
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಓವಲ್ ಕಚೇರಿಯಲ್ಲಿ ಭೇಟಿಯಾದರು.
ಷರತ್ತುಗಳೇ ಇಲ್ಲದ ಟ್ರಂಪ್-ಪುಟಿನ್- ಝೆಲೆನ್ಸ್ಕಿ ತ್ರಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧ
ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವ್ಲೋಡಿಮಿರ್ ಝೆಲೆನ್ಸ್ಕಿ ನಡುವೆ ಮುಖಾಮುಖಿ ಸಭೆ ಏರ್ಪಡಿಸುವ ವ್ಯವಸ್ಥೆ ಮಾಡಲಾಗಿದೆ.
ಅಮೆರಿಕ, ರಷ್ಯಾ ಮತ್ತು ಉಕ್ರೇನ್ ಶೀಘ್ರ ಮಾತುಕತೆ ಸಾಧ್ಯತೆಗಳು ನಿಚ್ಚಳವಾಗಿವೆ. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ಕೊನೆಹಾಡುವ ಪ್ರಯತ್ನವಾಗಿ ಶೀಘ್ರವೇ ತ್ರಿಪಕ್ಷೀಯ ಸಭೆ ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ (ಆಗಸ್ಟ್ 18) ಪ್ರಕಟಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಮುಖಾಮುಖಿ ಮಾಡಲು ಈಗಾಗಲೇ ವ್ಯವಸ್ಥೆ ಕೈಗೊಂಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಸೋಮವಾರವಷ್ಟೇ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಆ ಬಳಿಕ ಉಕ್ರೇನ್ ಯುದ್ಧಕ್ಕೆ ಪೂರ್ಣ ವಿರಾಮ ಹಾಕುವ ತಮ್ಮ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಸಲು, ವಾಷಿಂಗ್ಟನ್-ನಲ್ಲಿ ಝೆಲೆನ್ಸ್ಕಿ ಮತ್ತು ಐರೋಪ್ಯ ರಾಷ್ಟ್ರಗಳ ಉನ್ನತ ಮಟ್ಟದ ನಾಯಕರ ಸಭೆಯ ಆತಿಥ್ಯ ವಹಿಸಿದ್ದ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ತ್ರಿಪಕ್ಷೀಯ ಮಾತುಕತೆ: ರಾಜಿ ಸೂತ್ರಕ್ಕೆ ಬರುವಂತೆ ಟ್ರಂಪ್ ಅವರು ಉಕ್ರೇನ್ ಮೇಲೆ ಒತ್ತಡ ಹೇರುತ್ತಿದ್ದಾರೆ, ಇದರಿಂದ ಪುಟಿನ್ ಅವರಿಗೆ ಮತ್ತಷ್ಟು ಧೈರ್ಯ ತುಂಬಬಹುದು ಎಂಬ ನಿರೀಕ್ಷೆಯ ನಡುವೆ ಈ ಮಾತುಕತೆ ನಡೆದಿದೆ.
ಉಕ್ರೇನ್ ಅಧ್ಯಕ್ಷರು ಮತ್ತು ಯುರೋಪಿಯನ್ ನಾಯಕರ ಜೊತೆ ಸುದೀರ್ಘ ಮಾತುಕತೆ ಮುಕ್ತಾಯವಾದ ಬಳಿಕ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ದೂರವಾಣಿ ಕರೆ ಮಾಡಿ, ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಪುಟಿನ್ ನಡುವಿನ ಸಭೆಗೆ ಏರ್ಪಾಡು ಮಾಡಲು ಆರಂಭಿಸಿದ್ದೇನೆ, ಇದಕ್ಕಾಗಿ ಸ್ಥಳವನ್ನು ಇನ್ನೂ ನಿರ್ಧರಿಸಬೇಕಾಗಿದೆ. ಆ ಸಭೆ ನಡೆದ ನಂತರವೇ ನಾವು ತ್ರಿಪಕ್ಷೀಯ ಸಭೆ ನಡೆಸಲಿದ್ದೇವೆ. ಆ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರು ಮತ್ತು ನಾನು ಭಾಗವಹಿಸುತ್ತೇವೆ. ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಇದು ಬಹಳ ಉತ್ತಮ, ಆರಂಭಿಕ ಹೆಜ್ಜೆಯಾಗಿದೆ" ಎಂದು ಬರೆದಿದ್ದಾರೆ.
ಆದರೆ, ವ್ಲಾಡಿಮಿರ್ ಪುಟಿನ್ ಈ ಮಾತುಕತೆಗಳಿಗೆ ಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್, ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳ ನಡುವೆ ನೇರ ಮಾತುಕತೆ ಮುಂದುವರಿಸಲು ಪುಟಿನ್ ಮತ್ತು ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ. ಪುಟಿನ್ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಕೋವ್ ಅವರನ್ನು ಟಾಸ್ ಉಲ್ಲೇಖಿಸಿದೆ.
ರಷ್ಯಾ-ಉಕ್ರೇನ್ ನಡುವೆ ನಡೆಯುವ ನೇರಾನೇರಾ ಮಾತುಕತೆಗಳ ಮಟ್ಟವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಲಾಗಿದೆ ಎಂದು ಯೂರಿ ಉಷಕೋವ್ ಹೇಳಿದ್ದಾರೆ.
ಝೆಲೆನ್ಸ್ಕೀ ಹೇಳಿದ್ದೇನು?
"ರಷ್ಯಾ ಮಾತುಕತೆ ನಡೆಸಲು ಇಚ್ಛಾಶಕ್ತಿ ತೋರಿಸದೇ ಇದ್ದರೆ, ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಬೇಕು ಎಂದು ನಾವು ಅಮೆರಿಕವನ್ನು ಕೇಳುತ್ತೇವೆ" ಎಂದು ಶ್ವೇತಭವನದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಝೆಲೆನಸ್ಕೀ ಅವರು ಹೇಳಿದರು.
ಶ್ವೇತಭವನದ ಮಾತುಕತೆಗಳಲ್ಲಿ ಪಾಲ್ಗೊಂಡಿದ್ದ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರು ಫಾಕ್ಸ್ ನ್ಯೂಸ್ ಜೊತೆಗೆ ಮಾತನಾಡಿ, “ಉಕ್ರೇನ್ ಜೊತೆ ನೇರ ಮಾತುಕತೆ ನಡೆಸಲು ರಷ್ಯಾ ಸಹಕರಿಸದೇ ಇದ್ದರೆ, ಅಮೆರಿಕ ಮತ್ತು ಯುರೋಪ್, ರಷ್ಯಾ ಮೇಲೆ ಮತ್ತಷ್ಟು ಸುಂಕ ಮತ್ತು ನಿರ್ಬಂಧಗಳನ್ನು ವಿಧಿಸಲಿವೆ" ಎಂದು ಹೇಳಿದರು.
ತಮ್ಮ ಹಾಗೂ ಪುಟಿನ್ ನಡುವೆ ಯಾವುದೇ ಸಭೆ ನಡೆಯುವುದಕ್ಕೂ ಮುನ್ನ ರಷ್ಯಾ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು ಎಂದು ಈ ಹಿಂದೆ ಝೆಲೆನ್ಸ್ಕಿ ಬಯಸಿದ್ದರು, ಆದರೆ ಸೋಮವಾರ ಅವರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆ. ಉಕ್ರೇನ್ ಇಂತಹ ಷರತ್ತುಗಳನ್ನು ವಿಧಿಸಲು ಶುರುಮಾಡಿದರೆ, ರಷ್ಯಾ ಕೂಡ ಅದೇ ರೀತಿ ಮಾಡುತ್ತಾರೆ ಎಂಬುದು ಅವರ ನಿಲುವಾಗಿತ್ತು.
ಷರತ್ತುಗಳಿಲ್ಲದ ಮಾತುಕತೆ: "ಅದಕ್ಕಾಗಿಯೇ, ಯಾವ ಷರತ್ತುಗಳೂ ಇಲ್ಲದೆ ನಾವು ಭೇಟಿಯಾಗಬೇಕು ಮತ್ತು ಯುದ್ಧಕ್ಕೆ ಮುಕ್ತಾಯ ಹೇಳುವ ಈ ಮಾರ್ಗದಲ್ಲಿ ಯಾವ ಬೆಳವಣಿಗೆಗಳು ಇರಬಹುದು ಎಂಬ ಬಗ್ಗೆ ಯೋಚಿಸಬೇಕು ಎಂದು ನಾನು ನಂಬುತ್ತೇನೆ" ಎಂದು ಝೆಲೆನ್ಸ್ಕಿ ಹೇಳಿದರು.
ಇದಕ್ಕೆ ಮೊದಲು, ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಭಾವ್ಯ ಕದನ ವಿರಾಮ ಮತ್ತು ರಷ್ಯಾ ವಶಪಡಿಸಿಕೊಂಡ ಉಕ್ರೇನ್ ಪ್ರದೇಶದ ಬಗ್ಗೆ ಮುಖಾಮುಖಿ ಸಭೆಯಲ್ಲಿ ಚರ್ಚೆ ನಡೆಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದರು.
"ನಾವು ಅಧ್ಯಕ್ಷರೊಂದಿಗೆ ಮಾತನಾಡಲು ಅಧ್ಯಕ್ಷರಿಗೆ (ಝೆಲೆನ್ಸ್ಕಿ) ಅವಕಾಶ ನೀಡಲಿದ್ದೇವೆ ಮತ್ತು ನೋಡೋಣ ಅದು ಹೇಗೆ ಕಾರ್ಯರೂಪಕ್ಕೆ ಬರುತ್ತದೆ" ಎಂದು ಟ್ರಂಪ್ ಹೇಳಿದರು.
ಕ್ಯಾಪ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಆಗಸ್ಟ್ 18ರಂದು ಶ್ವೇತಭವನದ ಓವಲ್ ಕಚೇರಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಜೊತೆ ಮಾತುಕತೆ ನಡೆಸಿದರು.