ಯುಎಇನಲ್ಲಿ ಹೊಸ ನಿಯಮಗಳ ಜಾರಿ; ಭಾರತೀಯರ ವೀಸಾ ಅರ್ಜಿ ತಿರಸ್ಕಾರ ಪ್ರಮಾಣ ಹೆಚ್ಚಳ
x
ದುಬೈ ವೀಸಾ ಅರ್ಜಿ. ಸಾಂದರ್ಭಿಕ ಚಿತ್ರ

ಯುಎಇನಲ್ಲಿ ಹೊಸ ನಿಯಮಗಳ ಜಾರಿ; ಭಾರತೀಯರ ವೀಸಾ ಅರ್ಜಿ ತಿರಸ್ಕಾರ ಪ್ರಮಾಣ ಹೆಚ್ಚಳ

ವೀಸಾ ನಿರಾಕರಣೆಯ ಬೆಳವಣಿಗೆಯು ಡಿಸೆಂಬರ್ 8ರಿಂದ ಜನವರಿ 14 ರವರೆಗೆ ದುಬೈ ಶಾಪಿಂಗ್ ಫೆಸ್ಟಿವಲ್ ಸಮಯದಲ್ಲಿ ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಲು ಯೋಜಿಸಿದ್ದ ಪ್ರಯಾಣಿಕರಿಗೆ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ.


ವೀಸಾ ನೀತಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಠಿಣ ನಿಯಮಗಳನ್ನು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ದುಬೈಗೆ ಭೇಟಿ ನೀಡಲು ಬಯಸುವ ಭಾರತೀಯ ಪ್ರವಾಸಿಗರಿಗೆ ವೀಸಾ ನಿರಾಕರಣೆಯಲ್ಲಿ ಪ್ರಕರಣಗಳು ಹೆಚ್ಚಾಗಿವೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

ವೀಸಾ ನಿರಾಕರಣೆಯ ಬೆಳವಣಿಗೆಯು ಡಿಸೆಂಬರ್ 8ರಿಂದ ಜನವರಿ 14 ರವರೆಗೆ ದುಬೈ ಶಾಪಿಂಗ್ ಫೆಸ್ಟಿವಲ್ ಸಮಯದಲ್ಲಿ ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಲು ಯೋಜಿಸಿದ್ದ ಪ್ರಯಾಣಿಕರಿಗೆ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಭಾನುವಾರ (ಡಿಸೆಂಬರ್ 8) ವರದಿ ಮಾಡಿದೆ.

ವಿಹಾರ್ ಟ್ರಾವೆಲ್ಸ್​​ನ ನಿರ್ದೇಶಕ ರಿಷಿಕೇಶ್ ಪೂಜಾರಿ ಅವರು ಈ ಅನಪೇಕ್ಷಿತ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. "ನಾವು ಮಿತಿ ಮೀರಿದ ವೀಸಾ ತಿರಸ್ಕಾರದ ಪ್ರಸಂಗವನ್ನು ಎದುರಿಸುತ್ತಿದ್ದೇವೆ. ಈ ಹಿಂದೆ ದುಬೈ ಪ್ರವಾಸ ವೀಸಾ ಅರ್ಜಿ ಶೇ.99ರಷ್ಟು ಸ್ವೀಕೃತಿಯಾಗುತ್ತಿದ್ದವು. ಈಗ, ಉತ್ತಮವಾಗಿ ಸಂಪೂರ್ಣವಾಗಿ ಸಜ್ಜುಗೊಂಡಿರುವ ಪ್ರವಾಸಿಗರಿಗೂ ವೀಸಾ ಸಿಗುತ್ತಿಲಕ್ಲ. ನನ್ನ ವತಿಯಿಂದ ನಾಲ್ಕು ಜನರು ದುಬೈ ವೀಸಾದ ಅರ್ಜಿಯನ್ನು ನಿಖರವಾಗಿ ಸಿದ್ಧಪಡಿಸಿದ್ದರಯ. ಹೋಟೆಲ್ ಬುಕಿಂಗ್ ಮತ್ತು ವಿಮಾನ ಯಾನದ ವಿವರಗಳಂತಹ ಸಂಬಂಧಿತ ಎಲ್ಲ ದಾಖಲೆಗಳನ್ನು ಕೊಟ್ಟಿದ್ದರು. ಆದಾಗ್ಯೂ, ಅವರ ವೀಸಾ ಅರ್ಜಿ ತಿರಸ್ಕರಿಸಲಾಗಿದೆ" ಎಂದು ಪೂಜಾರಿ ಹೇಳಿದ್ದಾರೆ.

ಕೇವಲ ಒಂದು ವಾರದಲ್ಲಿ, ನಾನು ಸುಮಾರು ಎಂಟು ಅರ್ಜಿಗಳು ತಿರಸ್ಕೃತಗೊಂಡಿದ್ದನ್ನು ನೋಡಿದ್ದೇನೆ" ಎಂದು ಅವರು ಹೇಳಿದ್ದಾರೆ.

ವರದಿ ಪ್ರಕಾರ, ಕುಟುಂಬದ ಸದಸ್ಯರ ವೀಸಾ ಅರ್ಜಿ ತಿರಸ್ಕೃತಗೊಂಡ ರೀತಿಯಲ್ಲಿಯೇ ಮತ್ತೊಂದು 35 ಜನರ ಗುಂಪು ಇದೇ ಸಮಸ್ಯೆ ಎದುರಿಸಿದ್ದಾರೆ. ವೀಸಾ ಶುಲ್ಕ, ಮರುಪಾವತಿಸಲಾಗದ / ಭಾಗಶಃ ಮರುಪಾವತಿಸಬಹುದಾದ ಪೂರ್ವ ಕಾಯ್ದಿರಿಸಿದ ವಿಮಾನ ಟಿಕೆಟ್​ಗಳು, ಹೋಟೆಲ್ ಬುಕಿಂಗ್​ ಮತ್ತು ಯುಎಇಗೆ ಹೋದ ಮೇಲೆ ಯೋಜಿಸಲಾಗಿದ್ದ ಇತರ ಚಟುವಟಿಕೆಗಳ ಬುಕಿಂಗ್ ಕೂಡ ಕ್ಯಾನ್ಸಲ್ ಮಾಡುವಂತಾಗಿದೆ.

ವೀಸಾ ಸೇವೆಗಳ ಕಂಪನಿ ವಿಎಫ್ಎಸ್ ಗ್ಲೋಬಲ್ ಪ್ರಕಾರ, ಯುಎಇಗೆ 30 ದಿನಗಳ ಪ್ರವಾಸಿ ವೀಸಾಗೆ 6,710 ರೂಪಾಯಿ (ಸೇವಾ ಶುಲ್ಕ ಮತ್ತು ತೆರಿಗೆ ಸೇರಿದಂತೆ) ಪಾವತಿ ಮಾಡಬೇಕಾಗಿದೆ.

ನಿಯಮಗಳ ಪ್ರಕಾರ, ಪ್ರಯಾಣಿಕರು ಕಾಯ್ದಿರಿಸಲಾದ ಮರು ಪ್ರಯಾಣದ ವಿಮಾನ ಟಿಕೆಟ್​ ಮತ್ತು ಹೋಟೆಲ್ ಬುಕಿಂಗ್ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ. ಯುಎಇಯಲ್ಲಿ ತಮ್ಮ ಸಂಬಂಧಿಕರೊಂದಿಗೆ ಉಳಿಯಲು ಬಯಸುವವರು, ಅಲ್ಲಿನವರ ಬಾಡಿಗೆ ಒಪ್ಪಂದ ಮತ್ತು ಎಮಿರೇಟ್ಸ್ ಐಡಿಯಂತಹ ದಾಖಲೆಗಳು ಸೇರಿದಂತೆ ವಸತಿ ದಾಖಲೆಗಳನ್ನೂ ನೀಡಬೇಕಾಗುತ್ತದೆ.

ಪಸ್ಸಿಯೋ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್​ನ ನಿರ್ದೇಶಕ ನಿಖಿಲ್ ಕುಮಾರ್ ಮಾತನಾಡಿ, ಈ ಹಿಂದೆ ದುಬೈ ವೀಸಾಗಳ ನಿರಾಕರಣೆ ಪ್ರಮಾಣ ಕೇವಲ 1ರಿಂದ 2% ಆಗಿತ್ತು. ನಾವು ಈಗ ಪ್ರತಿದಿನ ಸಲ್ಲಿಸುವ ಸುಮಾರು 100 ಅರ್ಜಿಗಳಲ್ಲಿ ಕನಿಷ್ಠ 5ರಿಂದ 6 ವೀಸಾ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಕಾಯ್ದಿರಿಸಲಾದ ವಿಮಾನ ಟಿಕೆಟ್​ಗಳು ಮತ್ತು ಹೋಟೆಲ್ ವಿವರಗಳನ್ನು ನೀಡಿದರೂ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹಸ್ಮುಖ್ ಟ್ರಾವೆಲ್ಸ್​​ನ ನಿರ್ದೇಶಕ ವಿಜಯ್ ಠಕ್ಕರ್, "ನಮ್ಮ ಇಬ್ಬರು ಪ್ರಯಾಣಿಕರ ದುಬೈ ವೀಸಾ ಅರ್ಜಿಗಳು ತಿರಸ್ಕೃತಗೊಂಡಿವೆ. ಅವರು ದುಬೈನಲ್ಲಿ ಸಂಬಂಧಿಕರೊಂದಿಗೆ ಉಳಿಯಲು ಯೋಜಿಸುತ್ತಿದ್ದರು. ವೀಸಾಗೆ ಅರ್ಜಿ ಸಲ್ಲಿಸುವಾಗ ಹೊಸ ವೀಸಾ ಅವಶ್ಯಕತೆಗಳ ಪ್ರಕಾರ ನಾವು ಎಲ್ಲಾ ಸಂಬಂಧಿತ ದಾಖಲೆಗಳನ್ನು ನೀಡಿದ್ದೇವೆ. ಆದರೂ, ಅವರ ಅರ್ಜಿಗಳನ್ನು ತಿರಸ್ಕರಿಸಲಾಯಿತು. ಇದು ಪ್ರಯಾಣಿಕರಿಗೆ ಗಮನಾರ್ಹ ಹಣಕಾಸಿನ ನಷ್ಟಕ್ಕೆ ಕಾರಣವಾಯಿತು. ಅವರು ವೀಸಾ ಶುಲ್ಕಕ್ಕಾಗಿ ಸುಮಾರು 14,000 ರೂ.ಗಳನ್ನು ಖರ್ಚು ಮಾಡಿದ್ದರು ಮತ್ತು ಟಿಕೆಟ್ ಕ್ಯಾನ್ಸಲ್​ ವೆಚ್ಚವು ಇನ್ನೂ 20,000 ರೂ ಮತ್ತು ಅದಕ್ಕಿಂತ ಹೆಚ್ಚಿನದಾಗಿತ್ತು ಎಂದು ಹೇಳಿದ್ದಾರೆ.

ಹೊಸ ನಿಯಮವೇನು?

ಹೊಸ ನಿಯಮದ ಪ್ರಕಾರ ವೀಸಾಗೆ ಅರ್ಜಿ ಸಲ್ಲಿಸುವವರು ಕಾಯ್ದಿರಿಸಲಾದ (ಖಚಿತಗೊಂಡ) ಮರು ಪ್ರಯಾಣದ ವಿಮಾನ ಟಿಕೆಟ್ ನೀಡಬೇಕು. ಅಲ್ಲಿ ತಮ್ಮ ಸಂಬಂಧಿಕರೊಂದಿಗೆ ಉಳಿಯಲು ಬಯಸುವವರು, ಬಾಡಿಗೆ ಕರಾರು, ಯುಎಇ ಕಾರ್ಡ್​ ಸೇರಿದಂತೆ ಎಲ್ಲ ದಾಖಲೆಗಳನ್ನು ನೀಡಬೇಕು. ಹೋಟೆಲ್​ ಬುಕಿಂಗ್ ಮತ್ತು ಅಲ್ಲಿನ ಚಟುವಟಿಕೆಗಳಿಗೆ ಮೊದಲೇ ಬುಕಿಂಗ್ ಮಾಡಿಕೊಂಡು ಅದರ ದಾಖಲೆಗಳನ್ನೂ ನೀಡಬೇಕು. ಒಂದು ದಾಖಲೆಯಲ್ಲಿ ವ್ಯತ್ಯಾಸವಾದರೂ ಅರ್ಜಿ ತಿರಸ್ಕೃತಗೊಳ್ಳುತ್ತವೆ.

Read More
Next Story