Trump freezes tariffs for 90 days, ‘big relief’, say Indian exporters
x

ಡೊನಾಲ್ಡ್​ ಟ್ರಂಪ್​ (ಸಂಗ್ರಹ ಚಿತ್ರ)

ಚೀನಾ ಹೊರತುಪಡಿಸಿ ಉಳಿದ ದೇಶಗಳ ಮೇಲಿನ ಪ್ರತಿಕಾರ ಸುಂಕಕ್ಕೆ 90 ದಿನಗಳ ವಿನಾಯಿತಿ ಕೊಟ್ಟ ಟ್ರಂಪ್​

ಟ್ರಂಪ್ ಅವರ ಈ ಘೋಷಣೆಯ ನಂತರ ಶೇರು ಮಾರುಕಟ್ಟ ಸೂಚ್ಯಂಕದಲ್ಲಿ ಏರಿಕೆಯಾಗಿದೆ. ಈ ನಡುವೆ ಚೀನಾ ಹೊರತುಪಡಿಸಿದ ಇತರ ವ್ಯಾಪಾರ ಪಾಲುದಾರರ ಮೇಲಿನ ಸುಂಕಗಳನ್ನು ಸಡಿಲಗೊಳಿಸುವ ಟ್ರಂಪ್ ಅವರ ಯೋಜನೆಗಳ ನಿಖರ ವಿವರಗಳು ತಕ್ಷಣವೇ ಸ್ಪಷ್ಟವಾಗಿಲ್ಲ.


ಜಾಗತಿಕ ಮಾರುಕಟ್ಟೆ ತಲ್ಲಣಗೊಂಡ ಬಳಿಕ ಎಚ್ಚೆತ್ತುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುಧವಾರ (ಏಪ್ರಿಲ್ 9) ಚೀನಾ ಹೊರತುಪಡಿಸಿ ಉಳಿದ ರಾಷ್ಟ್ರಗಳ ಮೇಲಿನ ಸೇಡಿನ ಸುಂಕಗಳನ್ನು 90 ದಿನಗಳವರೆಗೆ ಸ್ಥಗಿತಗೊಳಿಸಿದ್ದಾರೆ. ಆದರೆ, ಚೀನಾದ ಆಮದುಗಳ ಮೇಲಿನ ತೆರಿಗೆ ದರವನ್ನು ಶೇಕಡಾ 125ಕ್ಕೆ ಏರಿಸಿದ್ದಾರೆ. ಈ ಮೂಲಕ ಅವರು ಅಮೆರಿಕ ಮತ್ತು ಜಗತ್ತಿನ ಉಳಿದ ಭಾಗಗಳ ನಡುವಿನ ವ್ಯಾಪಾರ ಯುದ್ಧವನ್ನು ಕೇವಲ ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷಕ್ಕೆ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಟ್ರಂಪ್ ಅವರ ಈ ಘೋಷಣೆಯ ನಂತರ ಜಾಗತಿಕ ಷೇರು ಮಾರುಕಟ್ಟ ಸೂಚ್ಯಂಕದಲ್ಲಿ ಏರಿಕೆಯಾಗಿದೆ. ಈ ನಡುವೆ ಚೀನಾ ಹೊರತುಪಡಿಸಿದ ಇತರ ವ್ಯಾಪಾರ ಪಾಲುದಾರರ ಮೇಲಿನ ಸುಂಕಗಳನ್ನು ಸಡಿಲಗೊಳಿಸುವ ಟ್ರಂಪ್ ಅವರ ಯೋಜನೆಗಳ ನಿಖರ ವಿವರಗಳನ್ನೂ ಅವರು ನೀಡಿಲ್ಲ. ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ, “75ಕ್ಕೂ ಹೆಚ್ಚು ದೇಶಗಳು ಅಮೆರಿಕ ಜತೆ ವ್ಯಾಪಾರ ಮಾತುಕತೆಗಾಗಿ ಸರ್ಕಾರವನ್ನು ಸಂಪರ್ಕಿಸಿವೆ. ಹೀಗಾಗಿ ಪ್ರತಿಕಾರದ ನಿರ್ಧಾರವನ್ನು ಹಿಂದೆಗೆದುಕೊಳ್ಳಲಾಗಿದೆ. ನಾನು 90 ದಿನಗಳವರೆಗೆ ತಡೆ ನೀಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಟ್ರಂಪ್ ಅವರ ನಿರ್ಧಾರ ಹೆಚ್ಚುವರಿಗೆ ಸುಂಕಕ್ಕೆ ಮಾತ್ರ ಅನ್ವಯವಾಗುತ್ತದೆ. ಶೇಕಡಾ 10 ವಿಧಿಸುವ ನಿರ್ಧಾರವು ಮುಂದುವರಿಯುತ್ತದೆ. ಹೀಗಾಗಿ ಯುರೋಪಿಯನ್ ಒಕ್ಕೂಟದಿಂದ ಆಮದಾಗುವ ಸರಕುಗಳ ಮೇಲಿನ ಶೇಕಡಾ 20 , ಜಪಾನ್‌ನಿಂದ ಆಮದಾಗುವ ಸರಕುಗಳ ಮೇಲಿನ ಶೇಕಡಾ 24 ಮತ್ತು ದಕ್ಷಿಣ ಕೊರಿಯಾದ ಉತ್ಪನ್ನಗಳ ಮೇಲಿನ ಶೇಕಡಾ 25 ಸುಂಕಕ್ಕಿಂತ ಗಣನೀಯ ಇಳಿಕೆಯಾಗಿದೆ. ಈ ಶೇಕಡಾ 10 ಅಮೆರಿಕ ಸರ್ಕಾರವು ಈ ಹಿಂದೆ ವಿಧಿಸುತ್ತಿದ್ದ ಸುಂಕಗಳಿಗಿಂತ ಅಧಿಕವಾಗಿದೆ

ಚೀನಾ ಮತ್ತು ಭಾರತ

ಚೀನಾದ ಆಮದುಗಳ ಮೇಲೆ ಶೇಕಡಾ 125 ಸುಂಕ ವಿಧಿಸುವ ಟ್ರಂಪ್ ಅವರ ನಿರ್ಧಾರವು ಭಾರತೀಯ ರಫ್ತುದಾರರಿಗೆ ದೊಡ್ಡ ಸಮಾಧಾನ ತಂದಿದೆ. ಚೀನಾದೊಂದಿಗಿನ ವ್ಯಾಪಾರ ಯುದ್ಧ ತೀವ್ರಗೊಂಡರೆ, ಭಾರತದಂತಹ ಇತರ ರಾಷ್ಟ್ರಗಳಿಗೆ ಅಮೆರಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಬಹುದು. ಟ್ರಂಪ್ ಸುಂಕ ‘ದುರ್ಬಳಕೆ’ಯ ವಿರುದ್ಧ ಒಗ್ಗಟ್ಟಾಗಿ ನಿಲ್ಲುವಂತೆ ಚೀನಾ ಭಾರತಕ್ಕೆ ಮನವಿ ಮಾಡಿರುವುದು ಇದೇ ಹಿನ್ನೆಲೆಯಲ್ಲಿ. ಆದರೆ, ಭಾರತದ ನಿಲುವು ಇನ್ನೂ ಸ್ಪಷ್ಟವಾಗಿಲ್ಲ.

ಮುಂದಿನ ಹೆಜ್ಜೆ ಏನು?

ಟ್ರಂಪ್ ಅವರ ಉಳಿದ ಸುಂಕ ಯೋಜನೆಗಳ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಮಂಗಳವಾರ ರಾತ್ರಿಯ ಭಾಷಣದಲ್ಲಿ, ಆಮದು ಔಷಧಿಗಳ ಮೇಲಿನ ತೆರಿಗೆಗಳು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದರು. ಈ ನಡೆಯು ಜಾಗತಿಕ ಆರ್ಥಿಕತೆ ಮತ್ತು ಅಮೆರಿಕದ ವ್ಯಾಪಾರ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಇನ್ನಷ್ಟೇ ಕಾದು ನೋಡಬೇಕಾಗಿದೆ.

Read More
Next Story