಿಂಗಳು ಕಳೆಯುವುದರೊಳಗೆ ಮಸ್ಕ್ ಮತ್ತು DOGEನಿಂದ ಮತ್ತಷ್ಟು ಆಘಾತಕಾರಿ ಸುದ್ದಿಗಳು ಬರತೊಡಗಿದವು. ನೂರಾರು ಮಂದಿ ಹವಾಮಾನ ಮುನ್ಸೂಚಕರು ಹಾಗೂ ಫೆಡರಲ್ ನ್ಯಾಷನಲ್ ಓಷಿಯಾನಿಕ್ ಆ್ಯಂಡ್ ಅಟ್ಮಾಸ್ಪಿಯರಿಕ್ ಅಡ್ಮಿನಿಸ್ಟ್ರೇಷನ್ನಿನ ಇತರ ನೌಕರರನ್ನು ಇನ್ನೂ ಪ್ರೊಬೇಷನರಿ ಸ್ಥಿತಿಯಲ್ಲಿರುವಾಗಲೇ ವಜಾಮಾಡಿದರು. ಲಕ್ಷಾಂತರ ಮಂದಿ ಫೆಡರಲ್ ನೌಕರರಿಗೆ ಕಳೆದ ಒಂದು ವಾರದ ಅವಧಿಯಲ್ಲಿ ಏನೆಲ್ಲ ಕೆಲಸಮಾಡಿದ್ದೀರಿ ಎಂಬುದನ್ನು ಮುಂದಿನ 48 ಗಂಟೆಗಳಲ್ಲಿ ವಿವರಣೆ ನೀಡದೇ ಇದ್ದರೆ ಅದನ್ನೇ ರಾಜೀನಾಮೆ ಎಂದು ಪರಿಗಣಿಸಲಾಗುತ್ತದೆ ಎಂದು ಘೋಷಿಸಿದರು.
ಟ್ರಂಪ್ ಮಸ್ಕ್ ಬೆಂಬಲಕ್ಕೆ ನಿಲ್ಲುವುದನ್ನು ಬಿಡಲಿಲ್ಲ. ‘DOGEನ ನೂರಾರು ಶತಕೋಟಿ ಡಾಲರ್ ಗಳಷ್ಟು ವಂಚನೆಯನ್ನು ಪತ್ತೆಮಾಡಿದೆ, ಯಾಕೆಂದರೆ ಫೆಡರಲ್ ವೇತನದ ಚೆಕ್ ಗಳು ಅಸ್ತಿತ್ವದಲ್ಲಿಯೇ ಇಲ್ಲದ ನೌಕರರ ಖಾತೆಗೆ ಹೋಗುತ್ತಿದ್ದವು’ ಎಂದು ಸಮಜಾಯಿಷಿ ಕೊಟ್ಟರು.
ಇಷ್ಟಾಗುವಾಗ ಇಬ್ಬರೂ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಅದರಲ್ಲಿ ಪರಸ್ಪರ ಒಬ್ಬರಿಗೊಬ್ಬರು ಬೆನ್ನುತಟ್ಟಿಕೊಳ್ಳುವುದಕ್ಕೇ ಬಹಳ ಸಮಯವನ್ನು ಮೀಸಲಿಟ್ಟರು. DOGE ಸರ್ಕಾರದಿಂದ ಪೋಲಾಗುತ್ತಿದ್ದ ಖರ್ಚನ್ನು ಗಣನೀಯವಾಗಿ ಕಡಿಮೆಮಾಡಿದೆ, ಇದರಿಂದ ನೂರಾರು ಶತಕೋಟಿ ಡಾಲರ್ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡರು.
ಆದರೆ ಟೆಸ್ಲಾ ಸಿಇಓ ಮಾತ್ರ ಕ್ರಮೇಣ ಎಲ್ಲವನ್ನೂ ದುಸ್ತರಗೊಳಿಸುತ್ತ ಹೋದರು. ಖರ್ಚು ಕಡಿತದ ಗುರಿಯನ್ನು ಅವರು ಗಣನೀಯವಾಗಿ ಎರಡು ಟ್ರಿಲಿಯನ್ ಅಮೆರಿಕನ್ ಡಾಲರ್ ನಿಂದ ಒಂದು ಟ್ರಿಲಿಯನ್ ಗೆ ಮತ್ತು ಆ ಬಳಿಕ 150 ಬಿಲಿಯನ್ ಡಾಲರ್ ಗೆ ಇಳಿಸಿದರು. ತಮ್ಮ ಇಂತಹ ಗುರಿಗಳನ್ನು ಸಾಧಿಸುವ ವಿಚಾರದಲ್ಲಿ ಇರುವ ಪ್ರತಿರೋಧದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಚಾರದ ಸಂದರ್ಭದಲ್ಲಿ ಮಸ್ಕ್ ಫೆಡರಲ್ ಖರ್ಚಿನಲ್ಲಿ ಕನಿಷ್ಠ ಎರಡು ಟ್ರಿಲಿಯನ್ ಡಾಲರ್ ಕಡಿತಗೊಳಿಸಲು DOGEಗೆ ಸಾಧ್ಯವಾಗುತ್ತದೆ ಎಂದು ಹೇಳಿದ್ದರು. DOGE ಈತನಕ 175 ಶತಕೋಟಿ ಡಾಲರ್ ಉಳಿತಾಯ ಮಾಡಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿಕೊಂಡರು.
ಟ್ರಂಪ್ ಮತ್ತು DOGE ಈವರೆಗೆ 2.3 ಮಿಲಿಯನ್ ಫೆಡರಲ್ ನಾಗರಿಕ ಉದ್ಯೋಗಿಗಳಲ್ಲಿ ಸುಮಾರು ಶೇ.12ರಷ್ಟು ಅಂದರೆ ಎರಡು ಲಕ್ಷ ಆರವತ್ತು ಸಾವಿರ ಜನರನ್ನು ವಜಾ ಮಾಡುವ ಬೆದರಿಕೆ, ಅಕಾಲಿಕ ನಿವೃತ್ತಿ ಕೊಡುಗೆಗಳ ಮೂಲಕ ಕಡಿತಗೊಳಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ತಿಳಿಸುತ್ತದೆ.
ಟೆಸ್ಲಾ ವಿರುದ್ಧ ತಿರುಗಿದ ಜನರ ಸಿಟ್ಟು
ಸರ್ಕಾರಿ ಸಂಸ್ಥೆಗಳಲ್ಲಿ ವ್ಯಾಪಕ ವಜಾ ಮತ್ತು ಸಂಸ್ಥೆಗಳನ್ನೇ ಮುಚ್ಚುವ ಕ್ರಮಗಳ ವಿರುದ್ಧ ಕಾನೂನು ಸಮರ ಶುರುವಾದಾಗ ಸರ್ಕಾರ ಮೊಕದ್ದಮೆಗಳಿಂದ ಜರ್ಝರಿತವಾಯಿತು. ಇದರಿಂದ ಕ್ರಮೇಣ ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾದರು. ಅದು ಅವರ ಪಾಲಿಗೆ ಘಾಸಿಯನ್ನುಂಟುಮಾಡಿತು. ಜನರ ಸಿಟ್ಟು ಮಸ್ಕ್ ಅವರ ಪ್ರತಿಷ್ಠಿತ ಸಂಸ್ಥೆ ಟೆಸ್ಲಾ ಮೇಲೆ ಬಿತ್ತು.
ಯೂರೋಪ್ ಮತ್ತು ಅಮೆರಿಕದಾದ್ಯಂತ ಇರುವ ಟೆಸ್ಲಾ ಶೋರೂಂಗಳ ಮುಂದೆ ಪ್ರತಿಭಟನೆಗಳು ಶುರುವಾದವು. ದುಬಾರಿ ವಾಹನಗಳನ್ನು, ಚಾರ್ಜಿಂಗ್ ಸ್ಟೇಷನ್ ಗಳನ್ನು ಧ್ವಂಸಗೊಳಿಸಿದರು. 2025ರ ಮೊದಲ ತ್ರೈಮಾಸಿಕದಲ್ಲಿ ಟೆಸ್ಲಾ ಮಾರಾಟ ಶೇ.13ರಷ್ಟು ಕುಸಿತ ಅನುಭವಿಸಿತು. ಆ ಸಂಸ್ಥೆಯ ಇತಿಹಾಸದಲ್ಲಿಯೇ ಅಷ್ಟೊಂದು ಕುಸಿತವನ್ನು ಅನುಭವಿಸಿರಲಿಲ್ಲ. ಅದರ ಷೇರು ಬೆಲೆ ಶೇ.45ರಷ್ಟು ಪತನ ಹೊಂದಿತು.
ಈ ಕುಸಿತವನ್ನು ತಡೆಯಲು ಮಸ್ಕ್ ಹರಸಾಹಸಪಟ್ಟರು. ಏಪ್ರಿಲ್ ನಲ್ಲಿ ಹೂಡಿಕೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕ್ರಮವಾಗಿ ಇನ್ನು ಮುಂದೆ DOGEಗೆ ಬದಲಾಗಿ ಟೆಸ್ಲಾಗೆ ಹೆಚ್ಚು ಸಮಯ ವಿನಿಯೋಗ ಮಾಡುವುದಾಗಿ ಅವರು ಘೋಷಿಸಿದರು.
ಈ ನಡುವೆ ಟ್ರಂಪ್ ಅವರನ್ನು ಹೊರತುಪಡಿಸಿ ಬೇರೆ ಯಾವ ಸರ್ಕಾರದ ಉನ್ನತ ನಾಯಕರಾರೂ ಮಸ್ಕ್ ಪರ ನಿಲ್ಲಲಿಲ್ಲ. ಅವರು ಮಾಡುತ್ತಿರುವ ಎಲ್ಲ ಪ್ರಯತ್ನಗಳಿಗೆ ರಾಜಕೀಯ ಹಿನ್ನೆಡೆ ಉಂಟಾಯಿತು. ಟ್ರಂಪ್ ಅವರ ಅತ್ಯಂತ ಹಿರಿಯ ಸಂಪುಟ ಸದಸ್ಯರಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಸಾರಿಗೆ ಕಾರ್ಯದರ್ಶಿ ಸೀನ್ ಡಪ್ಪಿ ಮತ್ತು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಜೊತೆ ಮಸ್ಕ್ ನೇರ ಸಂಘರ್ಷಕ್ಕಿಳಿದಿದ್ದರು ಎಂಬ ವರದಿಗಳೂ ಹೊರರಬಿದ್ದವು.
ಎಲ್ಲಕ್ಕಿಂತ ಹೆಚ್ಚಾಗಿ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರನ್ನು ‘ಶತಮೂರ್ಖ’ ಎಂದು ಕರೆದ ಮಸ್ಕ್, ‘ಇಟ್ಟಿಗೆಗಳ ಚೀಲಕ್ಕಿಂತ ದಡ್ಡ!’ ಎಂದು ಲೇವಡಿ ಮಾಡಿದರು.
ಚಡಪಡಿಕೆ ಶುರುವಾಯಿತು
ದಿನ ಕಳೆಯುತ್ತಿದ್ದಂತೆ ಶತಕೋಟಿ ಉದ್ಯಮಿಯನ್ನೇ ಎಲ್ಲರೂ ಹಳಿಯತೊಡಗಿದರು. ವಾಷಿಂಗ್ಟನ್ ಡಿಸಿಯ ಅಸಾಂಪ್ರದಾಯಿಕ ಪರಿಸರದಲ್ಲಿ ಮಸ್ಕ್ ಕೊಳದಿಂದ ಹೊರತೆಗೆದ ಮೀನಿನಂತೆ ಕಾಣುತ್ತಿದ್ದರು. ಅವರ ಕಾರ್ಯನಿರ್ವಹಣೆಯ ರೀತಿ ಎಲ್ಲರಿಗೂ ಅಸಾಂಪ್ರದಾಯಿಕ ಅನಿಸಿತು. ಸರ್ಕಾರದಲ್ಲಿ ಕೆಲಸ ಮಾಡುತ್ತ ಮಾಡುತ್ತ ಅಲ್ಲಿನ ಅನುಭವದಿಂದ ಭ್ರಮನಿರಸನರಾದಂತೆ ಅವರು ಕಾಣುತ್ತಿದ್ದರು.
“ಫೆಡರಲ್ ಅಧಿಕಾರಶಾಹಿಯ ಪರಿಸ್ಥಿತಿ ನಾನು ಅಂದುಕೊಂಡಿದ್ದಕ್ಕಿಂತ ಕೆಟ್ಟದಾಗಿದೆ. ಕೇವಲ ಸಮಸ್ಯೆಗಳಿವೆ ಎಂದು ನಾನು ಭಾವಿಸಿದ್ದೆ. ಆದರೆ ಕನಿಷ್ಠ ವಾಷಿಂಗ್ಟನ್ ಡಿಸಿಯಲ್ಲಿ ವಿಷಯಗಳ ಸುಧಾರಣೆಗೆ ಪ್ರಯತ್ನ ಮಾಡುವುದೂ ಕಠಿಣ ಹೋರಾಟವಾಗಿ ಪರಿಣಮಿಸಿದೆ” ಎಂದು ಎಲಾನ್ ಮಸ್ಕ್ ದ ವಾಷಿಂಗ್ಟನ್ ಪೋಸ್ಟ್ ಗೆ ಹೇಳಿದ್ದರು.
‘ಇನ್ನು ಸಾಕು, ರಾಜಕೀಯವಾಗಿ ತೊಡಗಿಸಿಕೊಳ್ಳುವುದನ್ನು ಕಡಿಮೆಮಾಡಿಬಿಡುತ್ತೇನೆ” ಎಂದು ಅವರು ಇತ್ತೀಚೆಗಷ್ಟೇ ಹೇಳಿ ನಿರಾಳರಾಗಿದ್ದರು.
ಟ್ರಂಪ್ ಗಾಗಿ ಭರ್ಜರಿ ಹೂಡಿಕೆ
ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಪದವಿಗೆಂದು ಕಣಕ್ಕಿಳಿದಾಗ ಎಲಾಕ್ ಮಸ್ಕ್ ಹೂಡಿಕೆ ಮಾಡಿದ್ದು ಬರೋಬ್ಬರಿ 250 ಮಿಲಿಯನ್ ಡಾಲರ್. ವಾಷಿಂಗ್ಟನ್ ನ್ನು ಮರುರೂಪಿಸುವ ಕನಸು ಅವರದ್ದಾಗಿತ್ತು. ಶ್ವೇತಭವನದಲ್ಲಿ ಚುನಾವಣಾ ಪ್ರಚಾರದ ಟೋಪಿಗಳನ್ನು ಧರಿಸಿ ಓಡಾಡಿದ್ದರು. ತಮ್ಮದೇ ಆದ ಪ್ರಚಾರ ಸಭೆಗಳನ್ನು ನಡೆಸಿದ್ದರು. ಅತಿಯಾದ ಖರ್ಚು-ವೆಚ್ಚಗಳನ್ನು ತಪ್ಪಿಸಬೇಕು, ಇದೊಂದು ದೊಡ್ಡ ಬಿಕ್ಕಟ್ಟು ಎಂದೆಲ್ಲ ಮಾತನಾಡಿದ್ದರು.
ಟ್ರಂಪ್ ಅವರನ್ನು ಅತಿಯಾಗಿ ಇಷ್ಟಪಡಲು ಶುರುಮಾಡಿದ ಮಸ್ಕ್, “ಅಧ್ಯಕ್ಷ ಟ್ರಂಪ್ ಅವರನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತ ಹೋದ ಹಾಗೆ ಅವರು ಹೆಚ್ಚು ಹೆಚ್ಚು ಇಷ್ಟವಾಗುತ್ತ ಹೋದರು” ಎಂದು ಹೇಳಿದರು. “ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನವರನ್ನು ಪ್ರೀತಿಸುತ್ತೇನೆ” ಎಂದರು.
ಇದರಿಂದ ಉಬ್ಬಿಹೋಗಿದ್ದ ಡೋನಾಲ್ಡ್ “ಮಸ್ಕ್ ನಿಜವಾಗಿಯೂ ಶ್ರೇಷ್ಠ ಅಮೆರಿಕನ್” ಎಂದು ಹೊಗಳಿದ್ದರು.
ಹಾಗಂತ ಮಸ್ಕ್ ಮತ್ತು ಟ್ರಂಪ್ ಯಾವತ್ತೂ ಉತ್ತಮ ಸ್ನೇಹಿತರಾಗಿರಲಿಲ್ಲ. “ಅವರು (ಟ್ರಂಪ್) ಸೂಕ್ತ ವ್ಯಕ್ತಿ ಅಲ್ಲ ಎಂದು ನನಗೆ ಬಲವಾಗಿ ಅನಿಸುತ್ತಿದೆ. ಅವರು ಅಮೆರಿಕಕ್ಕೆ ಅನುಗುಣವಾದ ಗುಣಗಳನ್ನು ಹೊಂದಿದ್ದಾರೆ ಎಂದು ನನಗನಿಸುತ್ತಿಲ್ಲ” ಎಂದು ಮಸ್ಕ್ 2016ರಲ್ಲಿ ಸಿಎನ್.ಬಿಸಿಗೆ ತಿಳಿಸಿದ್ದರು.
2017ರಲ್ಲಿಯೂ ಟ್ರಂಪ್ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿದಾಗ ಮಸ್ಕ್ ಅಧ್ಯಕ್ಷೀಯ ಸಲಹಾ ಮಂಡಳಿಗೆ ರಾಜೀನಾಮೆ ನೀಡಿ ಹೊರ ಬಂದಿದ್ದರು.
ಹೀಗೆಲ್ಲ ಇಬ್ಬರ ಸಂಬಂಧ ಹಳಸಿಹೋಗಿದ್ದಾಗ 2022ರಲ್ಲಿ ಒಂದು ದಿನ ಟ್ರಂಪ್, ಎಲಾನ್ ಮಸ್ಕ್ ಅತಿ ಶ್ರೇಷ್ಠ ವ್ಯಕ್ತಿ ಎಂದು ಹೇಳಿದ್ದು ಮಾತ್ರವಲ್ಲದೆ ಅವರು ಥಾಮಸ್ ಎಡಿಸನ್ ಗೆ ಹೋಲಿಸಿಬಿಟ್ಟರು.
ಅಂತಿಮವಾಗಿ ಕಳೆದ ಜುಲೈನಲ್ಲಿ ಪೆನ್ಸಿಲ್ವೇನಿಯಾದಲ್ಲಿ ಬಹುದೊಡ್ಡ ಮೆರವಣಿಗೆ ನಡೆದಾಗ ಟ್ರಂಪ್ ಜೊತೆ ಮಸ್ಕ್ ಕೂಡ ವೇದಿಕೆ ಮೇಲೆ ಕಾಣಿಸಿಕೊಂಡರು. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಟೋಪಿಯಲ್ಲಿ ಅವರು ವಿರಾಜಮಾನರಾಗಿದ್ದರು.
ಹೆಚ್ಚಾಯಿತು ಅಂತರ
ಅಧ್ಯಕ್ಷ ಟ್ರಂಪ್ ಮತ್ತು ಮಸ್ಕ್ ನಡುವಿನ ಹನಿಮೂನ್ ಅವಧಿ ಮಾರ್ಚ್ ಹೊತ್ತಿಗೆ ಮುಗಿದಿತ್ತು. ಮಸ್ಕ್ ಬಗ್ಗೆ ಬರುತ್ತಿರುವ ಸುದ್ದಿಗಳಿಂದ ಟ್ರಂಪ್ ಪದೇ ಪದೇ ಕಿರಿಕಿರಿಗೆ ಒಳಗಾಗಲು ಶುರುವಾಗಿದ್ದು ಏಪ್ರಿಲ್ ನಲ್ಲಿ ಎನ್ನುವತ್ತವೆ ಅಮೆರಿಕದ ಮಾಧ್ಯಮಗಳು. ಅಧ್ಯಕ್ಷರು ಮಸ್ಕ್ ವಿಚಾರದಲ್ಲಿ ‘ದಿವ್ಯ ಮೌನಕ್ಕೆ ಶರಣಾಗಿದ್ದಾರೆ’ ಎಂದು ಪತ್ರಿಕೆಗಳು ಬರೆಯತೊಡಗಿದವು.
ಟೆಸ್ಲಾ ಸಿಇಒ ಶ್ವೇತಭವನದ ಸಾರ್ವಜನಿಕ ಕಾರ್ಯಕ್ರಮಗಳಿಂದ ಮಾಯವಾದರು. ಜೊತೆಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಬಗ್ಗೆ ಮೌನ ತಾಳಿದರು. ಎಕ್ಸ್ ನಲ್ಲಿಯೂ ಅಧ್ಯಕ್ಷರ ಬಗ್ಗೆ ಒಂದೂ ಪೋಸ್ಟ್ ಕಾಣದಾಯಿತು.
ಇಷ್ಟೆಲ್ಲದರ ಹೊರತಾಗಿಯೂ ಸಾರ್ವಜನಿಕವಾಗಿ ಮಾತ್ರ ಅಧ್ಯಕ್ಷರು ಮಸ್ಕ್ ಅವರನ್ನು ಬೆಂಬಲಿಸುವುದನ್ನೇನೂ ನಿಲ್ಲಿಸಲಿಲ್ಲ. ಅವರ ಸಹೋದ್ಯೋಗಿ ರಿಪಬ್ಲಿಕನ್ ಸದಸ್ಯರು ಮಸ್ಕ್ ರಾಜಕೀಯ ಹೊಣೆಗಾರಿಕೆಯಾಗುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮೇ ತಿಂಗಳಲ್ಲಿ ನಡೆಸಲಾದ ಒಂದು ಸಮೀಕ್ಷೆಯಲ್ಲಿ ಅಮೆರಿಕನ್ನರಿಗೆ ಮಸ್ಕ್ ಬಗ್ಗೆ ಒಲವಿಲ್ಲ ಎಂಬುದೂ ಬಹಿರಂಗವಾಯಿತು.
ಅಷ್ಟಕ್ಕೂ ಅಧ್ಯಕ್ಷರಿಗಾಗಿ ಕೆಲಸ ಮಾಡುವ ಮಸ್ಕ್ ಅವರ ಪಾತ್ರವೇನಿದ್ದರೂ ತಾತ್ಕಾಲಿಕವಾದುದಾಗಿತ್ತು. ಅವರ ‘ವಿಶೇಷ ಸರ್ಕಾರಿ ನೌಕರ’ ಹುದ್ದೆಯು 130 ದಿನಗಳ ಅವಧಿಯದ್ದಾಗಿತ್ತು ಮತ್ತು ಅದು ಮೇ ಅಂತ್ಯಕ್ಕೆ ಕೊನೆಗೊಳ್ಳಬೇಕಾಗಿತ್ತು ಕೂಡ.