Tiktok Ban US : ಟ್ರಂಪ್ ಮಧ್ಯಪ್ರವೇಶ ; ಅಮೆರಿಕದಲ್ಲಿ ಟಕ್‌ಟಾಕ್ ನಿಷೇಧ ತೆರವು
Tiktok Ban US : ನಾವು ಹಲವು ಮಂದಿಯ ಉದ್ಯೋಗ ಉಳಿಸಬೇಕಾಗಿದೆ. ಇದು 70 ಲಕ್ಷಕ್ಕೂ ಹೆಚ್ಚು ಸಣ್ಣ ವ್ಯಾಪಾರಗಳು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.
ವಿಡಿಯೊ ಶೇರಿಂಗ್ ಪ್ಲ್ಯಾಟ್‌ಫಾರ್ಮ್ ಟಿಕ್‌ಟಾಕ್‌ಗೆ ಹೇರಲಾಗಿದ್ದ ನಿಷೇಧವನ್ನು ಅಮೆರಿಕ ವಾಪಸ್ ಪಡೆದಿದೆ. ಚೀನಾದ ಬೈಟ್‌ಡ್ಯಾನ್ಸ್ ಕಂಪನಿಯ ಒಡೆತನದ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಅನ್ನು (Tiktok) ಅಮೆರಿಕದಲ್ಲಿ ಜನವರಿ 19ರಂದು ನಿಷೇಧಿಸಲಾಗಿತ್ತು.
ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ ಟಿಕ್‌ಟಾಕ್ ಮೇಲಿನ ನಿಷೇಧ ಹಿಂಪಡೆಯುವುದಾಗಿ ಭರವಸೆ ನೀಡಿದ್ದರು. ಟಿಕ್‌ಟಾಕ್ ಎಂದರೆ ನನಗೂ ಇಷ್ಟ. ಅಮೆರಿಕದಲ್ಲಿ ಟಿಕ್‌ಟಾಕ್ ಮತ್ತೆ ಬರಲಿದೆ. ಅದರಲ್ಲಿ ನಾನೂ ಕೆಲ ವಿಡಿಯೋಗಳನ್ನು ಮಾಡಿದ್ದೆ ಎಂದು ಟ್ರಂಪ್ ಹೇಳಿದ್ದಾರೆ.
ನಾನು ಟಿಕ್‌ಟಾಕ್ ಸಿಇಒ ಜತೆ ಮಾತನಾಡಿದ್ದೇನೆ. ಆ ಸಂಸ್ಥೆಯ ಶೇಕಡಾ 50 ರಷ್ಟು ಪಾಲು ಅಮೆರಿಕದ್ದಾಗಿರಬೇಕು ಎಂಬ ಷರತ್ತಿಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ನಾವು ಹಲವು ಮಂದಿಯ ಉದ್ಯೋಗ ಉಳಿಸಬೇಕಾಗಿದೆ. ಇದು 70 ಲಕ್ಷಕ್ಕೂ ಹೆಚ್ಚು ಸಣ್ಣ ವ್ಯಾಪಾರಗಳು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುತ್ತವೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಈ ನಿರ್ಧಾರಕ್ಕೆ ಟಿಕ್‌ಟಾಕ್ ಧನ್ಯವಾದ ತಿಳಿಸಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.
ಚೀನಾ ಮೂಲದ ಈ ಅಪ್ಲಿಕೇಶನ್ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡಲಿದೆ ಎಂದು ಜೋ ಬೈಡನ್ ಜ. 19 ರಿಂದ ನಿಷೇಧಿಸುವಂತೆ ಸಹಿ ಮಾಡಿದ್ದರು. ನಂತರ ಬೈಡನ್ ಅವರ ಆದೇಶವನ್ನು ಅಮೆರಿಕದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಇದೀಗ ಟ್ರಂಪ್ ನಿಷೇಧವನ್ನು ತೆರವುಗೊಳಿಸಿದ್ದಾರೆ.
ಮಾರಾಟ ಮಾಡಲು ಕಾನೂನು ರಚನೆ
ಚೀನಾ ಮೂಲದ ಬೈಟ್ ಡ್ಯಾನ್ಸ್ ಟಿಕ್‌ಟಾಕ್‌ನ ಮಾತೃ ಸಂಸ್ಥೆಯಾಗಿದ್ದು ಅದನ್ನು ಅಮೆರಿಕ ಮೂಲದ ಅನುಮೋದಿತ ಕಂಪನಿಗೆ ಮಾರಾಟ ಮಾಡದಿದ್ದರೆ ರಾಷ್ಟ್ರೀಯ ಭದ್ರತೆ ಆಧಾರದ ಮೇಲೆ ಟಿಕ್ ಟಾಕ್ ನಿಷೇಧಿಸುವ ಕಾನೂನು ರಚಿಸಲಾಗಿದೆ. ಈ ಕಾನೂನು ಸಮರ್ಪಕ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಶನಿವಾರ ಅಭಿಪ್ರಾಯಪಟ್ಟಿತ್ತು. ಕೋರ್ಟ್ ತೀರ್ಪು ನೀಡಿ ಒಂದೇ ದಿನದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದೆ.