
ವ್ಲಾದಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Vladimir Putin : ಉಕ್ರೇನ್ ಯುದ್ಧ ಇತ್ಯರ್ಥಕ್ಕೆ ಯತ್ನ; ಮೋದಿಗೆ ಧನ್ಯವಾದ ಹೇಳಿದ ರಷ್ಯಾ ಅಧ್ಯಕ್ಷ
Vladimir Putin : ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲೂಕಾಶೆಂಕೊ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುಟಿನ್, ಈ ಗುರಿ ತಲುಪಲು ಪ್ರಯತ್ನಿಸುವ ಎಲ್ಲಾ ನಾಯಕರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಮೂರು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರಿಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಧನ್ಯವಾದ ಹೇಳಿದ್ದಾರೆ. 30 ದಿನಗಳ ಕದನ ವಿರಾಮದ ಪ್ರಯತ್ನದ ಕುರಿತು ಮೊದಲ ಬಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರಷ್ಯಾ ಅಧ್ಯಕ್ಷ, ಈ ವಿಚಾರದಲ್ಲಿ ಶಾಂತಿಯ ಮಾತುಕತೆ ಬಗ್ಗೆ ಆಸ್ಥೆ ತೋರಿದ ಪ್ರಮುಖ ನಾಯಕರುಗಳಿಗೆ ಧನ್ಯವಾದ ಹೇಳಿದ್ದಾರೆ. ಈ ವೇಳೆ ಅವರು ಮೋದಿಯ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲೂಕಾಶೆಂಕೊ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುಟಿನ್, ಈ ಗುರಿ ತಲುಪಲು ಪ್ರಯತ್ನಿಸುವ ಎಲ್ಲಾ ನಾಯಕರಿಗೂ ಧನ್ಯವಾದ ಸಲ್ಲಿಸಿದ್ದಾರೆ. 'ಜಾಗತಿಕ ನಾಯಕರೆಲ್ಲರೂ ತಮ್ಮ ದೇಶದ ಆಂತರಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಈ ನಡುವೆಯೂ ಹಲವು ರಾಷ್ಟ್ರದ ನಾಯಕರು ನಮ್ಮ ಯುದ್ಧ ಅಂತ್ಯಕ್ಕೆ ಪ್ರಯತ್ನಿಸಿದ್ದಾರೆ. ಪ್ರಮುಖವಾಗಿ ಅಮೆರಿಕದ ಅಧ್ಯಕ್ಷರು, ಭಾರತದ ಪ್ರಧಾನಿ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಕದನವನ್ನು ಕೊನೆಗೊಳಿಸಲು ಹೆಚ್ಚಿನ ಕಾಳಜಿ ತೋರಿದ್ದಾರೆ. ಅವರೆಲ್ಲರ ಪ್ರಯತ್ನವು ಯುದ್ಧ ಮತ್ತು ಪ್ರಾಣಹಾನಿ ಅಂತ್ಯಗೊಳಿಸುವ ಗುರಿ ಹೊಂದಿದೆ. ಅವರಿಗೆಲ್ಲ ನಾನು ಕೃತಜ್ಞನಾಗಿದ್ದೇನೆ' ಎಂದು ಪುಟಿನ್ ಹೇಳಿದ್ದಾರೆ.
ಕದನ ವಿರಾಮಕ್ಕೆ ಪ್ರಸ್ತಾಪ
ಉಕ್ರೇನ್‌ನಲ್ಲಿ 30 ದಿನಗಳ ಅವಧಿಗೆ ಕದನವಿರಾಮ ಘೋಷಿಸಬೇಕು ಎಂಬ ಪ್ರಸ್ತಾವವನ್ನು ಅಮೆರಿಕ ಮುಂದಿಟ್ಟಿತು. ಇದಕ್ಕೆ ಉಕ್ರೇನ್ ಸಮ್ಮತಿ ಸೂಚಿಸಿದ್ದು, ರಷ್ಯಾ ಕೂಡ ತಾತ್ವಿಕವಾಗಿ ಒಪ್ಪಿಕೊಂಡಿದೆ. ಆದರೆ ಕದನವಿರಾಮ ಘೋಷಿಸುವ ಷರತ್ತುಗಳನ್ನು ಅಂತಿಮಗೊಳಿಸಬೇಕಾಗಿದ್ದು, ಇದು ಶಾಂತಿ ಪ್ರಕ್ರಿಯೆ ಸುದೀರ್ಘ ಅವಧಿ ಇರಲು ಪೂರಕವಾಗಿರಬೇಕಿದೆ ಎಂದು ಪುಟಿನ್ ಹೇಳಿದ್ದಾರೆ.
ಮಾರ್ಚ್ 11ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ಅಮೆರಿಕ ಮತ್ತು ಉಕ್ರೇನ್ ನಡುವೆ ನಡೆದ ಚರ್ಚೆಯಲ್ಲಿ 30 ದಿನಗಳ ಕದನವಿರಾಮಕ್ಕೆ ಉಕ್ರೇನ್ ಸಮ್ಮತಿ ಸೂಚಿಸಿತ್ತು. ಉಕ್ರೇನ್ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದರು.
ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಯೇನು?
ಕಳೆದ ತಿಂಗಳು ವೈಟ್ ಹೌಸ್‌ನಲ್ಲಿ ಟ್ರಂಪ್ ಅವರೊಂದಿಗೆ ನಡೆದ ಸಭೆಯ ವೇಳೆ ಪ್ರಧಾನಿ ಮೋದಿ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವು ಪುನರುಚ್ಚರಿಸಿದ್ದರು. "ಭಾರತ ತಟಸ್ಥವಲ್ಲ. ಭಾರತ ಶಾಂತಿಯ ಪರವಾಗಿದೆ. ಇದು ಯುದ್ಧದ ಯುಗವಲ್ಲ. ಸಮಾಧಾನ ರಣರಂಗದಲ್ಲಿ ದೊರಕದು," ಎಂದು ಮೋದಿ ಹೇಳಿದ್ದರು. ''ನಾವು ಶಾಂತಿಯನ್ನು ಬೆಂಬಲಿಸುತ್ತೇವೆ ಮತ್ತು ಯುದ್ಧ ಕೊನೆಗಾಣಿಸಲು ಟ್ರಂಪ್ ಅವರ ಪ್ರಸ್ತಾಪವನ್ನು ಬೆಂಬಲಿಸುತ್ತೇವೆ" ಎಂದಿದ್ದರು.
2022ರ ಫೆಬ್ರವರಿಯಲ್ಲಿ ಯುದ್ಧ ಆರಂಭವಾದಾಗಿನಿಂದ, ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೋಲೊಡಿಮಿರ್ ಝೆಲೆನ್ಸ್ಕಿ ಮತ್ತು ಪುಟಿನ್ ಅವರೊಂದಿಗೆ ಹಲವಾರು ಬಾರಿ ಮಾತನಾಡಿದ್ದಾರೆ. ಸಂವಾದ ಮತ್ತು ರಾಜತಾಂತ್ರಿಕ ಕ್ರಮಗಳ ಮೂಲಕ ಯುದ್ಧದ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ಭಾರತದ ನಿಲುವನ್ನು ಅವರು ಪುನರುಚ್ಚರಿಸಿದ್ದರು. 2023ರ ಜುಲೈನಲ್ಲಿ ಮೋಸ್ಕೋದಲ್ಲಿ 22ನೇ ಭಾರತ-ರಷ್ಯಾ ದ್ವಿಪಕ್ಷೀಯ ಸಭೆಯಲ್ಲಿ ಅವರು ಪುಟಿನ್ ಅವರನ್ನು ಭೇಟಿ ಮಾಡಿದಾಗಲೂ ಅದೇ ಮಾತು ಹೇಳಿದ್ದರು.