
ಅಮೆರಿಕದಲ್ಲಿ ತೆಲಂಗಾಣ ಟೆಕ್ಕಿ ಪೊಲೀಸರ ಗುಂಡಿಗೆ ಬಲಿ: ಜನಾಂಗೀಯ ಕಿರುಕುಳದ ಆರೋಪ
"ಸಾಂಟಾ ಕ್ಲಾರಾ ಪೊಲೀಸರು ನನ್ನ ಮಗನನ್ನು ಏಕೆ ಗುಂಡಿಕ್ಕಿ ಕೊಂದರು ಎಂಬ ನಿಖರ ಕಾರಣ ನನಗೆ ತಿಳಿದಿಲ್ಲ. ಅವನ ಮೃತದೇಹ ಆಸ್ಪತ್ರೆಯಲ್ಲಿದೆ" ಎಂದು ಮೃತ ಮೊಹಮ್ಮದ್ ನಿಜಾಮುದ್ದೀನ್ ತಂದೆ ವಿದೇಶಾಂಗ ಸಚಿವ ಜೈಶಂಕರ್ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತೆಲಂಗಾಣ ಮೂಲದ 30 ವರ್ಷದ ಟೆಕ್ಕಿ ಮೊಹಮ್ಮದ್ ನಿಜಾಮುದ್ದೀನ್, ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ರೂಮ್‌ಮೇಟ್ ಜೊತೆಗಿನ ಜಗಳದ ನಂತರ ಪೊಲೀಸರು ಈ ಕೃತ್ಯ ಎಸಗಿದ್ದು, ಇದು ಜನಾಂಗೀಯ ದ್ವೇಷದಿಂದ ನಡೆದಿದೆ ಎಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ.
ಗುರುವಾರ (ಸೆಪ್ಟೆಂಬರ್ 18) ಈ ಘಟನೆ ಬೆಳಕಿಗೆ ಬಂದಿದ್ದು, ಮೃತನ ಕುಟುಂಬವು ಸಾವಿನ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದೆ. ನಿಜಾಮುದ್ದೀನ್ ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ತಮ್ಮ ಮಗನ ಮೃತದೇಹವನ್ನು ತಾಯ್ನಾಡಿಗೆ ತರಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. "ಸಾಂಟಾ ಕ್ಲಾರಾ ಪೊಲೀಸರು ನನ್ನ ಮಗನನ್ನು ಏಕೆ ಗುಂಡಿಕ್ಕಿ ಕೊಂದರು ಎಂಬ ನಿಖರ ಕಾರಣ ನನಗೆ ತಿಳಿದಿಲ್ಲ. ಅವನ ಮೃತದೇಹ ಆಸ್ಪತ್ರೆಯಲ್ಲಿದೆ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರ ಹೇಳಿಕೆಯೇನು?
ಈ ಘಟನೆ ಬಗ್ಗೆ ಸಾಂಟಾ ಕ್ಲಾರಾ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 3 ರಂದು ಇಬ್ಬರ ನಡುವೆ ಇರಿತದ ಘಟನೆ ನಡೆದಿದೆ ಎಂಬ 911 ಕರೆಯ ಮೇರೆಗೆ ಸ್ಥಳಕ್ಕೆ ತೆರಳಿದ್ದೆವು ಎಂದು ತಿಳಿಸಿದ್ದಾರೆ. "ಸ್ಥಳಕ್ಕೆ ತಲುಪಿದಾಗ, ನಿಜಾಮುದ್ದೀನ್ ಚಾಕು ಹಿಡಿದು, ಗಾಯಗೊಂಡಿದ್ದ ತನ್ನ ರೂಮ್‌ಮೇಟ್ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ನಿಜಾಮುದ್ದೀನ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಗಾಯಾಳು ರೂಮ್‌ಮೇಟ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಜನಾಂಗೀಯ ಕಿರುಕುಳದ ಆರೋಪ
ನಿಜಾಮುದ್ದೀನ್ ಫ್ಲೋರಿಡಾದ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕ್ಯಾಲಿಫೋರ್ನಿಯಾದ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತುಂಬಾ ಶಾಂತ ಮತ್ತು ಧಾರ್ಮಿಕ ವ್ಯಕ್ತಿಯಾಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಹಿಂದೆ ನಿಜಾಮುದ್ದೀನ್, ತಾನು ಜನಾಂಗೀಯ ದ್ವೇಷ, ತಾರತಮ್ಯ, ವೇತನ ವಂಚನೆ ಮತ್ತು ಅನ್ಯಾಯವಾಗಿ ಕೆಲಸದಿಂದ ವಜಾಗೊಳಿಸಿರುವ ಬಗ್ಗೆ ಸಾರ್ವಜನಿಕವಾಗಿ ದೂರು ನೀಡಿದ್ದರು.
"ನಾನು ಜನಾಂಗೀಯ ದ್ವೇಷ, ತಾರತಮ್ಯ, ಕಿರುಕುಳ, ಚಿತ್ರಹಿಂಸೆ, ವೇತನ ವಂಚನೆ ಮತ್ತು ಅನ್ಯಾಯದ ಸಂತ್ರಸ್ತನಾಗಿದ್ದೇನೆ. ಸಾಕು, ಬಿಳಿ ಜನಾಂಗೀಯ ಶ್ರೇಷ್ಠತೆ ಮತ್ತು ಜನಾಂಗೀಯವಾದಿ ಅಮೆರಿಕನ್ ಮನಸ್ಥಿತಿ ಕೊನೆಗೊಳ್ಳಬೇಕು" ಎಂದು ಅವರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ವಿದೇಶಾಂಗ ಇಲಾಖೆಯ ನೆರವಿಗೆ ಮನವಿ
ಮಜ್ಲಿಸ್ ಬಚಾವೊ ತೆಹ್ರೀಕ್ (MBT) ಪಕ್ಷದ ವಕ್ತಾರ ಅಮ್ಜದ್ ಉಲ್ಲಾ ಖಾನ್, ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕುಟುಂಬಕ್ಕೆ ಸಹಾಯ ಮಾಡುವಂತೆ ವಿದೇಶಾಂಗ ಸಚಿವರನ್ನು ಒತ್ತಾಯಿಸಿದ್ದಾರೆ. ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಾನ್ಸುಲೇಟ್ ಜನರಲ್‌ಗೆ ಈ ಬಗ್ಗೆ ಸಮಗ್ರ ವರದಿ ನೀಡಲು ಮತ್ತು ಮೃತದೇಹವನ್ನು ವಾಪಸ್ ತರಲು ಸಹಾಯ ಮಾಡಲು ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ.