ಟ್ರಂಪ್ ಹತ್ಯೆ ಯತ್ನ: ಶೂಟರ್ ಛಾಯಾಚಿತ್ರ ಬಿಡುಗಡೆಗೊಳಿಸಿದ ಎಫ್‌ಬಿಐ
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಪ್ರಕರಣದಲ್ಲಿ ಕೊಲೆಯಾದ ಶೂಟರ್‌ನ ಛಾಯಾಚಿತ್ರವನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಬಿಡುಗಡೆಗೊಳಿಸಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಯತ್ನದಲ್ಲಿ ಭಾಗಿಯಾಗಿರುವಾತ ಪೆನ್ಸಿಲ್ವೇನಿಯದ ಬೆಥೆಲ್ ಪಾರ್ಕ್‌ನ ಥಾಮಸ್ ಮ್ಯಾಥ್ಯೂ ಕ್ರೂಕ್ಸ್( 20) ಎಂದು ಎಫ್‌ಬಿಐ ಭಾನುವಾರ (ಜುಲೈ 14) ಹೇಳಿದೆ.
ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಕ್ರೂಕ್ಸ್: ಆಸ್ತಿ ನಿರ್ವಹಣೆ ಸಂಸ್ಥೆಯಾದ ಬ್ಲ್ಯಾಕ್‌ರಾಕ್ ನ ಜಾಹೀರಾತಿನಲ್ಲಿ ಆತ ಕಾಣಿಸಿಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.
2022 ರಲ್ಲಿ ಪೆನ್ಸಿಲ್ವೇನಿಯದ ಬೆಥೆಲ್ ಪಾರ್ಕ್ ಹೈಸ್ಕೂಲ್‌ನಿಂದ ಪದವಿ ಪಡೆದ ಕ್ರೂಕ್ಸ್, ಜಾಹೀರಾತಿನಲ್ಲಿ ಶಾಲೆ ಕ್ಯಾಂಪಸ್‌ನಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಕಾಣಿಸಿಕೊಂ ಡಿದ್ದಾರೆ. ಈ ವೈರಲ್ ಆಗಿರುವ ಜಾಹೀರಾತನ್ನು ಸಾರ್ವಜನಿಕ ಡೊಮೇನ್‌ನಿಂದ ತೆಗೆದುಹಾಕಲಾಗಿದೆ ಎಂದು ಬ್ಲ್ಯಾಕ್‌ರಾಕ್ ಹೇಳಿದೆ.
ʻಮಾಜಿ ಅಧ್ಯಕ್ಷ ಟ್ರಂಪ್ ಅವರ ಹತ್ಯೆ ಪ್ರಯತ್ನ ಅಸಹ್ಯಕರ. ಟ್ರಂಪ್ ಗಂಭೀರವಾಗಿ ಗಾಯಗೊಂಡಿಲ್ಲ. ಶೂಟೌಟ್ ನಲ್ಲಿ ಕೊಲ್ಲಲ್ಪಟ್ಟ ವ್ಯಕ್ತಿಯ ಸಾವಿಗೆ ವಿಷಾದ ವ್ಯಕ್ತಪಡಿಸುತ್ತೇವೆ,ʼ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಕ್ರೂಕ್ಸ್ ಅಮೆರಿಕದ ಮಾಜಿ ಅಧ್ಯಕ್ಷರ ಮೇಲೆ ಗುಂಡು ಹಾರಿಸಲು ಎಆರ್- 5 ರೈಫಲ್ ಬಳಸಿದ್ದರು. ಆತನನ್ನು ರಹಸ್ಯ ಸೇವೆಯ ಶೂಟರ್ಗಳು ಹೊಡೆದುರುಳಿಸಿದರು.
ರಿಪಬ್ಲಿಕನ್ ಸದಸ್ಯ ಆಗಿದ್ದ ಕ್ರೂಕ್ಸ್, ನವೆಂಬರ್ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಬೇಕಿತ್ತು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.
ಏಕಾಂಗಿ, ಸ್ಟಾರ್ ಪ್ರಶಸ್ತಿ: ಬೆತೆಲ್ ಪಾರ್ಕ್ ಹೈಸ್ಕೂಲಿನ ಸಹಪಾಠಿಗಳು, ಕ್ರೂಕ್ಸ್ ಏಕಾಂಗಿ ಮತ್ತು ಮೌನಿ ಎಂದು ಹೇಳಿದರು. ರಾಷ್ಟ್ರೀಯ ಗಣಿತ ಮತ್ತು ವಿಜ್ಞಾನ ಉಪಕ್ರಮದಿಂದ 500 ಡಾಲರ್ ಸ್ಟಾರ್ ಪುರಸ್ಕಾರ ಪಡೆದಿದ್ದರು ಎಂದು ಹೇಳಲಾಗಿದೆ. ಆತ ಯಾವುದೇ ರಾಜಕೀಯ ಚರ್ಚೆಯಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಆದರೆ, ಶಾಲೆಯಲ್ಲಿ ಆತನಿಗೆ ಕಿರುಕುಳ ನೀಡಲಾಯಿತು ಎಂದು ಹೇಳಿದರು. ಪದವಿ ಪಡೆದ ನಂತರ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದರು.