ಕೆನಡಾಕ್ಕೆ 35% ಆಮದು ಸುಂಕ ಪ್ರಕಟಿಸಿದ ಟ್ರಂಪ್​; ಇತರ ದೇಶಗಳಿಗೂ ಎಚ್ಚರಿಕೆ
x

ಕೆನಡಾಕ್ಕೆ 35% ಆಮದು ಸುಂಕ ಪ್ರಕಟಿಸಿದ ಟ್ರಂಪ್​; ಇತರ ದೇಶಗಳಿಗೂ ಎಚ್ಚರಿಕೆ

ಒಂದು ವೇಳೆ ಕೆನಡಾ ಅಮೆರಿಕದ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಲು ಮುಂದಾದರೆ, ಅಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ (ಜುಲೈ 10ರಂದು) ಕೆನಡಾದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇಕಡಾ 35 ರಷ್ಟು ಸುಂಕ ವಿಧಿಸಿದ್ದಾರೆ. ಇದರ ಜೊತೆಗೆ, ಅಮೆರಿಕದ ಇತರ ವ್ಯಾಪಾರ ಪಾಲುದಾರ ದೇಶಗಳಿಗೂ ಶೇಕಡಾ 15 ಅಥವಾ 20 ರಷ್ಟು ಸಾಮಾನ್ಯ ಸುಂಕ ಹಾಕುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕೆನಡಾದ ಮೇಲೆ ಈ ಸುಂಕ ವಿಧಿಸಲು"ಕೆನಡಾದ ಪ್ರತೀಕಾರ", ವ್ಯಾಪಾರ ತಡೆಗಳು ಮತ್ತು ಅಮೆರಿಕಕ್ಕೆ ಹೆಚ್ಚುತ್ತಿರುವ ಫೆಂಟಾನಿಲ್ ಮಾದಕವಸ್ತುಗಳ ಹರಿವೇ ಕಾರಣ ಎಂದು ಹೇಳಿದ್ದಾರೆ. ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಪತ್ರದಲ್ಲಿ, "2025 ಆಗಸ್ಟ್ 1ರಿಂದ, ಅಮೆರಿಕಕ್ಕೆ ಕೆನಡಾದಿಂದ ಬರುವ ಉತ್ಪನ್ನಗಳ ಮೇಲೆ ಶೇಕಡಾ 35ರಷ್ಟು ಸುಂಕ ವಿಧಿಸಲಾಗುವುದು, ಇದು ಎಲ್ಲಾ ವಲಯಗಳ ಸುಂಕಗಳಿಂದ ಪ್ರತ್ಯೇಕ" ಎಂದು ಟ್ರಂಪ್ ಬರೆದಿದ್ದಾರೆ.

'ಪ್ರತೀಕಾರ ಬೇಡ' ಎಂದು ಎಚ್ಚರಿಕೆ

ಒಂದು ವೇಳೆ ಕೆನಡಾ ಅಮೆರಿಕದ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಲು ಮುಂದಾದರೆ, ಅಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. "ಯಾವುದೇ ಕಾರಣಕ್ಕೆ ನೀವು ತೆರಿಗೆಗಳನ್ನು ಹೆಚ್ಚಿಸಿದರೆ, ನೀವು ಆಯ್ಕೆ ಮಾಡುವ ಅಷ್ಟೇ ಮೊತ್ತವನ್ನು ನಾವು ವಿಧಿಸುವ ಶೇಕಡಾ 35 ಕ್ಕೆ ಸೇರಿಸಲಾಗುವುದು" ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ, ಟ್ರಂಪ್ ಜಪಾನ್, ದಕ್ಷಿಣ ಕೊರಿಯಾ ಮತ್ತು ಬ್ರೆಜಿಲ್ ಸೇರಿದಂತೆ ಕನಿಷ್ಠ 22 ದೇಶಗಳ ಮುಖ್ಯಸ್ಥರಿಗೆ ಹೊಸ ಸುಂಕಗಳ ಬಗ್ಗೆ ಪತ್ರಗಳನ್ನು ಕಳುಹಿಸಿದ್ದಾರೆ. ಇತ್ತೀಚೆಗೆ, ಆಗಸ್ಟ್ 1ರಿಂದ ಆಮದು ಮಾಡಿಕೊಂಡ ತಾಮ್ರದ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸುವುದಾಗಿಯೂ ಅವರು ಘೋಷಿಸಿದ್ದಾರೆ.

ಇತರ ವ್ಯಾಪಾರ ಪಾಲುದಾರರಿಗೆ ಸಾಮಾನ್ಯ ಸುಂಕ

ಎನ್​ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್​, ಅಮೆರಿಕದ ಇತರ ವ್ಯಾಪಾರ ಪಾಲುದಾರರು ಸುಂಕ ಹೆಚ್ಚಳದ ಪತ್ರಗಳನ್ನು ಸ್ವೀಕರಿಸದೆ ಇದ್ದರೂ ಅವರಿಗೆ ಸಾಮಾನ್ಯ ಸುಂಕ ಎದುರಾಗಬಹುದು ಎಂದು ಟ್ರಂಪ್ ತಿಳಿಸಿದ್ದಾರೆ.

Read More
Next Story