Sunita Williams: ಪೆನ್ಸಿಲ್ ಎತ್ತುವುದೂ ಕಷ್ಟ: ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್​ಗೆ ಇದೆ ಹಲವು ಸವಾಲುಗಳು
x

Sunita Williams: ಪೆನ್ಸಿಲ್ ಎತ್ತುವುದೂ ಕಷ್ಟ: ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್​ಗೆ ಇದೆ ಹಲವು ಸವಾಲುಗಳು

Sunita Williams: ಭೂಮಿಯ ಗುರುತ್ವಾಕರ್ಷಣೆಯ ಬಲವೇ ಇಲ್ಲದ ಸ್ಥಳದಲ್ಲಿ ಇಷ್ಟು ದಿನ ತಂಗಿದ್ದ ಅವರು ವಾಪಸಾದ ಬಳಿಕ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ.


ಎಲಾನ್​ ಮಸ್ಕ್​ ಮಾಲೀಕತ್ವದ ಸ್ಪೇಸ್ ಎಕ್ಸ್‌ನ ಕ್ರ್ಯೂ-10 ಅಂತರಿಕ್ಷ ವಾಹನದ ಮೂಲಕ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಲಿದ್ದಾರೆ. ಅವರ ಸ್ವಾಗತಕ್ಕೆ ವಿಶ್ವವೇ ಸಜ್ಜಾಗಿದೆ. ಸತತ 9 ತಿಂಗಳ ಕಾಲ ಭೂಮಿಯಿಂದಾಚೆ ಇರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಅಧ್ಯಯನದಲ್ಲಿ ತೊಡಗಿದ್ದ ಅವರೀಗ ಮರಳುತ್ತಿದ್ದಾರೆ ಎಂಬುದು ಖುಷಿಯ ವಿಚಾರವಾಗಿದ್ದರೂ, ಸಾಹಸಿಗಳಾದ ಅವರಿಗೆ ಭೂಮಿಗೆ ಬಂದ ಮೇಲೆ ಹಲವಾರು ಸವಾಲುಗಳು ಇವೆ.


ಭೂಮಿಯ ಗುರುತ್ವಾಕರ್ಷಣೆಯ ಬಲವೇ ಇಲ್ಲದ ಸ್ಥಳದಲ್ಲಿ ಇಷ್ಟು ದಿನ ತಂಗಿದ್ದ ಅವರು ವಾಪಸಾದ ಬಳಿಕ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ಇದು ಅವರ ಬದುಕಿನ ಪಾಲಿಗೆ ದೊಡ್ಡ ಸವಾಲೇ ಸರಿ.

ಸುನೀತಾ ಹಾಗೂ ವಿಲ್ಮೋರ್ ಅವರು ಭೂಮಿಗೆ ಮರಳುತ್ತಿದ್ದಂತೆಯೇ "ಶಿಶು ಪಾದ" (ಬೇಬಿ ಫೀಟ್) ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ ನಾಸಾದ ಮಾಜಿ ಗಗನಯಾತ್ರಿ ಲೆರಾಯ್ ಚಿಯಾವೊ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅವರು ಯಾವತ್ತೂ ಪಾದಗಳನ್ನು ನೆಲಕ್ಕೆ ಊರಿರುವುದಿಲ್ಲ. ಗುರುತ್ವ ಬಲ ಇಲ್ಲದ ಕಾರಣ ಅವರು ಅಲ್ಲಿ ಹಾರಾಡುತ್ತಲೇ ಸಂಚರಿಸಿರುತ್ತಾರೆ. ಹೀಗಾಗಿ, ಕಾಲಿನ ಚರ್ಮದ ದಪ್ಪನೆಯ ಭಾಗವು ಮೃದುವಾಗಿರುತ್ತದೆ.

ಅದು ಮೃದುವಾಗಿ ಬದಲಾಗಿರುತ್ತದೆ. ಹೀಗಾಗಿ ಅವರು ಬೇಬಿ ಫೀಟ್ ಸಮಸ್ಯೆ ಅನುಭವಿಸಬೇಕಾಗುತ್ತದೆ. ಅವರ ಪಾದಗಳು ಮಗುವಿನ ಪಾದದಂತೆ ಮೃದುವಾಗಿರುತ್ತದೆ. ಹೀಗಾಗಿ ಭೂಮಿಗೆ ಮರಳಿದ ತಕ್ಷಣ ಅಂಗಾಲಿನ ಮೇಲೆ ಒತ್ತಡ ಹಾಕಿ ನಿಲ್ಲುವುದಕ್ಕಾಗಲೀ, ನಡೆಯುವುದಕ್ಕಾಗಲೀ ಸಾಧ್ಯವಾಗದು. ವಿಶೇಷ ವ್ಯಾಯಾಮಗಳ ಮೂಲಕ ಅವರು ಮತ್ತೆ ಮೊದಲಿನ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದೂ ಚಿಯಾವೊ ತಿಳಿಸಿದ್ದಾರೆ. ಇದಲ್ಲದೆ, ತಲೆತಿರುಗುವಿಕೆ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳೂ ಅವರನ್ನು ಕಾಡುವ ಸಾಧ್ಯತೆಯಿದೆ ಎಂದಿದ್ದಾರೆ.

"ಸುನೀತಾ ಮತ್ತು ವಿಲ್ಮೋರ್ ಬಗ್ಗೆ ಯೋಚಿಸುವಾಗ ನನಗೇ ಜ್ವರ ಬಂದಂತೆ ಭಾಸವಾಗುತ್ತದೆ. ಅವರು ಸಾಮಾನ್ಯ ಸ್ಥಿತಿಗೆ ಮರಳಲು ಒಂದೆರಡು ವಾರಗಳೇ ಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಭೂಮಿಗೆ ಮರಳುವ ಗಗನಯಾತ್ರಿಗಳಿಗೆ ಭೂಮಿಯ ಗುರುತ್ವ ಬಲವು ಒಂದು ರೀತಿಯ ಶಿಕ್ಷೆಯಂತೆ ಭಾಸವಾಗಲಿದೆ. ಒಂದು ಸಣ್ಣ ಪೆನ್ನು, ಪೆನ್ಸಿಲು ಎತ್ತುವುದು ಕೂಡ ಅವರಿಗೆ ತ್ರಾಸದಾಯಕವಾಗಲಿದೆ. ಶಕ್ತಿಯನ್ನು ಮತ್ತು ಮೂಳೆಗಳ ಸಾಂದ್ರತೆಯನ್ನು ಮರಳಿ ಪಡೆಯಲು ಅವರು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read More
Next Story