
ಡೊನಾಲ್ಡ್ ಟ್ರಂಪ್.
ಸ್ವಯಂ-ಗಡೀಪಾರು ಅಥವಾ ಜೈಲು ಶಿಕ್ಷೆ; ಅಕ್ರಮ ವಲಸಿಗರಿಗೆ ಅಮೆರಿಕದಿಂದ 30 ದಿನಗಳ ಗಡುವು
ಸ್ವಯಂ-ಗಡೀಪಾರಾಗಲು ವಿಫಲರಾದರೆ, ದಿನಕ್ಕೆ ಸುಮಾರು 998 ಡಾಲರ್ (ಅಂದಾಜು 82,000 ರೂಪಾಯಿ) ದಂಡ ವಿಧಿಸಲಾಗುವುದು. ಇದರ ಜೊತೆಗೆ, ಆಸ್ತಿ ಜಪ್ತಿ ಮತ್ತು ಜೈಲು ಶಿಕ್ಷೆಯಂತಹ ಕಠಿಣ ಕ್ರಮಗಳನ್ನೂ ಜಾರಿಗೊಳಿಸಲಾಗುವುದು ಎಂದು ಗೃಹ ಭದ್ರತಾ ಇಲಾಖೆ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಕ್ರಮ ವಲಸಿಗರಿಗೆ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದು, ಅಕ್ರಮವಾಗಿ ದೇಶದಲ್ಲಿ ವಾಸಿಸುತ್ತಿರುವ ವಿದೇಶಿಯರು 30 ದಿನಗಳ ಒಳಗೆ ಸ್ವಯಂ- ಗಡೀಪಾರು (self-deport) ಆಗಬೇಕು, ಇಲ್ಲದಿದ್ದರೆ ಜೈಲು ಶಿಕ್ಷೆಯ ಜೊತೆಗೆ ದೊಡ್ಡ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ಈ ನಿರ್ಧಾರವು ಅಕ್ರಮ ವಲಸೆ ನಿಯಂತ್ರಿಸಲು ಮತ್ತು ರಾಷ್ಟ್ರೀಯ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಎಂದು ಹೇಳಿದೆ.
ಅಮೆರಿಕದ ಗೃಹ ಭದ್ರತಾ ಇಲಾಖೆ (Department of Homeland Security - DHS) ಮತ್ತು ಇತರ ಕಾನೂನು ಜಾರಿ ಇಲಾಖೆಗಳು ಈ ಗಡುವು ಘೋಷಿಸಿವೆ. ಈ ನಿಯಮದ ಪ್ರಕಾರ, 30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರು ತಮ್ಮನ್ನು ತಾವು ಗುರುತಿಸಿಕೊಂಡು ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಅವರು ಸ್ವಯಂ-ಗಡೀಪಾರಾಗಲು ವಿಫಲರಾದರೆ, ದಿನಕ್ಕೆ ಸುಮಾರು 998 ಡಾಲರ್ (ಅಂದಾಜು 82,000 ರೂಪಾಯಿ) ದಂಡ ವಿಧಿಸಲಾಗುವುದು. ಇದರ ಜೊತೆಗೆ, ಆಸ್ತಿ ಜಪ್ತಿ ಮತ್ತು ಜೈಲು ಶಿಕ್ಷೆಯಂತಹ ಕಠಿಣ ಕ್ರಮಗಳನ್ನೂ ಜಾರಿಗೊಳಿಸಲಾಗುವುದು ಎಂದು ಹೇಳಿವೆ.
ಪ್ರಕ್ರಿಯೆ ಸುಗಮಗೊಳಿಸಲು, ಡಿಎಚ್ಎಸ್ ಸಿಬಿಪಿ ಹೋಮ್ ಆ್ಯಪ್ (CBP Home App) ಎಂಬ ಮೊಬೈಲ್ ಅಪ್ಲಿಕೇಶನ್‌ನ ಮೂಲಕ ಸ್ವಯಂ-ಗಡೀಪಾರು ಪ್ರಕ್ರಿಯೆಯನ್ನು ನಡೆಸಲು ಸೂಚಿಸಿದೆ. ಈ ಆ್ಯಪ್ ಮೂಲಕ ಅಕ್ರಮ ವಲಸಿಗರು ತಮ್ಮ ವಿವರಗಳನ್ನು ನೋಂದಾಯಿಸಿಕೊಂಡು, ಸ್ವಯಂ-ಗಡೀಪಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು. ಸರ್ಕಾರದ ಪ್ರಕಾರ, ಈ ವಿಧಾನವು ಸುರಕ್ಷಿತವಾಗಿದ್ದು, ಗಡೀಪಾರಾದವರಿಗೆ ಭವಿಷ್ಯದಲ್ಲಿ ಕಾನೂನುಬದ್ಧವಾಗಿ ಅಮೆರಿಕಕ್ಕೆ ಮರಳಲು ಅವಕಾಶ ಒದಗಿಸುತ್ತದೆ.
ಕಾರಣಗಳು ಮತ್ತು ಉದ್ದೇಶ
ಅಕ್ರಮ ವಲಸೆಯಿಂದ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಒತ್ತಡ ಕಡಿಮೆ ಮಾಡುವುದು ಇದರ ಉದ್ದೇಶ ಎಂದು ಅಮೆರಿಕ ಹೇಳಿದೆ. ಅಮೆರಿಕದ ಸರ್ಕಾರದ ಪ್ರಕಾರ, ಅಕ್ರಮ ವಲಸಿಗರು ಸಾಮಾಜಿಕ ಭದ್ರತಾ ಸೌಲಭ್ಯಗಳು, ಆರೋಗ್ಯ ಸೇವೆಗಳು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಇದು ದೇಶದ ಆರ್ಥಿಕತೆಗೆ ಹೊರೆಯಾಗುತ್ತಿದೆ. ಇದರ ಜೊತೆಗೆ, ಕೆಲವು ವಲಸಿಗರಿಂದ ರಾಷ್ಟ್ರೀಯ ಭದ್ರತೆಗೆ ಸಂಭಾವ್ಯ ಬೆದರಿಕೆ ಇದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಈ ಕಾರಣದಿಂದಾಗಿ, ಸರ್ಕಾರವು "ಸ್ವಯಂ-ಗಡೀಪಾರು" ಎಂಬ ಕಾರ್ಯತಂತ್ರ ಜಾರಿಗೊಳಿಸಿದೆ
ಈ ನಿಯಮ ಗಮನಾರ್ಹ ವಿವಾದ ಸೃಷ್ಟಿಸಿದೆ. ವಲಸಿಗರ ಹಕ್ಕುಗಳ ಸಂಘಟನೆಗಳು ಮತ್ತು ಕೆಲವು ರಾಜಕೀಯ ನಾಯಕರು ಈ ಕ್ರಮವನ್ನು "ಮಾನವೀಯತೆಗೆ ವಿರುದ್ಧ" ಎಂದು ಟೀಕಿಸಿದ್ದಾರೆ. ಅಕ್ರಮ ವಲಸಿಗರಲ್ಲಿ ಹಲವರು ವರ್ಷಗಟ್ಟಲೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ, ತೆರಿಗೆ ಪಾವತಿಸುತ್ತಿದ್ದಾರೆ ಮತ್ತು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಟೀಕಾಕಾರರು ವಾದಿಸಿದ್ದಾರೆ. ಅಂತಹವರನ್ನು ಒಕ್ಕಲೆಬ್ಬಿಸುವುದು ನೈತಿಕವಾಗಿ ತಪ್ಪು ಎಂದು ಅವರು ಒತ್ತಾಯಿಸಿದ್ದಾರೆ.
ಡಿಎಚ್ಎಸ್ ಪ್ರಕಾರ ಕಳೆದ ಒಂದು ತಿಂಗಳಲ್ಲಿ 5,000ಕ್ಕೂ ಹೆಚ್ಚು ಜನರು ಸಿಬಿಪಿ ಹೋಮ್ ಆಪ್ ಬಳಸಿ ಸ್ವಯಂ-ಗಡೀಪಾರಾಗಿದ್ದಾರೆ. ಆದರೆ, ಇನ್ನೂ ಲಕ್ಷಾಂತರ ಜನರು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯಲ್ಲಿದ್ದಾರೆ. ಕೆಲವರು ತಮ್ಮ ಕುಟುಂಬಗಳನ್ನು ಬಿಟ್ಟು ಹೋಗಲು ಇಷ್ಟವಿಲ್ಲದೇ ಇದ್ದರೆ, ಇತರರು ಗಡೀಪಾರಿನ ಭಯದಿಂದ ತಮ್ಮ ಜೀವನವನ್ನು ಮರುಹೊಂದಿಸಲು ಪ್ರಯತ್ನಿಸುತ್ತಿದ್ದಾರೆ.