ಯಹೂದಿಗಳನ್ನು ಗುರಿಯಾಗಿಸಿ ಶೂಟೌಟ್‌; ಸಿಡ್ನಿಯಲ್ಲಿ 15 ಜನರ ಮಾರಣಹೋಮ
x
ಸಿಡ್ನಿಯಲ್ಲಿ ನಡೆದ ಶೂಟೌಟ್‌

ಯಹೂದಿಗಳನ್ನು ಗುರಿಯಾಗಿಸಿ ಶೂಟೌಟ್‌; ಸಿಡ್ನಿಯಲ್ಲಿ 15 ಜನರ ಮಾರಣಹೋಮ

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಯಹೂದಿಗಳ ಧಾರ್ಮಿಕ ಕಾರ್ಯಕ್ರಮವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆದಿದ್ದು, ಪರಿಣಾಮ ಹದಿನೈದು ಜನರು ಸಾವನ್ನಪ್ಪಿದರು


Click the Play button to hear this message in audio format

ಆಸ್ಟ್ರೇಲಿಯಾದ ಭಾರೀ ಶೂಟೌಟ್‌ ನಡೆದಿದ್ದು, ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿದ ಪರಿಣಾಮ ಬರೋಬ್ಬರಿ 15ಜನ ಬಲಿಯಾಗಿದ್ದಾರೆ. ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಯಹೂದಿಗಳ ಧಾರ್ಮಿಕ ಕಾರ್ಯಕ್ರಮವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆದಿದ್ದು, ಪರಿಣಾಮ ಹದಿನೈದು ಜನರು ಸಾವನ್ನಪ್ಪಿದರು ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಸ್ಟ್ರೇಲಿಯಾದ ಅತಿದೊಡ್ಡ ನಗರವಾಗಿರುವ ಸಿಡ್ನಿಯಲ್ಲಿ ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಹನುಕ್ಕಾ ಕಾರ್ಯಕ್ರಮ ಪ್ರತಿವರ್ಷದಂತೆ ಭಾನುವಾರ ನಡೆಯುತ್ತಿತ್ತು. ಇದರಲ್ಲಿ ಸುಮಾರು 1,000 ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಕೋರರಲ್ಲಿ ಒಬ್ಬನನ್ನು 50 ವರ್ಷದ ಸಾಜಿದ್ ಅಕ್ರಮ್ ಎಂದು ಗುರುತಿಸಲಾಗಿದ್ದು, ಆತನನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಗುಂಡಿನ ಚಕಮಕಿಯಲ್ಲಿ ಮತ್ತೊರ್ವ ಶೂಟರ್‌ 24ವರ್ಷದ ನವೀದ್‌ ಅಕ್ರಮ್‌ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತ ಸಾಜಿದ್‌ನ ಪುತ್ರನಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಇವರಿಬ್ಬರೂ ಪಾಕ್‌ ಮೂಲದವರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಘಟನೆಯ ದೃಶ್ಯ ಇಲ್ಲಿದೆ


ಆಸ್ಟ್ರೇಲಿಯಾ ಪ್ರಧಾನಿ ಸಂತಾಪ

ಇನ್ನು ಈ ದುರ್ಘಟನೆಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಸಂತಾಪ ಸೂಚಿಸಿದ್ದಾರೆ. “ಬೋಂಡಿಯಲ್ಲಿನ ದೃಶ್ಯಗಳು ಆಘಾತಕಾರಿ ಮತ್ತು ದುಃಖಕರ ಎಂದು ಹೇಳಿದ್ದಾರೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬ ಸಂತ್ರಸ್ತರಿಗೆ ನಾನು ಸಂತಾಪ ಸೂಚಿಸುತ್ತೇನೆ. ನಾನು ಇದೀಗ ಪೊಲೀಸ್‌ ಆಯುಕ್ತರು ಮತ್ತು NSW ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ್ದೇನೆ. ನಾವು NSW ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ .NSW ಪೊಲೀಸರಿಂದ ಸೂಚನೆಯನ್ನು ಪಾಲಿಸುವಂತೆ ನಾನು ಮನವಿ ಮಾಡುತ್ತೇನೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಗ್ರರ ದಾಳಿ ಶಂಕೆ

ಇನ್ನು ಇದು ಭಯೋತ್ಪಾದಕಾ ಕೃತ್ಯ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಶಂಕಿತನ ಕಾರಿನಲ್ಲಿ ಕಂಡುಬಂದ ಸುಧಾರಿತ ಸ್ಫೋಟಕ ಸಾಧನಗಳು ಸೇರಿದಂತೆ ಹಲವಾರು ಅನುಮಾನಾಸ್ಪದ ವಸ್ತುಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಯಹೂದಿ ವಿರೋಧಿ ದಾಳಿಗಳಿಂದಾಗಿ ಇದು ಕೂಡ ಭಯೋತ್ಪಾದಕರ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಆಸ್ಟ್ರೇಲಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅತ್ಯಂತ ಅಪರೂಪ. 1996 ರಲ್ಲಿ ಟ್ಯಾಸ್ಮೆನಿಯನ್ ಪಟ್ಟಣವಾದ ಪೋರ್ಟ್ ಆರ್ಥರ್‌ನಲ್ಲಿ ನಡೆದ ಹತ್ಯಾಕಾಂಡ, ಅಲ್ಲಿ ಒಬ್ಬನೇ ಬಂದೂಕುಧಾರಿ 35 ಜನರನ್ನು ಕೊಂದಿದ್ದ. ಇದಾದ ಬಳಿಕ ಸರ್ಕಾರವು ಬಂದೂಕು ಪರವಾನಗಿ ಕಾನೂನುಗಳನ್ನು ತೀವ್ರವಾಗಿ ಬಿಗಿಗೊಳಿಸಿತು.

2022 ರಲ್ಲಿ, ಕ್ವೀನ್ಸ್‌ಲ್ಯಾಂಡ್ ರಾಜ್ಯದ ಗ್ರಾಮೀಣ ಆಸ್ತಿಯಲ್ಲಿ ಪೊಲೀಸರು ಮತ್ತು ಕ್ರಿಶ್ಚಿಯನ್ ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಜನರು ಸಾವನ್ನಪ್ಪಿದ್ದರು.

ಪ್ರಧಾನಿ ಮೋದಿ ಖಂಡನೆ

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ, X ನಲ್ಲಿ ಪೋಸ್ಟ್‌ನಲ್ಲಿ, ಸಿಡ್ನಿಯಲ್ಲಿ ನಡೆದ ಗುಂಡಿನ ದಾಳಿಯನ್ನು ಬಲವಾಗಿ ಖಂಡಿಸಿದರು."ಯಹೂದಿ ಹಬ್ಬದ ಹನುಕ್ಕಾ ಹಬ್ಬದ ಮೊದಲ ದಿನವನ್ನು ಆಚರಿಸುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಇಂದು ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಭಾರತದ ಜನರ ಪರವಾಗಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದುಃಖದ ಸಮಯದಲ್ಲಿ ನಾವು ಆಸ್ಟ್ರೇಲಿಯಾದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ಭಾರತವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಮತ್ತು ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧದ ಹೋರಾಟವನ್ನು ಬೆಂಬಲಿಸುತ್ತದೆ" ಎಂದು ಮೋದಿ ಬರೆದಿದ್ದಾರೆ.

Read More
Next Story