
ಶ್ರೀಲಂಕಾ ಸಮುದ್ರದಲ್ಲಿ ಇರಾನ್ ನೌಕೆಯ ಮೇಲೆ ಜಲಾಂತರ್ಗಾಮಿ ದಾಳಿ: 101 ಮಂದಿ ನಾಪತ್ತೆ
Submarine Attack| ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ನೌಕೆಯ ಮೇಲೆ ಸಬ್‌ಮರೀನ್ ದಾಳಿ ನಡೆದಿದ್ದು, 101 ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ಘಟನೆಯಲ್ಲಿ 78 ಮಂದಿ ಗಾಯಗೊಂಡಿದ್ದು, ಶ್ರೀಲಂಕಾ ನೌಕಾಪಡೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಭೀಕರ ಕಡಲ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್ ದೇಶಕ್ಕೆ ಸೇರಿದ ಹಡಗಿನ ಮೇಲೆ ಸಬ್‌ಮರೀನ್ (ಜಲಾಂತರ್ಗಾಮಿ) ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 101 ಜನರು ನಾಪತ್ತೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಘಟನೆಯ ವಿವರ
ಬುಧವಾರ ಮುಂಜಾನೆ ಇರಾನ್ ನೌಕೆಯಿಂದ ತುರ್ತು ಸಂಕೇತ ಬಂದ ತಕ್ಷಣ ಶ್ರೀಲಂಕಾ ಮಿಲಿಟರಿ ಬೃಹತ್ ಮಟ್ಟದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿತು. "ಇರಾನ್ ಹಡಗಿನಿಂದ ತುರ್ತು ಸಂದೇಶ ಬಂದ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆಯು ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಿದೆ" ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ವಿದೇಶಾಂಗ ಸಚಿವರ ಹೇಳಿಕೆ
ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತ ಹೇರತ್ ಈ ಕುರಿತು ಸಂಸತ್ತಿಗೆ ಮಾಹಿತಿ ನೀಡಿ, "ಮುಳುಗುತ್ತಿದ್ದ ನೌಕೆಯಿಂದ ಕನಿಷ್ಠ 30 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಶ್ರೀಲಂಕಾ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ," ಎಂದು ಹೇಳಿದ್ದಾರೆ. ಆದರೆ, ಕಾರ್ಯಾಚರಣೆಯ ಹೆಚ್ಚಿನ ತಾಂತ್ರಿಕ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಹೆಚ್ಚುತ್ತಿರುವ ನಿಗೂಢತೆ
ಈ ದಾಳಿಗೆ ಜವಾಬ್ದಾರರು ಯಾರು? ಹಡಗಿನಲ್ಲಿ ಒಟ್ಟು ಎಷ್ಟು ಜನರಿದ್ದರು? ಮತ್ತು ದಾಳಿ ನಡೆಸಿದ ಸಬ್‌ಮರೀನ್ ಯಾವ ದೇಶಕ್ಕೆ ಸೇರಿದ್ದು? ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹೊತ್ತಲ್ಲೇ ಈ ದಾಳಿ ನಡೆದಿರುವುದು ಅಂತರಾಷ್ಟ್ರೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರಸ್ತುತ ಶ್ರೀಲಂಕಾ ರಕ್ಷಣಾ ಇಲಾಖೆ ಮತ್ತು ಇರಾನ್ ಅಧಿಕಾರಿಗಳಿಂದ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಕಾಯಲಾಗುತ್ತಿದೆ.

