Shah Rukh Khan Makes The New York Times’ “Most Stylish People of 2025” List
x

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ 

ನ್ಯೂಯಾರ್ಕ್ ಟೈಮ್ಸ್‌ನ 'ಅತ್ಯಂತ ಸ್ಟೈಲಿಶ್' ಪಟ್ಟಿಯಲ್ಲಿ ಶಾರುಖ್ ಖಾನ್‌ಗೆ ಸ್ಥಾನ!

ಈ ವರ್ಷದ ಆರಂಭದಲ್ಲಿ ನಡೆದ ಪ್ರತಿಷ್ಠಿತ ಮೆಟ್ ಗಾಲಾ (Met Gala) ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ನೀಡಿದ ಎಂಟ್ರಿ ಮತ್ತು ಅವರ ಸ್ಟೈಲ್ ಸ್ಟೇಟ್‌ಮೆಂಟ್ ಅವರಿಗೆ ಈ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ.


Click the Play button to hear this message in audio format

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ತಮ್ಮ ನಟನೆ ಮತ್ತು ವ್ಯಕ್ತಿತ್ವದಿಂದ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಂಗ್ ಖಾನ್, ಈಗ ಜಾಗತಿಕ ಫ್ಯಾಷನ್ ಲೋಕದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅಮೆರಿಕದ ಪ್ರಖ್ಯಾತ ಮಾಧ್ಯಮ ಸಂಸ್ಥೆ 'ನ್ಯೂಯಾರ್ಕ್ ಟೈಮ್ಸ್' ಪ್ರಕಟಿಸಿರುವ 2025ರ ಸಾಲಿನ "67 ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ" (67 Most Stylish People of 2025) ಪಟ್ಟಿಯಲ್ಲಿ ಶಾರುಖ್ ಖಾನ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಪ್ರತಿಷ್ಠಿತ ಮೆಟ್ ಗಾಲಾ (Met Gala) ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ನೀಡಿದ ಎಂಟ್ರಿ ಮತ್ತು ಅವರ ಸ್ಟೈಲ್ ಸ್ಟೇಟ್‌ಮೆಂಟ್ ಅವರಿಗೆ ಈ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ. ಇದು ಶಾರುಖ್ ಅವರು ಅತಿಥಿಯಾಗಿ ಪಾಲ್ಗೊಂಡಿದ್ದ ಮೊದಲ ಮೆಟ್ ಗಾಲಾ ಕಾರ್ಯಕ್ರಮವಾಗಿತ್ತು. ಈ ಸಮಾರಂಭದಲ್ಲಿ ಅವರು ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪಿನಲ್ಲಿ ಮಿಂಚಿದ್ದರು.

ನ್ಯೂಯಾರ್ಕ್ ಟೈಮ್ಸ್ ತನ್ನ ಪಟ್ಟಿಯಲ್ಲಿ ಶಾರುಖ್ ಬಗ್ಗೆ ಬರೆಯುತ್ತಾ, "ಬಾಲಿವುಡ್‌ನ ಅತಿ ದೊಡ್ಡ ತಾರೆ ಮತ್ತು ವಿಶ್ವದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರಾದ ಇವರು, ತಮ್ಮ ಅಭಿಮಾನಿಗಳ ಸೈನ್ಯದಿಂದ ಕೇವಲ 'ಎಸ್‌ಆರ್‌ಕೆ' (SRK) ಎಂದೇ ಕರೆಯಲ್ಪಡುತ್ತಾರೆ. ಮೊದಲ ಬಾರಿಗೆ ಅತಿಥಿಯಾಗಿ ಆಗಮಿಸಿದ ಅವರು ಮೆಟ್ ಗಾಲಾವನ್ನು ತಮ್ಮ ಕಕ್ಷೆಗೆ ಸೆಳೆದುಕೊಂಡರು," ಎಂದು ಬಣ್ಣಿಸಿದೆ.

ಗಮನ ಸೆಳೆದ 'K' ಅಕ್ಷರದ ಪೆಂಡೆಂಟ್ ಮತ್ತು ದೇಸಿ ಲುಕ್

ಶಾರುಖ್ ಖಾನ್ ಅವರ ಸ್ಟೈಲ್ ಬಗ್ಗೆ ವಿವರಿಸಿರುವ ಪತ್ರಿಕೆ, ಅವರ ಉಡುಪಿನ ವಿವರಗಳನ್ನೂ ನೀಡಿದೆ. ಅಂದು ಶಾರುಖ್ ಖಾನ್ ಸಂಪೂರ್ಣ ಕಪ್ಪು ಬಣ್ಣದ ವಿಶೇಷ ಉಡುಪನ್ನು (All-black bespoke menswear) ಧರಿಸಿದ್ದರು. ರಾಜಗಾಂಭೀರ್ಯವನ್ನು ಬಿಂಬಿಸುವ ಈ ಉಡುಪಿಗೆ ಪೂರಕವಾಗಿ ಅವರು ಧರಿಸಿದ್ದ ಆಭರಣಗಳು ಹೈಲೈಟ್ ಆಗಿದ್ದವು. ವಿಶೇಷವಾಗಿ, ಅವರ ಕುತ್ತಿಗೆಯಲ್ಲಿದ್ದ ಸರದಲ್ಲಿ 'K' (ಕೆ) ಅಕ್ಷರದ ಆಕಾರದ ಹರಳಿನ ಪೆಂಡೆಂಟ್ ಎಲ್ಲರ ದೃಷ್ಟಿ ಸೆಳೆದಿತ್ತು. ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಶಬ್ರಿನಾ ಕಾರ್ಪೆಂಟರ್, ಜೆನ್ನಿಫರ್ ಲಾರೆನ್ಸ್, ವಿವಿಯನ್ ವಿಲ್ಸನ್, ನಿಕೋಲ್ ಶೆರ್ಜಿಂಗರ್ ಮುಂತಾದ ಜಾಗತಿಕ ತಾರೆಯರ ಹೆಸರುಗಳಿದ್ದು, ಅವರ ಸಾಲಿನಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಮಗಳು ಸುಹಾನಾ ಜೊತೆ 'ಕಿಂಗ್' ಆಗಿ ಬರ್ತಿದ್ದಾರೆ ಶಾರುಖ್

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, 60 ವರ್ಷದ ಶಾರುಖ್ ಖಾನ್ ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಿಂಗ್' (King) ಕಡೆಗೆ ಗಮನಹರಿಸಿದ್ದಾರೆ. ಈ ಚಿತ್ರದ ವಿಶೇಷವೇನೆಂದರೆ, ಇದರಲ್ಲಿ ಶಾರುಖ್ ಅವರು ತಮ್ಮ ಮಗಳು ಸುಹಾನಾ ಖಾನ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2023ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ 'ಪಠಾಣ್' ಚಿತ್ರದ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

Read More
Next Story