Roar of Karnataka Tigers to Echo Again in Cambodian Forests: India to Translocate Big Cats
x

ಸಾಂದರ್ಭಿಕ ಚಿತ್ರ

ಕಾಂಬೋಡಿಯಾ ಕಾಡುಗಳಲ್ಲಿ ಮತ್ತೆ ಕೇಳಲಿದೆ ಕರ್ನಾಟಕದ ಹುಲಿಗಳ ಘರ್ಜನೆ: ಭಾರತದಿಂದ ಸ್ಥಳಾಂತರ

ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕ ಮತ್ತು ಮಹಾರಾಷ್ಟ್ರದ ಹುಲಿ ಸಂರಕ್ಷಿತ ಪ್ರದೇಶಗಳಿಂದ ಹುಲಿಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ.


ಭಾರತದಲ್ಲಿ ಚೀತಾ ಸಂತತಿಯನ್ನು ಪುನರುಜ್ಜೀವನಗೊಳಿಸಲು ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಂಡ ಬೆನ್ನಲ್ಲೇ ಇದೀಗ ಭಾರತವು ತನ್ನಲ್ಲಿರುವ ಹುಲಿಗಳನ್ನು ಕಾಂಬೋಡಿಯಾಗೆ ಕಳುಹಿಸಲು ಮುಂದಾಗಿದೆ. ಈ ಮೂಲಕ ಅಂತರರಾಷ್ಟ್ರೀಯ ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಸುಮಾರು ಒಂಬತ್ತು ವರ್ಷಗಳ ಹಿಂದೆ ಕಾಂಬೋಡಿಯಾದಲ್ಲಿ ಹುಲಿ ಸಂತತಿ ಸಂಪೂರ್ಣವಾಗಿ ನಿರ್ನಾಮವಾಗಿತ್ತು. ಅಲ್ಲಿನ ಕಾಡುಗಳಲ್ಲಿ ಮತ್ತೆ ಹುಲಿಗಳ ಘರ್ಜನೆ ಕೇಳುವಂತೆ ಮಾಡಲು ಭಾರತವು ಆರು ಹುಲಿಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ. ಈ ಸಂಬಂಧ ಎರಡೂ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ.

ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕ ಮತ್ತು ಮಹಾರಾಷ್ಟ್ರದ ಹುಲಿ ಸಂರಕ್ಷಿತ ಪ್ರದೇಶಗಳಿಂದ ಹುಲಿಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಮಧ್ಯಪ್ರದೇಶದ ಕನ್ಹಾ, ಬಾಂಧವಗಢ ಮತ್ತು ಪೆಂಚ್ ಮೀಸಲು ಅರಣ್ಯಗಳಿಂದಲೂ ಹುಲಿಗಳನ್ನು ಕಳುಹಿಸುವ ಸಾಧ್ಯತೆಯಿದೆ.

ಭಾರತವು ವಿದೇಶಕ್ಕೆ ಹುಲಿಗಳನ್ನು ಸ್ಥಳಾಂತರಿಸುತ್ತಿರುವುದು ಇದೇ ಮೊದಲ ಬಾರಿ. ಈ ಹಿಂದೆ 2009ರಲ್ಲಿ ಮಧ್ಯಪ್ರದೇಶದ ಪನ್ನಾ ಮೀಸಲು ಅರಣ್ಯದಲ್ಲಿ ಹುಲಿಗಳ ಸ್ಥಳಾಂತರವನ್ನು ಯಶಸ್ವಿಯಾಗಿ ಮಾಡಿತ್ತು.

2024ರಲ್ಲೇ ಈ ಕುರಿತು ಮಾತುಕತೆ ನಡೆದಿದ್ದರೂ, ಸ್ಥಳಾಂತರ ಪ್ರಕ್ರಿಯೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ್ದರಿಂದ ವಿಳಂಬವಾಗಿತ್ತು. ಸದ್ಯ, ವನ್ಯಜೀವಿ ವಿಜ್ಞಾನಿಗಳು ಭಾರತ ಮತ್ತು ಕಾಂಬೋಡಿಯಾದ ಅರಣ್ಯ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಸ್ಥಳಾಂತರ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

Read More
Next Story