ಶ್ರೀಲಂಕಾ ಸಂಸತ್‌  ವಿಸರ್ಜನೆ
x

ಶ್ರೀಲಂಕಾ ಸಂಸತ್‌ ವಿಸರ್ಜನೆ


ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಸಂಸತ್ ವಿಸರ್ಜನೆ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್‌ ಮಂಗಳವಾರ ಮಧ್ಯರಾತ್ರಿಯಿಂದ ವಿಸರ್ಜನೆ ಆಗಿದ್ದು, ನವೆಂಬರ್ 14 ರಂದು ಚುನಾವಣೆ ನಡೆಯಲಿದೆ.

ಸಂಸತ್ತನ್ನು ವಿಸರ್ಜಿಸಿ ಕ್ಷಿಪ್ರ ಮತದಾನಕ್ಕೆ ಆದೇಶಿಸುವುದಾಗಿ ದಿಸ್ಸನಾಯಕೆ ಹೇಳಿದ್ದಾರೆ. ಕೊನೆಯ ಅಧಿವೇಶನ ಆಗಸ್ಟ್ 2020 ರಲ್ಲಿ ನಡೆದಿದ್ದು, ನಿಗದಿತ ಅವಧಿಗಿಂತ 11 ತಿಂಗಳು ಮೊದಲೇ ವಿಸರ್ಜನೆಯಾಗಿದೆ.

ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ದಿಸ್ಸನಾಯಕೆ(56) ಅವರು ಸೋಮವಾರ ಮು.ನ್ಯಾ. ಜಯಂತ ಜಯಸೂರ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ದಿನೇಶ್ ಗುಣವರ್ಧನೆ ಅವರ ಸ್ಥಾನಕ್ಕೆ ಹರಿಣಿ ಅಮರಸೂರ್ಯ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಶ್ರೀಲಂಕಾದ 16 ನೇ ಪ್ರಧಾನಿ. ಎನ್‌ಪಿಪಿ ಸಂಸದರಾದ ವಿಜಿತಾ ಹೆರಾತ್ ಮತ್ತು ಲಕ್ಷ್ಮಣ್ ನಿಪುಣರಾಚಿ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚುನಾವಣೆ ನಡೆಸಲು ಸಿದ್ಧ: ಯಾವುದೇ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಸಿದ್ಧ ಎಂದು ಚುನಾವಣಾ ಆಯೋಗ ಘೋಷಿಸಿದೆ. ಸಾರ್ವತ್ರಿಕ ಚುನಾವಣೆಗೆ ಅಂದಾಜು ವೆಚ್ಚ 11 ಶತಕೋಟಿ ರೂ. ವೆಚ್ಚ ಆಗಲಿದೆ. ರಾಷ್ಟ್ರಪತಿ ಚುನಾವಣೆಗೆ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಸಾರ್ವತ್ರಿಕ ಚುನಾವಣೆಗೂ ಬಳಸಲಾಗುವುದು ಎಂದು ಚುನಾವಣಾ ಆಯೋಗವು ಗಮನಿಸಿದೆ.

ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರಮುನ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ನಾಯಕ ದಿಸ್ಸನಾಯಕೆ ಅವರು ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (ಎಸ್‌ಜೆಬಿ)ದ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು. ದಿಸ್ಸನಾಯಕೆ ಅವರು 1,05,264 ಪ್ರಾಶಸ್ತ್ಯ ದೊಂದಿಗೆ 5.74 ದಶಲಕ್ಷ ಹಾಗೂ ಪ್ರೇಮದಾಸ ಅವರು 1,67,867 ಪ್ರಾಶಸ್ತ್ಯದೊಂದಿಗೆ 4.53 ದಶಲಕ್ಷ ಮತ ಪಡೆದರು.

Read More
Next Story