ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ಆತ್ಮಾಹುತಿ ದಾಳಿ: 12 ಮಂದಿ ಸಾವು, 20 ಜನರಿಗೆ ಗಾಯ
x

ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ಆತ್ಮಾಹುತಿ ದಾಳಿ: 12 ಮಂದಿ ಸಾವು, 20 ಜನರಿಗೆ ಗಾಯ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದಾಗಿ ಶಪಥ ಮಾಡಿದ್ದಾರೆ.


ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ರಾಜಧಾನಿಯ ಜಿ-11 (G-11) ಪ್ರದೇಶದಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರವೇಶ ದ್ವಾರದ ಬಳಿ ಈ ಸ್ಫೋಟ ಸಂಭವಿಸಿದೆ. ರಕ್ಷಣಾ ಅಧಿಕಾರಿಗಳು ಸ್ಥಳದಿಂದ 12 ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಟೆಲಿವಿಷನ್ (PTV) ವರದಿ ಮಾಡಿದೆ. "ಸ್ಫೋಟದಲ್ಲಿ ಮೃತಪಟ್ಟ 12 ಮಂದಿಯ ದೇಹಗಳನ್ನು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PIMS) ಆಸ್ಪತ್ರೆಗೆ ರವಾನಿಸಲಾಗಿದೆ," ಎಂದು ಅದು 'X' ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಗಾಯಗೊಂಡ 20 ಜನರನ್ನು ಪಿಐಎಮ್​ಎಸ್​ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಅದು ಹೇಳಿದೆ.

ಆತ್ಮಾಹುತಿ ದಾಳಿ ಎಂದು ಖಚಿತ

ಇದು ಆತ್ಮಾಹುತಿ ಬಾಂಬ್ ದಾಳಿ ಎಂದು ಪಿಟಿವಿ ಖಚಿತಪಡಿಸಿದ್ದು, "ಆತ್ಮಾಹುತಿ ಬಾಂಬರ್‌ನ ತಲೆಯು ರಸ್ತೆಯ ಮೇಲೆ ಬಿದ್ದಿರುವುದು ಪತ್ತೆಯಾಗಿದೆ" ಎಂದು ವರದಿ ಮಾಡಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ಅಥವಾ ವ್ಯಕ್ತಿ ಹೊತ್ತುಕೊಂಡಿಲ್ಲ. ಆದರೆ, ಅಫ್ಘಾನಿಸ್ತಾನದಿಂದ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ನಿಭಾಯಿಸುವ ಕುರಿತು ಪಾಕಿಸ್ತಾನ ಮತ್ತು ಅಫ್ಘಾನ್ ತಾಲಿಬಾನ್ ನಡುವಿನ ಮೂರನೇ ಸುತ್ತಿನ ಮಾತುಕತೆ ವಿಫಲವಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದಾಗಿ ಶಪಥ ಮಾಡಿದ್ದಾರೆ.

Read More
Next Story