
6 ಭಾರತೀಯರಿದ್ದ ಸರಕು ಹಡಗನ್ನು ಅಪಹರಿಸಿದ ಕಡಲ್ಗಳ್ಳರು
‘ಲುಟಫ್’ ಹೆಸರಿನ ವ್ಯಾಪಾರಿ ಹಡಗನ್ನು ಸೋಮವಾರ ಪಂಟ್‌ಲ್ಯಾಂಡ್‌ನ ಎಯ್ಲ್ ಜಿಲ್ಲೆಯ ಮರ್ರಾಯಾ ಕರಾವಳಿಯಿಂದ ಸುಮಾರು ಮೂರೂವರೆ ನಾಟಿಕಲ್ ಮೈಲಿ ದೂರದಲ್ಲಿ ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಸೊಮಾಲಿಯಾದ ಪಂಟ್‌ಲ್ಯಾಂಡ್ ಕರಾವಳಿಯಲ್ಲಿ ಕ್ಯಾಮರೂನ್ ಧ್ವಜ ಹೊಂದಿದ್ದ ಸರಕು ಹಡಗನ್ನು ಕಡಲ್ಗಳ್ಳರು ಅಪಹರಿಸಿರುವ ಘಟನೆ ನಡೆದಿದೆ. 10 ಮಂದಿ ಸಿಬ್ಬಂದಿ ಇದ್ದ ಈ ಹಡಗಿನಲ್ಲಿ ಕನಿಷ್ಠ ಆರು ಭಾರತೀಯ ನಾವಿಕರು ಇದ್ದರು ಎಂದು ವರದಿಯಾಗಿದೆ.
‘ಲುಟಫ್’ ಹೆಸರಿನ ವ್ಯಾಪಾರಿ ಹಡಗನ್ನು ಸೋಮವಾರ ಪಂಟ್‌ಲ್ಯಾಂಡ್‌ನ ಎಯ್ಲ್ ಜಿಲ್ಲೆಯ ಮರ್ರಾಯಾ ಕರಾವಳಿಯಿಂದ ಸುಮಾರು ಮೂರೂವರೆ ನಾಟಿಕಲ್ ಮೈಲಿ ದೂರದಲ್ಲಿ ಕಡಲ್ಗಳ್ಳರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
8 ಕಡಲ್ಗಳ್ಳರಿಂದ ಹಡಗು ಅಪಹರಣ
ಎಂಟು ಮಂದಿ ಕಡಲ್ಗಳ್ಳರು ಹಡಗನ್ನು ವಶಕ್ಕೆ ಪಡೆದು ಪಂಟ್‌ಲ್ಯಾಂಡ್‌ನ ಡಂಗೋರೊಯೊ ಜಿಲ್ಲೆಯ ಗರ್ಮಾಲ್ ಕರಾವಳಿಯತ್ತ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಇದೇ ಗುಂಪು ಈ ಹಿಂದೆ ಏಪ್ರಿಲ್ 26ರಂದು ‘ಸ್ವಾರ್ಡ್’ ಹೆಸರಿನ ಮತ್ತೊಂದು ವ್ಯಾಪಾರಿ ಹಡಗು ಅಪಹರಣ ಪ್ರಕರಣದಲ್ಲೂ ಭಾಗಿಯಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಹಡಗಿನಲ್ಲಿ ಟರ್ಕಿಯ ಸೇನಾ ತರಬೇತಿ ಕೇಂದ್ರಕ್ಕೆ ಸಾಗಿಸಲಾಗುತ್ತಿದ್ದ ಶಸ್ತ್ರಾಸ್ತ್ರಗಳು, ಸಂವಹನ ಸಾಧನಗಳು ಹಾಗೂ ಉಪಗ್ರಹ ಉಪಕರಣಗಳು ಇದ್ದವು ಎಂದು ಸೋಮಾಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಡಗಿನಲ್ಲಿದ್ದ 10 ಸಿಬ್ಬಂದಿಯಲ್ಲಿ ಆರು ಭಾರತೀಯರು, ಒಬ್ಬ ಟರ್ಕಿ ಪ್ರಜೆ, ಒಬ್ಬ ಜಾರ್ಜಿಯಾ ಪ್ರಜೆ ಹಾಗೂ ಇಬ್ಬರು ಸರ್ಬಿಯಾದ ಭದ್ರತಾ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.
ಹಡಗಿನ ಸ್ಥಿತಿ ಇನ್ನೂ ಸ್ಪಷ್ಟವಿಲ್ಲ
ಘಟನೆ ಸಂಬಂಧ ಭಾರತ ಅಥವಾ ಟರ್ಕಿ ಸರ್ಕಾರಗಳು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಡಗಿನಲ್ಲಿರುವ ಸಿಬ್ಬಂದಿಯ ಸುರಕ್ಷತೆ ಹಾಗೂ ಶಸ್ತ್ರಾಸ್ತ್ರ ಸೇರಿ ಸರಕುಗಳ ಸ್ಥಿತಿಯ ಬಗ್ಗೆಯೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಟರ್ಕಿ ಹೆಲಿಕಾಪ್ಟರ್, ಡ್ರೋನ್‌ಗಳಿಂದ ನಿಗಾ
ಹಡಗು ಅಪಹರಣದ ನಂತರ ಟರ್ಕಿ ಒಡೆತನದ ಎರಡು ಹಡಗುಗಳು LUTUF ಹಡಗಿನತ್ತ ತೆರಳಿದ್ದವು ಎಂದು ವರದಿಯಾಗಿದೆ. ಇದೇ ವೇಳೆ ಟರ್ಕಿಯ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಪ್ರದೇಶದ ಮೇಲೆ ನಿಗಾ ಇರಿಸಿದ್ದವು ಎನ್ನಲಾಗಿದೆ. ಮಂಗಳವಾರ ಇಬ್ಬರು ಇದ್ದ ಸಣ್ಣ ದೋಣಿಯೊಂದು ಅಪಹರಣಕ್ಕೊಳಗಾದ ಹಡಗಿನ ಬಳಿ ತೆರಳಿ, ಸೊಮಾಲಿಯಾದಲ್ಲಿ ಸಾಮಾನ್ಯವಾಗಿ ಬಳಸುವ ‘ಖಾತ್’ ಎಂಬ ಉತ್ತೇಜಕ ಪದಾರ್ಥವನ್ನು ಹಡಗಿಗೆ ತಲುಪಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಆ ದೋಣಿ ಕರಾವಳಿಗೆ ಹಿಂದಿರುಗಿದ ಬಳಿಕ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ದಾಳಿಯನ್ನು ಯಾರು ನಡೆಸಿದರು ಹಾಗೂ ಮೃತಪಟ್ಟವರು ಹಡಗು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದರೇ ಎಂಬುದು ಸ್ವತಂತ್ರವಾಗಿ ದೃಢಪಟ್ಟಿಲ್ಲ. ಸೊಮಾಲಿಯಾ ಕರಾವಳಿಯಲ್ಲಿ ಮತ್ತೊಮ್ಮೆ ಕಡಲ್ಗಳ್ಳರ ಚಟುವಟಿಕೆ ಆತಂಕ ಮೂಡಿಸಿದ್ದು, ಆರು ಭಾರತೀಯ ನಾವಿಕರ ಸುರಕ್ಷತೆ ಬಗ್ಗೆ ಈಗ ಕಳವಳ ವ್ಯಕ್ತವಾಗಿದೆ.

