
ಪ್ರಧಾನಿ ನರೇಂದ್ರ ಮೋದಿ
ದಶಕದಲ್ಲೇ ದೀರ್ಘ ವಿದೇಶ ಪ್ರವಾಸ; ಬ್ರಿಕ್ಸ್ ಶೃಂಗಸಭೆಗೆ ತೆರಳಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್‌ನಲ್ಲಿ ನಡೆಯುವ ನಿರ್ಣಾಯಕ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಎಂಟು ದಿನಗಳ ಪ್ರವಾಸದಲ್ಲಿ ದಕ್ಷಿಣದ ಹಲವು ಪ್ರಮುಖ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ವಿಸ್ತರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಜೂ. 2) ಐದು ರಾಷ್ಟ್ರಗಳ ಪ್ರವಾಸ ಆರಂಭಿಸಿದ್ದಾರೆ. ದಶಕದ ನಂತರ ಪ್ರಧಾನಿ ಮೋದಿ ಅವರ ಅತ್ಯಂತ ದೀರ್ಘ ವಿದೇಶಿ ಪ್ರವಾಸ ಇದಾಗಿದೆ. ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಗೆ ಮೋದಿ ಅವರು ಭೇಟಿ ನೀಡಲಿದ್ದಾರೆ.
ಎಂಟು ದಿನಗಳ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್‌ನಲ್ಲಿ ನಡೆಯುವ ನಿರ್ಣಾಯಕ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜುಲೈ 2015 ರಲ್ಲಿ ಪ್ರಧಾನಿ ಮೋದಿ ಎಂಟು ದಿನಗಳಲ್ಲಿ ರಷ್ಯಾ ಮತ್ತು ಮಧ್ಯ ಏಷ್ಯಾದ ಆರು ರಾಷ್ಟ್ರಗಳಿಗೆ ಕೊನೆಯದಾಗಿ ಭೇಟಿ ನೀಡಿದ್ದು ಮೋದಿ ಅವರ ದೀರ್ಘ ಪ್ರವಾಸವಾಗಿತ್ತು.
ಘಾನಾ
ಪ್ರಧಾನಿ ಮೋದಿ ಅವರು ಜುಲೈ 2 ಮತ್ತು 3 ರಂದು ಘಾನಾಗೆ ಭೇಟಿ ನೀಡುವರು. ಇದು ಪಶ್ಚಿಮ ಆಫ್ರಿಕಾದ ಈ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ. ಸುಮಾರು ಮೂರು ದಶಕಗಳಿಂದ ಯಾವುದೇ ಭಾರತೀಯ ಪ್ರಧಾನಿ ಘಾನಾಗೆ ಭೇಟಿ ನೀಡಿಲ್ಲ. ಮೋದಿ ಅವರು ಘಾನಾದ ಸಂಸತ್ ಉದ್ದೇಶಿಸಿ ಮಾತನಾಡಲಿದ್ದು, ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ಘಾನಾದಿಂದ ಭಾರತವು ಶೇ. 70 ಕ್ಕಿಂತ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುತ್ತಿದೆ. ಜನವರಿಯಲ್ಲಿ ಘಾನಾದ ಅಧ್ಯಕ್ಷರಾಗಿ ಆಯ್ಕೆಯಾದ ಜಾನ್ ಮಹಾಮ, 2015 ರಲ್ಲಿ ಭಾರತ - ಆಫ್ರಿಕಾ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. ದ್ವಿಪಕ್ಷೀಯ ಪಾಲುದಾರಿಕೆ, ಆರ್ಥಿಕ, ಇಂಧನ, ರಕ್ಷಣಾ ಸಹಯೋಗಕ್ಕಾಗಿ ಪ್ರಧಾನಿ ಮೋದಿ ಅವರು ಅಧ್ಯಕ್ಷ ಮಹಾಮ ಅವರನ್ನು ಭೇಟಿ ಮಾಡಲಿದ್ದಾರೆ.
ಟ್ರಿನಿಡಾಡ್ ಮತ್ತು ಟೊಬಾಗೊ
ಘಾನಾದಿಂದ ಪ್ರಧಾನಿ ಮೋದಿ ಅವರು ಜುಲೈ 3 ರಂದು ಎರಡು ದಿನಗಳ ಭೇಟಿಗಾಗಿ ಟ್ರಿನಿಡಾಡ್ ಮತ್ತು ಟೊಬಾಗೊಗೆ ತೆರಳಲಿದ್ದಾರೆ. ಇದು 1999 ರ ನಂತರ ಭಾರತದ ಪ್ರಧಾನಿಯೊಬ್ಬರು ಟ್ರಿನಿಡಾಡ್ ಮತ್ತು ಟೊಬಾಗೊಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಪ್ರಧಾನಿ ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಆಹ್ವಾನದ ಮೇರೆಗೆ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮತ್ತು ಅಧ್ಯಕ್ಷೆ ಇಬ್ಬರೂ ಭಾರತೀಯ ಮೂಲದವರು.
ಕೆರಿಬಿಯನ್‌ನಲ್ಲಿರುವ ಸುಮಾರು ಅರ್ಧದಷ್ಟು ಭಾರತೀಯ ವಲಸೆಗಾರರು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ನೆಲೆಸಿದ್ದಾರೆ. ಟ್ರಿನಿಡಾಡ್ ಮತ್ತು ಟೊಬಾಗೋಗೆ ಭಾರತೀಯ ವಲಸಿಗರು ಆಗಮಿಸಿದ 180 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೋದಿ ಭೇಟಿ ನೀಡುತ್ತಿರುವುದು ವಿಶೇಷ. ಭೇಟಿಯ ಸಮಯದಲ್ಲಿ ಔಷಧಗಳು, ನವೀಕರಿಸಬಹುದಾದ ಇಂಧನ, ಸಾರ್ವಜನಿಕ ಮೂಲಸೌಕರ್ಯ, ಕೃಷಿ, ವಿಪತ್ತು ಸ್ಥಿತಿಸ್ಥಾಪಕತ್ವ, ಶಿಕ್ಷಣ ಮತ್ತು ಸಂಸ್ಕೃತಿ ಕುರಿತು ಮಾತುಕತೆ ನಡೆಸಲಿದ್ದಾರೆ.
ಕಳೆದ ವರ್ಷ ಟ್ರಿನಿಡಾಡ್ ಮತ್ತು ಟೊಬಾಗೋ ಭಾರತದ ಪ್ರಮುಖ ಯುಪಿಐ ವಹಿವಾಟನ್ನು ಅಳವಡಿಸಿಕೊಂಡಿತ್ತು. ಪ್ರಧಾನಿ ಮೋದಿ ಅವರು ದ್ವೀಪ ರಾಷ್ಟ್ರದ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಈ ಭೇಟಿಯು ಎರಡೂ ದೇಶಗಳ ನಡುವಿನ ಆಳವಾದ ಮತ್ತು ಐತಿಹಾಸಿಕ ಸಂಬಂಧಗಳಿಗೆ ಹೊಸ ದಿಕ್ಸೂಚಿ ನೀಡುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅರ್ಜೆಂಟೀನಾ
ಟ್ರಿನಿಡಾಡ್ ಮತ್ತು ಟೊಬಾಗೊ ನಂತರ ಮೋದಿ ಜುಲೈ 4 ರಂದು ಅರ್ಜೆಂಟೀನಾಗೆ ಭೇಟಿ ನೀಡಲಿದ್ದು ಅಧ್ಯಕ್ಷ ಜೇವಿಯರ್ ಮಿಲೀ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆಹಾರ, ರಕ್ಷಣೆ, ಡಿಜಿಟಲ್ ತಂತ್ರಜ್ಞಾನ, ಟೆಲಿಮೆಡಿಸಿನ್, ಮೂಲಸೌಕರ್ಯ, ಗಣಿಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಹಸಿರು ಮತ್ತು ನವೀಕರಿಸಬಹುದಾದ ಇಂಧನ ಸೇರಿ ಪ್ರಮುಖ ಕ್ಷೇತ್ರಗಳಲ್ಲಿ ಭಾರತ - ಅರ್ಜೆಂಟೀನಾ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ.
ಭಾರತವು ಅರ್ಜೆಂಟೀನಾದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಪೆಟ್ರೋಲಿಯಂ ತೈಲಗಳು, ಕೃಷಿ ರಾಸಾಯನಿಕಗಳು, ಸಿದ್ಧಪಡಿಸಿದ ವಸ್ತುಗಳು, ಔಷಧಗಳು ಮತ್ತು ದ್ವಿಚಕ್ರ ವಾಹನಗಳನ್ನು ರಫ್ತು ಮಾಡುತ್ತದೆ. ಸಸ್ಯಜನ್ಯ ಎಣ್ಣೆಗಳು (ಸೋಯಾಬೀನ್ ಮತ್ತು ಸೂರ್ಯಕಾಂತಿ), ಸಿದ್ಧಪಡಿಸಿದ ಚರ್ಮ, ಧಾನ್ಯಗಳು, ರಾಸಾಯನಿಕಗಳು ಮತ್ತು ಅರ್ಜೆಂಟೀನಾದಿಂದ ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತದೆ. ಪ್ರಧಾನಿಯವರ ದ್ವಿಪಕ್ಷೀಯ ಭೇಟಿಯು ಎರಡು ರಾಷ್ಟ್ರಗಳ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಬ್ರಿಕ್ಸ್ ಶೃಂಗಸಭೆ ಮತ್ತು ಬ್ರೆಜಿಲ್ ಭೇಟಿ
ಜುಲೈ 6 ರಂದು ಅರ್ಜೆಂಟೀನಾದಿಂದ ಬ್ರೆಜಿಲ್‌ಗೆ ಪ್ರಯಾಣಿಸಲಿದ್ದಾರೆ. ಜುಲೈ 5 ರಿಂದ 8 ರವರೆಗೆ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಬ್ರಿಕ್ಸ್‌ನಲ್ಲಿ ಆಡಳಿತ, ಶಾಂತಿ, ಭದ್ರತೆ, ಹವಾಮಾನ ಬದಲಾವಣೆ ಮತ್ತು ಎಐ ಕುರಿತು ಮಾತುಕತೆ ನಡೆಸಲಿದ್ದಾರೆ. ಇತ್ತೀಚಿನ ಪಹಲ್ಗಾಮ್ ದಾಳಿ ಮತ್ತು ಭಾರತದ ಪ್ರತಿಕ್ರಿಯೆ ಸೇರಿದಂತೆ ಭಯೋತ್ಪಾದನೆ ಕುರಿತು ಮೋದಿ ಮಾತನಾಡಲಿದ್ದಾರೆ.
ಶೃಂಗಸಭೆ ಸಮಯದಲ್ಲಿ ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆ, ಹವಾಮಾನ ಕ್ರಮ, ಜಾಗತಿಕ ಆರೋಗ್ಯ, ಆರ್ಥಿಕ ಮತ್ತು ಹಣಕಾಸು ನಿರ್ವಹಣೆ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಬ್ರಿಕ್ಸ್ ನಾಯಕರ ಘೋಷಣೆಯು ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸುವ ಸಾಧ್ಯತೆಯಿದೆ.
ಶೃಂಗಸಭೆಯ ಹೊರತಾಗಿ ಮೋದಿ ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಜುಲೈ 8 ರಂದು ಮೋದಿ ಅವರು ಬ್ರೆಸಿಲಿಯಾದಲ್ಲಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರನ್ನು ಭೇಟಿ ಮಾಡಲಿದ್ದಾರೆ. ಇದು ಬ್ರೆಜಿಲ್‌ಗೆ ಮೋದಿಯವರ ನಾಲ್ಕನೇ ಭೇಟಿಯಾಗಲಿದೆ. ಇಬ್ಬರು ನಾಯಕರು ವ್ಯಾಪಾರ, ರಕ್ಷಣೆ, ಇಂಧನ, ಬಾಹ್ಯಾಕಾಶ, ತಂತ್ರಜ್ಞಾನ, ಕೃಷಿ, ಆರೋಗ್ಯ ಮತ್ತು ಸಂಪರ್ಕ ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳ ಕುರಿತು ಚರ್ಚಿಸಲಿದ್ದಾರೆ. 'ಆಪರೇಷನ್ ಸಿಂದೂರ್' ಸಮಯದಲ್ಲಿ ಬಳಸಲಾದ ಭಾರತದ ಮೇಲ್ಮೈ ವಾಯು ಕ್ಷಿಪಣಿ ಆಕಾಶ್ ವ್ಯವಸ್ಥೆಯಲ್ಲಿ ಬ್ರೆಜಿಲ್ ಆಸಕ್ತಿ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.
ಬ್ರೆಜಿಲ್ ದಕ್ಷಿಣ ಅಮೆರಿಕಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು, ಕಚ್ಚಾ ತೈಲ, ಸೋಯಾ ಎಣ್ಣೆ, ಚಿನ್ನ, ಕಬ್ಬು, ಹತ್ತಿ, ಅಂಟು, ಮರ ಮತ್ತು ಟರ್ಪಂಟೈನ್ ಎಣ್ಣೆಗಳು, ರಾಸಾಯನಿಕಗಳು (ಕಾರ್ಬಾಕ್ಸಿಲಿಕ್ ಆಮ್ಲಗಳು) ಮತ್ತು ಕಬ್ಬಿಣದ ಅದಿರು ಮತ್ತು ಅತ್ಯಮೂಲ್ಯ ನಿಕ್ಷೇಪ ಆಮದು ಮಾಡಿಕೊಳ್ಳುತ್ತಿದೆ.
ನಮೀಬಿಯಾ
ಪ್ರಧಾನಿ ತಮ್ಮ ಭೇಟಿಯ ಕೊನೆಯ ಹಂತದಲ್ಲಿ, ನಮೀಬಿಯಾಕ್ಕೆ ಪ್ರಯಾಣಿಸಲಿದ್ದಾರೆ. ಸುಮಾರು ಮೂರು ದಶಕಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನಮೀಬಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಇದು ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡುತ್ತಿರುವುದು ಕೇವಲ ಮೂರನೇ ಬಾರಿಯಾಗಿದೆ.
ತಮ್ಮ ಭೇಟಿಯ ಸಮಯದಲ್ಲಿ, ಮೋದಿ ಅವರು ಅಧ್ಯಕ್ಷ ನೆಟುಂಬೊ ನಂದಿ - ದೈತ್ವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ, ದೇಶದ ಸ್ಥಾಪಕ ಪಿತಾಮಹ ಡಾ. ಸ್ಯಾಮ್ ನುಜೋಮಾ ಅವರಿಗೆ ಗೌರವ ಸಲ್ಲಿಸಿ ದೇಶದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. "ಪ್ರಧಾನ ಮಂತ್ರಿಯವರ ಈ ಭೇಟಿ ಭಾರತದ ಬಹುಮುಖಿ ಮತ್ತು ಆಳವಾಗಿ ಬೇರೂರಿರುವ ನಮೀಬಿಯಾ ಜತೆಗಿನ ಐತಿಹಾಸಿಕ ಸಂಬಂಧದ ಪುನರುಚ್ಚರಣೆಯಾಗಿದೆ" ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ನಮೀಬಿಯಾಕ್ಕೆ ಭಾರತದಿಂದ ಸಂಸ್ಕರಿಸಿದ ಪೆಟ್ರೋಲಿಯಂ ಅನ್ನು ಅತಿ ಹೆಚ್ಚು ರಫ್ತು ಮಾಡಲಾಗುತ್ತಿದೆ. ನಮೀಬಿಯಾದಿಂದ ವಜ್ರಗಳನ್ನು ಭಾರತ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. 2022ರಲ್ಲಿ ನಮೀಬಿಯಾ ಭಾರತಕ್ಕೆ ಎಂಟು ಚಿರತೆಗಳನ್ನು ಕಳುಹಿಸಿತ್ತು. ಅವುಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ. ಅವುಗಳಲ್ಲಿ ಕೆಲವು ಚಿರತೆಗಳು ಮರಿ ಹಾಕಿದ್ದು, ಅವುಗಳ ಸಂಖ್ಯೆ ಈಗ ಹೆಚ್ಚಳವಾಗಿದೆ.