ಅಮೆರಿಕದಲ್ಲಿ ಭುಗಿಲೆದ್ದ ಆಕ್ರೋಶ: ಅಧಿಕಾರಿಗಳ ಗುಂಡಿನ ದಾಳಿಗೆ ಮಹಿಳೆ ಸಾವು; ದೇಶಾದ್ಯಂತ ಪ್ರತಿಭಟನೆ
x

ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿಭಟನಾಕಾರರ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿ ಸಾವಿರಾರು ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.

ಅಮೆರಿಕದಲ್ಲಿ ಭುಗಿಲೆದ್ದ ಆಕ್ರೋಶ: ಅಧಿಕಾರಿಗಳ ಗುಂಡಿನ ದಾಳಿಗೆ ಮಹಿಳೆ ಸಾವು; ದೇಶಾದ್ಯಂತ ಪ್ರತಿಭಟನೆ

ಗುಂಡಿನ ದಾಳಿ ಘಟನೆಗಳು ಅಮೆರಿಕದಲ್ಲಿ ವಲಸಿಗರ ವಿರುದ್ಧದ ಟ್ರಂಪ್ ಆಡಳಿತದ ಕಠಿಣ ನಿಲುವುಗಳ ವಿರುದ್ಧದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂಬುದಾಗಿ ವರದಿಯಾಗಿದೆ.


Click the Play button to hear this message in audio format

ಅಮೆರಿಕದ ವಲಸೆ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಯು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಿನ್ನಿಯಾಪೊಲಿಸ್‌ನಲ್ಲಿ ನಡೆದ ಈ ಘಟನೆ ಮತ್ತು ಪೋರ್ಟ್‌ಲ್ಯಾಂಡ್‌ನಲ್ಲಿ ಪ್ರತಿಭಟನಾಕಾರರ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿ ಸಾವಿರಾರು ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಬುಧವಾರ ಮಿನ್ನಿಯಾಪೊಲಿಸ್‌ನಲ್ಲಿ ಐಸ್ (ICE) ಅಧಿಕಾರಿಯೊಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ 37 ವರ್ಷದ ರೆನೀ ಗುಡ್ (Renee Good) ಎಂಬ ಮಹಿಳೆ ಮೃತಪಟ್ಟಿದ್ದರು. ಇದೇ ವೇಳೆ, ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಫೆಡರಲ್ ಏಜೆಂಟ್‌ಗಳು ಇಬ್ಬರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದರು. ಈ ಘಟನೆಗಳು ಅಮೆರಿಕದಲ್ಲಿ ವಲಸಿಗರ ವಿರುದ್ಧದ ಟ್ರಂಪ್ ಆಡಳಿತದ ಕಠಿಣ ನಿಲುವುಗಳ ವಿರುದ್ಧದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿವೆ.

ಮಿನ್ನಿಯಾಪೊಲಿಸ್‌ನಲ್ಲಿ ಬೂದಿಮುಚ್ಚಿದ ಕೆಂಡದಂತಹ ಸ್ಥಿತಿ

ಶನಿವಾರ ಮಿನ್ನಿಯಾಪೊಲಿಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. "ನಾವೆಲ್ಲರೂ ಭಯದ ನೆರಳಿನಲ್ಲಿ ಬದುಕುತ್ತಿದ್ದೇವೆ. ಐಸ್ ಅಧಿಕಾರಿಗಳು ಯಾರೊಬ್ಬರೂ ಸುರಕ್ಷಿತವಲ್ಲ ಎಂಬ ವಾತಾವರಣವನ್ನು ಸೃಷ್ಟಿಸಿದ್ದಾರೆ," ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೇಘನ್ ಮೂರ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳ ಮೇಲೆ ಹಿಮದ ಉಂಡೆಗಳು ಮತ್ತು ಕಲ್ಲುಗಳನ್ನು ತೂರಾಟ ನಡೆಸಿದ್ದರು.

ಟ್ರಂಪ್ ನೀತಿಗೆ ಮೇಯರ್, ಗವರ್ನರ್ ವಿರೋಧ

ಮಿನ್ನಿಯಾಪೊಲಿಸ್ ಮೇಯರ್ ಜಾಕೋಬ್ ಫ್ರೇ ಮತ್ತು ಮಿನ್ನೆಸೋಟ ಗವರ್ನರ್ ಟಿಮ್ ವಾಲ್ಜ್ ಅವರು ಟ್ರಂಪ್ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. "ಟ್ರಂಪ್ ಅವರು ಸಾವಿರಾರು ಸಶಸ್ತ್ರ ಫೆಡರಲ್ ಅಧಿಕಾರಿಗಳನ್ನು ನಮ್ಮ ರಾಜ್ಯಕ್ಕೆ ಕಳುಹಿಸಿದ್ದಾರೆ. ಅವರು ಬಂದು ಕೇವಲ ಒಂದೇ ದಿನದಲ್ಲಿ ಒಬ್ಬರನ್ನು ಕೊಂದಿದ್ದಾರೆ. ಟ್ರಂಪ್ ಅವರಿಗೆ ಬೇಕಾಗಿರುವುದು ಇದೇ ರೀತಿಯ ಅರಾಜಕತೆ," ಎಂದು ಗವರ್ನರ್ ವಾಲ್ಜ್ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.

ಸ್ವಯಂ ರಕ್ಷಣೆ ಎಂದ ಟ್ರಂಪ್ ಆಡಳಿತ

ಆದರೆ, ಟ್ರಂಪ್ ಆಡಳಿತವು ಈ ಗುಂಡಿನ ದಾಳಿಗಳನ್ನು ಸಮರ್ಥಿಸಿಕೊಂಡಿದೆ. ಚಾಲಕರು ತಮ್ಮ ವಾಹನಗಳನ್ನು ಅಸ್ತ್ರಗಳನ್ನಾಗಿ ಬಳಸಿ ಅಧಿಕಾರಿಗಳ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಅಧಿಕಾರಿಗಳು ಸ್ವಯಂ ರಕ್ಷಣೆಗಾಗಿ (Self-defence) ಗುಂಡು ಹಾರಿಸಿದ್ದಾರೆ ಎಂದು ಹೇಳಿದೆ. ಮಿನ್ನಿಯಾಪೊಲಿಸ್‌ನಲ್ಲಿ ನಡೆಯುತ್ತಿರುವ ವಲಸೆ ಜಾರಿ ಕಾರ್ಯಾಚರಣೆಯು ಇಲಾಖೆಯ ಇತಿಹಾಸದಲ್ಲೇ ಅತಿದೊಡ್ಡದು ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ.

ಕಾಂಗ್ರೆಸ್ ಸದಸ್ಯರಿಗೆ ತಡೆ

ಶನಿವಾರ ಬೆಳಿಗ್ಗೆ ಮಿನ್ನಿಯಾಪೊಲಿಸ್‌ನ ಫೆಡರಲ್ ಕಟ್ಟಡದಲ್ಲಿರುವ ಐಸ್ (ICE) ಕಚೇರಿಗೆ ಭೇಟಿ ನೀಡಲು ತೆರಳಿದ್ದ ಇಲ್ಹಾನ್ ಒಮರ್ ಸೇರಿದಂತೆ ಮೂವರು ಕಾಂಗ್ರೆಸ್ ಸದಸ್ಯರಿಗೆ ಪ್ರವೇಶ ನಿರಾಕರಿಸಲಾಯಿತು. ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Read More
Next Story