ಕೃತಕ ಬುದ್ಧಿಮತ್ತೆ ಸಲಹೆಗಾರರಾಗಿ ಭಾರತ ಮೂಲದ ಶ್ರೀರಾಮ್ ಕೃಷ್ಣನ್ ನೇಮಿಸಿದ ಟ್ರಂಪ್
ಶ್ರೀರಾಮ್ ಕೃಷ್ಣನ್ ಅವರು ಇದಕ್ಕಿಂತ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ!, ಫೇಸ್ಬುಕ್ ಮತ್ತು ಸ್ನ್ಯಾಪ್ ಚಾಟ್‌ನಲ್ಲಿ ಉನ್ನತ ಹುದ್ದೆಯನ್ನು ಹೊಂದಿದ್ದರು.
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ (ಡಿಸೆಂಬರ್ 23) ಭಾರತ ಮೂಲದ ಅಮೆರಿಕನ್ ಉದ್ಯಮಿ, ವೆಂಚರ್ ಕ್ಯಾಪಿಟಲಿಸ್ಟ್ ಮತ್ತು ಲೇಖಕ ಶ್ರೀರಾಮ್ ಕೃಷ್ಣನ್ ಅವರನ್ನು ಕೃತಕ ಬುದ್ಧಿಮತ್ತೆ ನೀತಿ ಸಲಹೆಗಾರರಾಗಿ ನೇಮಿಸಿದ್ದಾರೆ.
"ಶ್ರೀರಾಮ್ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ" ಎಂದು ಟ್ರಂಪ್ ಭಾನುವಾರ ಪ್ರಕಟಿಸಿದ್ದಾರೆ.
ಶ್ರೀರಾಮ್ ಕೃಷ್ಣನ್ ಅವರು ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್ಬುಕ್ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ಹಲವು ತಂಡಗಳನ್ನು ಮುನ್ನಡೆಸಿದ್ದರು. ಜತೆಗೆ ಬಂಡವಾಳ ಹೂಡಿಕೆದಾರ ಡೇವಿಡ್ ಒ. ಸ್ಯಾಕ್ಸ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.
"ಡೇವಿಡ್ ಸ್ಯಾಕ್ಸ್ ಅವರೊಂದಿಗೆ ಕೆಲಸ ಮಾಡುವ ಶ್ರೀರಾಮ್ ಅವರು ಕೃತಕ ಬುದ್ಧಿಮತ್ತೆಯಲ್ಲಿ ಅಮೆರಿಕದ ನಾಯಕತ್ವ ಮುಂದುವರಿಸಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಕ್ಷರ ಸಲಹೆಗಾರರ ಮಂಡಳಿಯೊಂದಿಗೆ ಕೆಲಸ ಮಾಡುವುದು ಸೇರಿದಂತೆ ಸರ್ಕಾರದಾದ್ಯಂತ ಎಐ ನೀತಿ ರೂಪಿಸಲು ಮತ್ತು ಸಮನ್ವಯಗೊಳಿಸಲು ನೆರವಾಗಲಿದ್ದಾರೆ. . ಶ್ರೀರಾಮ್ ಮೈಕ್ರೋಸಾಫ್ಟ್‌ನಲ್ಲಿ ವಿಂಡೋಸ್ ಅಝ್ಯೂರ್ ಸ್ಥಾಪಕ ಸದಸ್ಯರಾಗಿ ವೃತ್ತಿಜೀವನ ಪ್ರಾರಂಭಿಸಿದ್ದರು" ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಅಮೆರಿಕಕ್ಕಾಗಿ ಸೇವೆ ಸಲ್ಲಿಸಲು ಕೃತಕ ಬುದ್ಧಿಮತ್ತೆಯಲ್ಲಿ ಅಮೆರಿಕದ ನಾಯಕತ್ವವನ್ನು ಮುಂದುವರಿಸಲು ನನಗೆ ಹೆಮ್ಮೆಯಿದೆ. ಅದೇ ರೀತಿ ಮತ್ತು ಡೇವಿಡ್ ಸ್ಯಾಕ್ಸ್ ಅವರೊಂದಿಗೆ ಕೆಲಸ ಮುಂದುವರಿಸುವೆ" ಎಂದು ಕೃಷ್ಣನ್ ಹೇಳಿದ್ದು, ಟ್ರಂಪ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಕೃಷ್ಣನ್ ಅವರ ನೇಮಕವನ್ನು ಭಾರತೀಯ ಅಮೆರಿಕನ್ ಸಮುದಾಯ ಸ್ವಾಗತಿಸಿದೆ.
"ಶ್ರೀರಾಮ್ ಕೃಷ್ಣನ್ ಅವರನ್ನು ನಾವು ಹೃದಯಪೂರ್ವಕವಾಗಿ ಅಭಿನಂದಿಸುತ್ತೇವೆ. ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯಲ್ಲಿ ಹಿರಿಯ ನೀತಿ ಸಲಹೆಗಾರರಾಗಿ ನೇಮಕಗೊಂಡಿರುವುದಕ್ಕೆ ಸಂತೋಷವಾಗಿದೆ" ಎಂದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಜೋಶಿಪುರ ಹೇಳಿದರು.
ಹಲವಾರು ವರ್ಷಗಳಿಂದ, ಶ್ರೀರಾಮ್ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಭಾವಶಾಲಿ ವ್ಯಾಖ್ಯಾನಕಾರರಾಗಿದ್ದಾರೆ. ಸಾರ್ವಜನಿಕ ನೀತಿ, ಅಂತರರಾಷ್ಟ್ರೀಯ ವ್ಯವಹಾರಗಳು, ಹೂಡಿಕೆ ಮತ್ತು ತಂತ್ರಜ್ಞಾನದಲ್ಲಿ ಕೆಲಸ ಮಾಡಿದ್ದಾರೆ.