Sunita Williams: ಭೂಮಿಯತ್ತ ಹೊರಟ ಸುನಿತಾ ವಿಲಿಯಮ್ಸ್​; ಫಲಿಸಿದ ಭಾರತದ ಈ ಹಳ್ಳಿಯ ಜನರ ಪ್ರಾರ್ಥನೆ
x

Sunita Williams: ಭೂಮಿಯತ್ತ ಹೊರಟ ಸುನಿತಾ ವಿಲಿಯಮ್ಸ್​; ಫಲಿಸಿದ ಭಾರತದ ಈ ಹಳ್ಳಿಯ ಜನರ ಪ್ರಾರ್ಥನೆ

Sunita Williams: 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ ಸುನೀತಾ ಅವರು ಸದ್ಯಕ್ಕೆ ಭೂಮಿಗೆ ಮರಳಲಾರರು ಎಂಬ ಸುದ್ದಿಗಳು ಬರತೊಡಗಿದಾಗ ಈ ಹಳ್ಳಿಯ ಜನರೂ ನೊಂದಿದ್ದರು.


ಸುದೀರ್ಘ 9 ತಿಂಗಳ ಕಾಲ ಸುರಕ್ಷಿತವಾಗಿದ್ದು ಹಲವಾರು ಸಂಶೋಧನೆಗಳು, ಸಾಕಷ್ಟು ಗಂಟೆಗಳ ಬಾಹ್ಯಾಕಾಶ ನಡಿಗೆ ನಡೆಸಿದ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಹಾಗೂ ಸಹ ಗಗನಯಾತ್ರಿ ಅಮೆರಿಕದ ಬುಚ್ ವಿಲ್ಮೋರ್ ಮಂಗಳವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ವಿದಾಯ ಹೇಳಿದ್ದಾರೆ. ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಯ ಮೂಲಕ ಈ ಇಬ್ಬರು ಗಗನಯಾತ್ರಿಗಳು ಭೂಮಿಯತ್ತ ಪ್ರಯಾಣ ಆರಂಭಿಸಿದ್ದು ಭಾರತೀಯ ಕಾಲಮಾನದಂತೆ ಬುಧವಾರ ಮುಂಜಾನೆ 3ರಿಂದ 4 ಗಂಟೆಯೊಳಗೆ ಭೂಮಿಯಲ್ಲಿ ಇಳಿಯಲಿದ್ದಾರೆ.

ಅವರಿಬ್ಬರ ಪ್ರಯಾಣ ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಆರಂಭಗೊಂಡಿದ್ದು, ಬರೋಬ್ಬರಿ 17 ಗಂಟೆಗಳ ಕಾಲ ಯಾತ್ರೆ ಮುಗಿಸಲಿರುವ ಕ್ಯಾಪ್ಸೂಲ್​ ಭೂಮಿಯನ್ನು ಸ್ಪರ್ಶಿಸಲಿದೆ.

ಸುನಿತಾ ಪಾಲಿಗೆ ಇದೊಂದು ಅಮೋಘ ಸಾಧನೆಯೇ ಸರಿ. ಇಂಥ ಸಾಧನೆ ಮಾಡುವುದಕ್ಕೆ ಸತತ ಪರಿಶ್ರಮ, ದೃಢ ನಿಶ್ಚಯ ಬೇಕೆ ಬೇಕು. ಕೇವಲ 8 ದಿನಗಳ ಸಂಶೋಧನೆಗೆಂದು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಅವರು. 9 ತಿಂಗಳ ಬಳಿಕ ಹಲವಾರು ಸವಾಲುಗಳನ್ನು ಎದುರಿಸಿ ಹಿಂದಿರುಗಿದ್ದು ಅವರ ಸಾಹಸವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಎಲ್ಲ ಸಾಧನೆಯ ನಡುವೆ ಅವರು ಭಾರತದ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಹಾರುವಂತೆ ಮಾಡಿದ್ದಾರೆ. ಯಾಕೆಂದರೆ ಸುನಿತಾ ಅವರು ಗುಜರಾತ್ ಮೂಲದವರು.

ಅಮೋಘ ಜೀವನೋತ್ಸಾಹ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಜೀವನೋತ್ಸಾಹಕ್ಕೆ ಸರಿಸಾಟಿಯೇ ಇಲ್ಲ. ವಯಸ್ಸು 59 ಆಗಿದ್ದರೂ ಅವರು ಅದನ್ನು ಲೆಕ್ಕಿಸಿರಲಿಲ್ಲ ಭೂಮಿಗೆ ಒಂದಲ್ಲ ಒಂದು ದಿನ ಮರಳುತ್ತೇನೆ, ತನ್ನವರನ್ನು ಸೇರುತ್ತೇನೆ ಎಂಬ ಅಚಲ ನಂಬಿಕೆಯಿಟ್ಟಿದ್ದರು.

ಸುನೀತಾ ಅವರು ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಕಾದಿದ್ದು ಕೇವಲ ನಾಸಾ ಮಾತ್ರವಲ್ಲ. ಜಗತ್ತಿನ ಮೂಲೆ ಮೂಲೆಯ ಜನರೂ ಗಗನಯಾತ್ರಿಯ ಸುರಕ್ಷಿತ ಆಗಮನದ ಸುದ್ದಿ ಕೇಳಲು ತುದಿಗಾಲಲ್ಲಿ ನಿಂತಿದ್ದರು. ಭಾರತೀಯರಂತೂ ಸುನೀತಾ ಭಾರತದಲ್ಲೇ ಬಂದಿಳಿಯುತ್ತಾರೇನೋ ಎಂದೆನಿಸುವಷ್ಟರ ಮಟ್ಟಿಗೆ ಆಕೆಗಾಗಿ ಕಾದಿದ್ದರು. ಇದಕ್ಕೆ ಕಾರಣವೂ ಇದೆ. ಸುನೀತಾ ವಿಲಿಯಮ್ಸ್ ಅವರ ಮೂಲ ಗುಜರಾತ್.

ಸುನಿತಾ ಅವರು ಹುಟ್ಟಿದ್ದು ಅಮೆರಿಕದ ಓಹಿಯೋದಲ್ಲಿ(1965ರ ಸೆಪ್ಟೆಂಬರ್ 19ರಂದು). ಅವರ ತಂದೆಯ ಹೆಸರು ದೀಪಕ್ ಪಾಂಡ್ಯಾ, ತಾಯಿ ಬೋನಿ ಪಾಂಡ್ಯಾ. ಗುಜರಾತ್‌ನ ಝುಲಾಸಾನ್ ಎಂಬ ಹಳ್ಳಿಯವರಾದ ದೀಪಕ್ ಅವರು ನರವಿಜ್ಞಾನಿಯಾಗಿದ್ದರು 1957ರಲ್ಲಿ ಗುಜರಾತ್​ನಿಂದ ಅಮೆರಿಕಕ್ಕೆ ಹೋಗಿ, ಅಲ್ಲಿನವರೇ ಆದ ಬೋನಿ ಅವರನ್ನು ವಿವಾಹವಾಗಿದ್ದರು.

ಹಳ್ಳಿಯ ಜನರಿಗೆ ಸಂಭ್ರಮ

ಝುಲಾಸಾನ್ ಎನ್ನುವುದು ಕೇವಲ 7 ಸಾವಿರ ಜನರಿರುವ ಪುಟ್ಟ ಹಳ್ಳಿ. ಆದರೆ, ಬಾಹ್ಯಾಕಾಶದವರೆಗೂ ತಲುಪಿರುವ ಸುನೀತಾ ವಿಲಿಯಮ್ಸ್ ಗೆ ನಮ್ಮ ನೆಲದ ನಂಟಿದೆ ಎನ್ನುವುದೇ ಈ ಹಳ್ಳಿಯ ಜನರಿಗೆ ಹೆಮ್ಮೆಯ ಸಂಗತಿ. ಇಲ್ಲಿ ಸುನೀತಾರ ಪೂರ್ವಿಕರ ಮನೆಯಿದೆ. ಜೊತೆಗೆ, ಅವರ ತಾತನ ಸ್ಮರಣಾರ್ಥ ಒಂದು ಗ್ರಂಥಾಲಯವನ್ನೂ ಇಲ್ಲಿ ನಿರ್ಮಿಸಲಾಗಿದೆ. ಹಾಗಂತ ಸುನೀತಾ ಅವರು ಇಲ್ಲಿನ ನಂಟನ್ನು ಕಳೆದುಕೊಂಡಿಲ್ಲ. ತಾವು ಬಾಹ್ಯಾಕಾಶ ವಿಜ್ಞಾನಿಯಾಗಿ, ಗಗನಯಾತ್ರಿಯಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಬಳಿಕವೂ 1972, 2007 ಮತ್ತು 2013ರಲ್ಲಿ ಸುನೀತಾ ಝುಲಾಸಾನ್ ಗ್ರಾಮಕ್ಕೆ ಬಂದಿದ್ದರು. ಇಲ್ಲಿನ ಶಾಲೆಗೆ ದೇಣಿಗೆಯನ್ನೂ ನೀಡಿದ್ದರು.

2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ ಸುನೀತಾ ಅವರು ಸದ್ಯಕ್ಕೆ ಭೂಮಿಗೆ ಮರಳಲಾರರು ಎಂಬ ಸುದ್ದಿಗಳು ಬರತೊಡಗಿದಾಗ ಈ ಹಳ್ಳಿಯ ಜನರೂ ನೊಂದಿದ್ದರು. ಸುನೀತಾರ ಸುರಕ್ಷಿತ ಆಗಮನಕ್ಕಾಗಿ ಈ ಹಳ್ಳಿಯ ಜನ ಅಂದಿನಿಂದಲೂ ನಿತ್ಯ ಪ್ರಾರ್ಥನೆ ಮಾಡುತ್ತಿದ್ದಾರೆ. ತಮ್ಮ ಭರವಸೆಯ ಪ್ರತೀಕವಾಗಿ ಊರಿನಲ್ಲಿ ದೀಪವೊಂದನ್ನು ಹಚ್ಚಿಟ್ಟು, ಅದು ಆರದಂತೆ ನೋಡಿಕೊಂಡಿದ್ದಾರೆ. ಈಗ ಸುನೀತಾ ಭೂಮಿಯತ್ತ ಪ್ರಯಾಣ ಆರಂಭಿಸಿರುವುದು, ಈ ಗ್ರಾಮಸ್ಥರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

Read More
Next Story