
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವೃತ್ತಿಪರರಿಗೆ ಅಮೆರಿಕ ಪ್ರವೇಶ ; H-1B ವೀಸಾ ನಿಯಮ ಸಡಿಲಿಸಿದ ಡೊನಾಲ್ಡ್ ಟ್ರಂಪ್?
ಅಮೆರಿಕದಲ್ಲಿ ಕೆಲವು ನಿರ್ದಿಷ್ಟ ಪ್ರತಿಭೆಗಳು ಲಭ್ಯರಿಲ್ಲ, ಉನ್ನತ ಕೌಶಲ್ಯದ ವಿದೇಶಿ ಪ್ರತಿಭೆಗಳನ್ನು ಅಮೆರಿಕಕ್ಕೆ ಕರೆತರಬೇಕಾದ ಅಗತ್ಯವಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು H-1B ವೀಸಾ ನಿಯಮ ಸಡಿಲಿಸುವ ಕುರಿತು ಮುನ್ಸೂಚನೆ ನೀಡಿರುವುದು ಅಮೆರಿಕದಲ್ಲಿ ಉದ್ಯೋಗದ ಕನಸು ಕಂಡಿರುವ ವೃತ್ತಿಪರರಲ್ಲಿ ಸಂಭ್ರಮ ಮೂಡಿಸಿದೆ.
ಅಮೆರಿಕದಲ್ಲಿ ಕೆಲ ನಿರ್ದಿಷ್ಟ ಪ್ರತಿಭೆಗಳು ಲಭ್ಯವಿಲ್ಲದ ಕಾರಣ ಉನ್ನತ ಕೌಶಲ್ಯ ಹೊಂದಿರುವ ವಿದೇಶಿ ಪ್ರತಿಭೆಗಳನ್ನು ಅಮೆರಿಕಕ್ಕೆ ಕರೆತರಬೇಕಾದ ಅಗತ್ಯವಿದೆ ಎಂದು ಟ್ರಂಪ್ ಹೇಳಿದ್ದು, ಎಚ್ 1ಬಿ ವೀಸಾ ನಿಯಮಗಳು ಪರಿಷ್ಕರಣೆಯಾಗಲಿವೆ ಎಂದು ಹೇಳಲಾಗಿದೆ.
ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಸಮರ್ಥನೆ
ಫಾಕ್ಸ್ ನ್ಯೂಸ್‌ನಲ್ಲಿ ಲಾರಾ ಇಂಗ್ರಾಮ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. H-1B ವೀಸಾ ನೀಡಿಕೆಯಿಂದ ಅಮೆರಿಕನ್ ಕಾರ್ಮಿಕರಿಗೆ ವೇತನ ಹೆಚ್ಚಿಸಲು ಅಡ್ಡಿಯಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ಅದನ್ನು ನಾನು ಒಪ್ಪುತ್ತೇನೆ. ದೇಶದ ಕಾರ್ಮಿಕರಿಗೆ ಪ್ರಾಧಾನ್ಯತೆ ನೀಡಬೇಕು. ಆದರೆ, ನಮ್ಮಲ್ಲಿ ಪ್ರತಿಭೆಗಳ ಸಂಖ್ಯೆ ಕಡಿಮೆ ಇದೆ. ವಿದೇಶಿ ಪ್ರತಿಭೆಗಳನ್ನು ಕರೆತರಬೇಕಾದ ಅವಶ್ಯಕತೆ ಇದೆʼʼ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲ, ನಮ್ಮಲ್ಲಿ ಕೆಲ ನಿರ್ದಿಷ್ಟ ವಲಯಗಳಲ್ಲಿ ಪ್ರತಿಭೆಗಳಿಲ್ಲ, ಕಲಿಕೆಯ ಮೂಲಕ ಪ್ರತಿಭೆ ಮೈಗೂಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಉನ್ನತ ಕೌಶಲ್ಯದ ಕೊರತೆ ಬಗ್ಗೆ ಉದಾಹರಣೆ
ಟ್ರಂಪ್ ಅವರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ನಿರ್ದಿಷ್ಟ ಉದಾಹರಣೆ ನೀಡಿದರು. ನೀವು ಜನರನ್ನು ನಿರುದ್ಯೋಗ ರೇಖೆಯಿಂದ ತೆಗೆದುಹಾಕಿ, 'ನಾನು ನಿಮ್ಮನ್ನು ಕಾರ್ಖಾನೆಗೆ ಸೇರಿಸಲಿದ್ದೇನೆ, ನಾವು ಕ್ಷಿಪಣಿಗಳನ್ನು ತಯಾರಿಸಲಿದ್ದೇವೆ' ಎಂದು ಹೇಳಲು ಸಾಧ್ಯವಿಲ್ಲ. ಬ್ಯಾಟರಿ ತಯಾರಿಕೆಯ ಸ್ಥಾವರದಲ್ಲಿ 'ಜಟಿಲ ಮತ್ತು ಅಪಾಯಕಾರಿ' ಕೆಲಸಕ್ಕೆ ದಕ್ಷಿಣ ಕೊರಿಯಾದ ವೃತ್ತಿಪರರು ಬೇಕಾಗಿದ್ದಾರೆ. ಒಬ್ಬ ಉದ್ಯಮಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ಘಟಕ ನಿರ್ಮಿಸುತ್ತಾನೆ. ಆದರೆ, ಅಲ್ಲಿ ಐದು ವರ್ಷಗಳಿಂದ ಕೆಲಸ ಮಾಡದ ಸಾಮಾನ್ಯರನ್ನು ನೇಮಿಸಿದರೆ ಕ್ಷಿಪಣಿ ತಯಾರಿಕೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
H-1B ದುರುಪಯೋಗದ ತನಿಖೆ ಮುಂದುವರಿಕೆ
ಟ್ರಂಪ್ ಆಡಳಿತವು H-1B ವೀಸಾ ದುರ್ಬಳಕೆಗೆ ತಡೆಗೆ ಬೃಹತ್ ಕ್ರಮಗಳನ್ನು ಆರಂಭಿಸಿದೆ. ಇದರಿಂದ ಭಾರತೀಯ ವೃತ್ತಿಪರರು ಕೂಡ ಸಮಸ್ಯೆಗೆ ಒಳಗಾಗಿದ್ದರು. 2025 ಸೆ.21ರ ನಂತರ ಕೆಲ H-1B ಅರ್ಜಿಗಳಿಗೆ ಅರ್ಹತೆಯ ಷರತ್ತಿನಂತೆ ಹೆಚ್ಚುವರಿ 100,000 ಡಾಲರ್ ಶುಲ್ಕ ಪಾವತಿಸಬೇಕು ಎಂದು ಘೋಷಿಸಲಾಗಿತ್ತು. ಅಮೆರಿಕದ ಕಾರ್ಮಿಕ ಇಲಾಖೆಯು H-1B ದುರುಪಯೋಗದ ಬಗ್ಗೆ ಸುಮಾರು 175 ತನಿಖೆಗಳನ್ನು ಆರಂಭಿಸಿತ್ತು. ಇದರಲ್ಲಿ ಕಡಿಮೆ ವೇತನ ಮತ್ತು ಅಸ್ತಿತ್ವದಲ್ಲಿಲ್ಲದ ಉದ್ಯೋಗ ಸ್ಥಳಗಳಂತಹ ಲೋಪಗಳನ್ನು ಪತ್ತೆ ಮಾಡಲಾಗಿತ್ತು.
ಈ ಮಧ್ಯೆ, ಕಾರ್ಮಿಕ ಕಾರ್ಯದರ್ಶಿ ಲೋರಿ ಚಾವೆಜ್ ಡೆರೆಮರ್ ಪ್ರತಿಕ್ರಿಯಿಸಿ, H-1B ದುರುಪಯೋಗ ನಿಲ್ಲಿಸಲು ಪ್ರತಿಯೊಂದು ಸಂಪನ್ಮೂಲವನ್ನು ಬಳಸುತ್ತಿದ್ದೇವೆ. ಉನ್ನತ ಕೌಶಲ್ಯದ ಉದ್ಯೋಗಗಳು ಮೊದಲು ಅಮೆರಿಕನ್ ಕಾರ್ಮಿಕರಿಗೆ ಲಭ್ಯವಾಗುವುದನ್ನು ಖಚಿತಪಡಿಸುತ್ತೇವೆ ಎಂದು ಹೇಳಿದ್ದಾರೆ.

