
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಭಾರೀ ಭೂಕಂಪ: ಕಟ್ಟಡಗಳು ಧರಾಶಾಯಿ, ಹಲವರ ಸಾವು
ಕಟ್ಟಡಗಳ ಕುಸಿತ ಮತ್ತು ಮಾಲ್‌ಗಳು ತೀವ್ರವಾಗಿ ಕಂಪಿಸುವುದು, ಜನರು ಭಯದಿಂದ ಬೀದಿಗಳಿಗೆ ಓಡುವ ವಿಡಿಯೊಗಳು ಎಕ್ಸ್ನಲ್ಲಿ ಶೇರ್ ಆಗುತ್ತಿವೆ.
ಮ್ಯಾನ್ಮರ್ನಲ್ಲಿ ಶುಕ್ರವಾರ (ಮಾರ್ಚ್ 28, 2025) ಸತತ ಎರಡು ಭೂಕಂಪಗಳು ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ತಲಾ 7.7 ಮತ್ತು 6.4 ತೀವ್ರತೆ ಹೊಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಥಾಯ್ಲೆಂಡ್ನ ರಾಜಧಾನಿ ಬ್ಯಾಂಕಾಕ್‌ನಲ್ಲಿಯೂ ಭೂಮಿ ಕಂಪಿಸಿದ್ದು, ಗುಗನಚುಂಬಿ ಕಟ್ಟಡವೊಂದು ಧರಾಶಾಯಿ ಹಲವರು ಮೃತಪಟ್ಟಿರುವ ಶಂಕೆ ಎದುರಾಗಿದೆ. ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಅಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿ, ಮೆಟ್ರೋ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಭೂಕಂಪದ ಪ್ರತಿಕಂಪನಗಳು ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳು, ಬಾಂಗ್ಲಾದೇಶ ಮತ್ತು ಚೀನಾದ ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲಿ ಉಂಟಾಗಿದೆ.

ಭೂಕಂಪದ ಕೇಂದ್ರ ಬಿಂದು ಇರುವ ಕೇಂದ್ರಬಿಂದು ಸಾಗೈಂಗ್ನಿಂದ ಸುಮಾರು 900 ಕಿ.ಮೀ ದೂರದ ಬ್ಯಾಂಕಾಕ್‌ನ ಚಾಟುಚಾಕ್ ಜಿಲ್ಲೆಯಲ್ಲಿ ಒಂದು ಎತ್ತರದ ಕಟ್ಟಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಇನ್ನೂ ಹಲವರು ಸಿಲುಕಿಕೊಂಡಿದ್ದಾರೆ. ಕಂಪನಗಳಿಗೆ ಬೆದರಿ ಜನರು ಮನೆಗಳಿಂದ ಹೊರ ಓಡಿಹೋಗಿದ್ದಾರೆ ಮ್ಯಾನ್ಮಾರ್ನಲ್ಲಿ, ಒಂದು ಮಸೀದಿ ಭಾಗಶಃ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಮಂಡಲೆ ಪ್ರದೇಶದ 90 ವರ್ಷ ಹಳೆಯ ಐತಿಹಾಸಿಕ ''ಅವಾ'' ಸೇತುವೆಯೂ ಈ ಭಾರೀ ಭೂಕಂಪದಿಂದ ಇರವಾಡಿ ನದಿಗೆ ಕುಸಿದು ಬಿದ್ದಿದೆ. ಈ ಭೂಕಂಪದ ಬಳಿಯಲ್ಲಿದೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಪ್ರಕಾರ, ಮಂಡಲೆಯ ಬೀದಿಗಳಲ್ಲಿ ಕಟ್ಟಡಗಳು, ಪ್ರಾರ್ಥನಾ ಸ್ಥಳಗಳ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರಾಜಧಾನಿ ನೇಪಿಡಾವ್‌ನಲ್ಲಿ ಹಲವು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. "ನನ್ನ ಕಣ್ಣೆದುರಿಗೆ ಐದು ಅಂತಸ್ತಿನ ಕಟ್ಟಡವೊಂದು ಕುಸಿಯಿತು. ನನ್ನ ಪಟ್ಟಣದಲ್ಲಿ ಎಲ್ಲರೂ ರಸ್ತೆಯ ಮೇಲೆ ಇದ್ದಾರೆ, ಯಾರೂ ಕಟ್ಟಡಗಳ ಒಳಗೆ ಹೋಗಲು ಧೈರ್ಯ ಮಾಡುತ್ತಿಲ್ಲ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಮೆಟ್ರೋ ಸ್ಥಗಿತ
ಬ್ಯಾಂಕಾಕ್‌ನಲ್ಲಿ ಹಲವು ಕಟ್ಟಡಗಳನ್ನು ಖಾಲಿ ಮಾಡಲಾಗಿದ್ದು, ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಆದರೆ ಥಾಯ್ ರಾಜಧಾನಿಯಲ್ಲಿ ತಕ್ಷಣದ ಸಾವು-ನೋವಿನ ವರದಿಯಾಗಿಲ್ಲ. ಬ್ಯಾಂಕಾಕ್ ಲಾಕ್‌ಡೌನ್‌ಗೆ ಒಳಗಾಗಿದ್ದು, ಸರ್ಕಾರವು ಮೆಟ್ರೋ ಸೇವೆಗಳು, ವಿಮಾನ ನಿಲ್ದಾಣ ಮತ್ತು ಸಬ್‌ವೇಗಳನ್ನು ಮುಚ್ಚಿದೆ. ಥೈಲ್ಯಾಂಡ್ ಸ್ಟಾಕ್ ಎಕ್ಸ್‌ಚೇಂಜ್ ಕೂಡ ಎಲ್ಲಾ ವಹಿವಾಟು ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.
"ನಾನು ಮನೆಯಲ್ಲಿ ಮಲಗಿದ್ದೆ. ಈ ವೇಳೆ ಭೂಕಂಪ ಉಂಟಾಯಿತು. ಉಟ್ಟ ಬಟ್ಟೆಯಲ್ಲಿಯೇ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಓಡಿದೆ" ಎಂದು ಥೈಲ್ಯಾಂಡ್‌ನ ಚಿಯಾಂಗ್ ಮೈ ನಿವಾಸಿಯೊಬ್ಬರು ಎಎಫ್ಪಿಗೆ ತಿಳಿಸಿದ್ದಾರೆ. ಬ್ಯಾಂಕಾಕ್‌ನ ಮಾಲ್‌ನಲ್ಲಿ ಇದ್ದ ಸ್ಕಾಟ್ಲೆಂಡ್‌ನ ಪ್ರವಾಸಿಯೊಬ್ಬರು, "ಇದ್ದಕ್ಕಿದ್ದಂತೆ ಇಡೀ ಕಟ್ಟಡ ಕದಲಿತು. ಜನರು ಕೂಗಾಡಿದರು, ಭಯಭೀತರಾದರು, ಎಸ್ಕಲೇಟರ್‌ಗಳಲ್ಲಿ ತಪ್ಪು ದಿಕ್ಕಿನಲ್ಲಿ ಓಡಿದರು, ಮಾಲ್ ಒಳಗೆ ಜೋರು ಕೇಳಿಸಿದವು" ಎಂದು ಹೇಳಿದ್ದಾರೆ.
ಕಟ್ಟಡಗಳ ಕುಸಿತ ಮತ್ತು ಮಾಲ್‌ಗಳು ತೀವ್ರವಾಗಿ ಕಂಪಿಸುವುದು, ಜನರು ಭಯದಿಂದ ಬೀದಿಗಳಿಗೆ ಓಡುವ ವಿಡಿಯೊಗಳಲ್ಲು ಎಕ್ಸ್ನಲ್ಲಿ ಶೇರ್ ಆಗುತ್ತಿವೆ. ವಿಡಿಯೊ ಒಂದರಲ್ಲಿ ಕಟ್ಟಡವೊಂದರ ಮೇಲೆ ಇದ್ದ ಇನ್ಫಿನಿಟಿ ಪೂಲ್‌ನಿಂದ ನೀರು ಕೆಳಕ್ಕೆ ಬೀಳುವಾಗ ಅದು ಜಲಪಾತದಂತೆ ಕಂಡು ಬಂತು. ಮತ್ತೊಂದು ವಿಡಿಯೊದಲ್ಲಿ ನಿರ್ಮಾಣ ಹಂತದಲ್ಲಿದ್ದ ಎತ್ತರದ ಕಟ್ಟಡವು ಸಂಪೂರ್ಣ ಕುಸಿದು ದೊಡ್ಡ ಧೂಳು ಆವರಿಸಿದ್ದನ್ನು ಕಾಣಬಹುದು.
ಮೋದಿಯಿಂದ ನೆರವು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಭಾರತದ ಸಹಾಯ ಪ್ರಕಟಿಸಿದ್ದಾರೆ. "ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ಭಾರತವು ಎಲ್ಲ ಸಾಧ್ಯ ಸಹಾಯವನ್ನು ನೀಡಲು ಸಿದ್ಧರಿದ್ದೇವೆ. ನಮ್ಮ ಅಧಿಕಾರಿಗಳು ಸನ್ನದ್ಧರಾಗಿರಲು ಸೂಚಿಸಿದ್ದೇನೆ. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಿದ್ದೇನೆ" ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ಮ್ಯಾನ್ಮಾರ್ನಲ್ಲಿ ಭೂಕಂಪ ಸಾಮಾನ್ಯ
ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ (USGS) ಪ್ರಕಾರ, ಮ್ಯಾನ್ಮಾರ್ನಲ್ಲಿ ಭೂಕಂಪಗಳು ಸಾಮಾನ್ಯವಾಗಿರುತ್ತದೆ. ಅದರ ಕೇಂದ್ರ ಬಿಂದು ದೇಶದ ಉತ್ತರದಿಂದ ದಕ್ಷಿಣಕ್ಕೆ ಚಲಿಸುವ ಸಾಗೈಂಗ್ ಫಾಲ್ಟ್ ಬಳಿ ಇದೆ. 2016 ರಲ್ಲಿ, ಬಗಾನ್‌ನಲ್ಲಿ 6.8 ತೀವ್ರತೆಯ ಭಾರೀ ಭೂಕಂಪ ಸಂಭವಿಸಿ, ಮೂವರು ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಭಾರತದ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ನಲ್ಲಿ ರಾಜಕೀಯ ಅಲ್ಲೋಕಕಲ್ಲೋಲ ಸೃಷ್ಟಿಯಾಗಿದ್ದು. ವೈದ್ಯಕೀಯ ಸೇವೆ ಕೊಡುವುದೂ ಕಷ್ಟ ಎನಿಸಿದೆ.