
ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ
ಆಕ್ಸಿಯಂ-4 ಬಾಹ್ಯಾಕಾಶ ಯಾನ ಮತ್ತೆ ಮುಂದೂಡಿಕೆ
ರಷ್ಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಯೋಗಾಲಯದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವ ಕಾರಣ ಆಕ್ಸಿಯಂ-4 ಬಾಹ್ಯಾಕಾಶ ಯಾನ ಮುಂದೂಡಲಾಗಿದೆ ಎಂದು ಆಕ್ಸಿಯಂ ಸ್ಪೇಸ್ ತಿಳಿಸಿದೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಒಳಗೊಂಡು ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ʼಆಕ್ಸಿಯಂ - 4ʼ ಗಗನನೌಕೆಯ ಉಡಾವಣೆಯನ್ನು ಜೂನ್ 22ಕ್ಕೆ ಮುಂದೂಡಲಾಗಿದೆ ಎಂದು ಆಕ್ಸಿಯಂ ಸ್ಪೇಸ್ ತಿಳಿಸಿದೆ.
ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ (ಜೂ.19) ಸ್ಪೇಸ್ ಎಕ್ಸ್‌ನ ಫಾಲ್ಕನ್ - 9 ರಾಕೆಟ್ ಬಳಸಿ ಉಡಾವಣೆ ಮಾಡಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ರಷ್ಯಾದ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಪ್ರಯೋಗಾಲಯದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವ ಕಾರಣದಿಂದ ವಿಜ್ಞಾನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉಡಾವಣೆಯನ್ನು ಮತ್ತೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಐದು ಬಾರಿ ಮುಂದೂಡಿಕೆ
ಫಾಲ್ಕನ್-9 ರಾಕೆಟ್ ಉಡಾವಣೆಯನ್ನು ಐದು ಬಾರಿ ಮುಂದೂಡಲಾಗಿದೆ. ಈ ಮೊದಲ ನಿಗದಿಯಂತೆ ಮೇ 29ರಂದು ಉಡಾವಣೆಗೆ ನಿರ್ಧರಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಜೂ. 8, 10,11 ಹಾಗೂ 19ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಮುಂದೂಡಿಕೆಯಾಗಿದ್ದು, ಜೂನ್ 22ಕ್ಕೆ ಹೊಸ ಉಡಾವಣೆ ದಿನಾಂಕ ಘೋಷಿಸಲಾಗಿದೆ.
ಬಾಹ್ಯಾಕಾಶದಲ್ಲಿ 12 ಪ್ರಯೋಗ
ಬಾಹ್ಯಾಕಾಶಕ್ಕೆ ತೆರಳುತ್ತಿರುವ ಶುಭಾಂಶು ಶುಕ್ಲಾ ಅವರು ಆಹಾರ ಮತ್ತು ಪೌಷ್ಟಿಕಾಂಶ ಸಂಬಂಧಿತ ಪ್ರಯೋಗಗಳನ್ನು ಮಾಡಲಿದ್ದಾರೆ. ತೀರಾ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವ ಪರಿಸರದಲ್ಲಿ ಕಾಳುಗಳನ್ನು ಮೊಳಕೆ ಬರಿಸುವುದು ಸೇರಿದಂತೆ ಇತ್ಯಾದಿ ಪ್ರಯೋಗಗಳು ಒಳಗೊಂಡಿರುತ್ತವೆ. ಇಸ್ರೋ ಸಂಸ್ಥೆಯಿಂದ ಏಳು ಪ್ರಯೋಗಗಳಿದ್ದರೆ, ನಾಸಾ ಜತೆಗೂಡಿ ಐದು ಜಂಟಿ ಪ್ರಯೋಗಗಳು ಇದರಲ್ಲಿ ನಡೆಯಲಿವೆ.