
5 ದಿನಗಳ ಕಾಲ ಇರಾನ್ ಮೇಲಿನ ಯುದ್ಧ ನಿಲ್ಲುಸುತ್ತೇವೆ ಎಂದ ಡೊನಾಲ್ಡ್ ಟ್ರಂಪ್
ಒಂದು ವೇಳೆ ಭೂಸೇನಾ ಆಕ್ರಮಣ ನಡೆದರೆ, ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ನೌಕಾ ನೆಲಬಾಂಬ್‌ಗಳನ್ನು (ನೇವೆಲ್ ಮೈನ್ಸ್) ಅಳವಡಿಸುವುದಾಗಿ ಇರಾನ್‌ನ ರಕ್ಷಣಾ ಮಂಡಳಿಯು ಬೆದರಿಕೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧವು 24ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಇರಾನ್‌ನೊಂದಿಗೆ 'ಬಹಳ ಉತ್ತಮ ಮತ್ತು ಫಲಪ್ರದ' ಮಾತುಕತೆಗಳು ನಡೆದಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ಸೇನಾ ದಾಳಿಗಳನ್ನು 5 ದಿನಗಳ ಕಾಲ ಮುಂದೂಡುವಂತೆ ಅವರು ರಕ್ಷಣಾ ಇಲಾಖೆಗೆ ಕಟ್ಟುನಿಟ್ಟಿನ ನೀಡಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ. .
ಇದೇ ವೇಳೆ ಭಾರತದ ಧ್ವಜವನ್ನು ಹೊಂದಿರುವ 2 ಎಲ್‌ಪಿಜಿ (LPG) ಟ್ಯಾಂಕರ್‌ಗಳು ತಮ್ಮ ಪಯಣವನ್ನು ಆರಂಭಿಸಿದ್ದು, ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತವನ್ನು ತಲುಪಲಿವೆ. ಹಡಗುಗಳ ಟ್ರ್ಯಾಕಿಂಗ್ ಡೇಟಾ ಪ್ರಕಾರ, ಈ ಟ್ಯಾಂಕರ್‌ಗಳು ಗಲ್ಫ್ ಪ್ರದೇಶವನ್ನು ತೊರೆದು ಭಾರತದತ್ತ ಸಾಗುತ್ತಿವೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, 'ಜಗ್ ವಸಂತ್' ಮತ್ತು 'ಪೈನ್ ಗ್ಯಾಸ್' ಎಂಬ ಎರಡು ಭಾರತೀಯ ಎಲ್‌ಪಿಜಿ ಹಡಗುಗಳು ಇರಾನ್ ತನ್ನ ಕರಾವಳಿಯ ಸಮೀಪ ಅನುಮೋದಿಸಿದ ಮಾರ್ಗದಲ್ಲಿಯೇ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿವೆ. ಇದೇ ವೇಳೆ, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ 2 ಮಿಲಿಯನ್ ಡಾಲರ್ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಇರಾನ್ ಸಾರಾಸಗಟಾಗಿ ತಳ್ಳಿಹಾಕಿದೆ. ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು, ಇಂತಹ ವರದಿಗಳು ಸಂಪೂರ್ಣ ಆಧಾರರಹಿತ ಮತ್ತು ಇರಾನ್‌ನ ಅಧಿಕೃತ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಮುದ್ರದಲ್ಲಿ ನೆಲಬಾಂಬ್ ಅಳವಡಿಸುವ ಬೆದರಿಕೆ ಮತ್ತು ದಾಳಿಯ ದಾವೆ
ಒಂದು ವೇಳೆ ಭೂಸೇನಾ ಆಕ್ರಮಣ (ಲ್ಯಾಂಡ್ ಇನ್ವೇಷನ್) ನಡೆದರೆ, ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ನೌಕಾ ನೆಲಬಾಂಬ್‌ಗಳನ್ನು (ನೇವೆಲ್ ಮೈನ್ಸ್) ಅಳವಡಿಸುವುದಾಗಿ ಇರಾನ್‌ನ ರಕ್ಷಣಾ ಮಂಡಳಿಯು ಬೆದರಿಕೆ ಹಾಕಿದೆ ಎಂದು ಎಪಿ ವರದಿ ಮಾಡಿದೆ. ಇದಲ್ಲದೆ, ಸೌದಿ ಅರೇಬಿಯಾದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ಫ್ಲೀಟ್ ಅನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಲಾಗಿದೆ ಎಂದು ಇರಾನ್‌ನ ಖಾತೆಮ್ ಅಲ್-ಅನ್ಬಿಯಾ ಸೆಂಟ್ರಲ್ ಕಮಾಂಡ್‌ನ ವಕ್ತಾರರು ಹೇಳಿಕೊಂಡಿದ್ದಾರೆ.
ಟ್ರಂಪ್ ಗಡುವು ಮತ್ತು ಇಸ್ರೇಲ್‌ನಿಂದ ಟೆಹ್ರಾನ್ ಮೇಲೆ ಪ್ರತಿದಾಳಿ
ಅಮೆರಿಕವು ತನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿದರೆ, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಹಾಗೂ ಪ್ರಾದೇಶಿಕ ಇಂಧನ ಮತ್ತು ಜಲ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿ ಇರಾನ್ ಎಚ್ಚರಿಸಿದ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಇದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಅವರು, ಯಾವುದೇ ಬೆದರಿಕೆಗಳಿಲ್ಲದೆ ಇರಾನ್ ಜಲಸಂಧಿಯನ್ನು ಮರುತೆರೆಯಬೇಕು ಎಂದು 48 ಗಂಟೆಗಳ ಗಡುವು ನೀಡಿದ್ದರು. ಬೇಡಿಕೆ ಈಡೇರದಿದ್ದರೆ ಇರಾನ್‌ನ ಅತಿದೊಡ್ಡ ವಿದ್ಯುತ್ ಸ್ಥಾವರದಿಂದ ಆರಂಭಿಸಿ ಎಲ್ಲಾ ಸ್ಥಾವರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು, ಇರಾನ್‌ನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿದರೆ, ಜಾಗತಿಕ ತೈಲ ಸಾಗಾಣಿಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಮತ್ತು ಯಾವುದೇ ದಾಳಿಗೆ ನೇರ ಪ್ರತಿದಾಳಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇವೆಲ್ಲದರ ನಡುವೆ, ಇಸ್ರೇಲ್ ಸೋಮವಾರ ಟೆಹ್ರಾನ್‌ನಲ್ಲಿ ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಮೆರಿಕದಲ್ಲಿರುವ ಇಸ್ರೇಲ್ ರಾಯಭಾರಿ ಯೆಚಿಯೆಲ್ ಲೈಟರ್ ಪ್ರತಿಕ್ರಿಯಿಸಿ, ಇರಾನ್ ಮಂಡಿಯೂರುವವರೆಗೂ ಮಿಲಿಟರಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದ್ದಾರೆ.
ಯುದ್ಧದಿಂದ ದೂರ ಉಳಿಯುವ ಒಲವು ತೋರಿದ ಬ್ರಿಟನ್
ಈ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಕ್ರಿಯಿಸಿ, ಪ್ರಸ್ತುತ ಸಂಘರ್ಷವನ್ನು ಶಮನಗೊಳಿಸುವತ್ತ (de-escalation) ಜಗತ್ತು ಗಮನಹರಿಸಬೇಕು, ಇದಕ್ಕಾಗಿ ಜಾಗರೂಕ ಸಮನ್ವಯತೆ ಮತ್ತು ಕಾರ್ಯಸಾಧುವಾದ ಯೋಜನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. "ಹೌದು, ನಾವು ಖಂಡಿತವಾಗಿಯೂ ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತೇವೆ, ಆದರೆ, ನಾವು ಯಾವುದೇ ಕಾರಣಕ್ಕೂ ಈ ಯುದ್ಧದೊಳಗೆ ಎಳೆಯಲ್ಪಡಲು ಇಷ್ಟಪಡುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

