ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ: ಸೆಬು ಪ್ರಾಂತ್ಯದಲ್ಲಿ ಕನಿಷ್ಠ 31 ಮಂದಿ ಸಾವು
x

ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ: ಸೆಬು ಪ್ರಾಂತ್ಯದಲ್ಲಿ ಕನಿಷ್ಠ 31 ಮಂದಿ ಸಾವು

ಭೂಕಂಪದ ಕೇಂದ್ರಬಿಂದು ಸೆಬು ಪ್ರಾಂತ್ಯದ ಬೋಗೋ ನಗರದಿಂದ ಈಶಾನ್ಯಕ್ಕೆ ಸುಮಾರು 19 ಕಿಲೋಮೀಟರ್ ದೂರದಲ್ಲಿ 5 ಕಿಲೋಮೀಟರ್ ಆಳದಲ್ಲಿತ್ತು. ಸುಮಾರು 90,000 ಜನಸಂಖ್ಯೆ ಹೊಂದಿರುವ ಬೋಗೋ ನಗರದಲ್ಲಿ ಕನಿಷ್ಠ 14 ನಿವಾಸಿಗಳು ಮೃತಪಟ್ಟಿದ್ದಾರೆ


ಮಧ್ಯ ಫಿಲಿಪೈನ್ಸ್ ಪ್ರಾಂತ್ಯದಲ್ಲಿ ಮಂಗಳವಾರ ತಡರಾತ್ರಿ ರಿಕ್ಟರ್ ಮಾಪಕದಲ್ಲಿ 6 9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮನೆಗಳು ಮತ್ತು ಕಟ್ಟಡಗಳ ಗೋಡೆಗಳು ಕುಸಿದು ಕನಿಷ್ಠ 31 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ತೀವ್ರ ಕಂಪನದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನಿವಾಸಿಗಳು ಕತ್ತಲೆಯಲ್ಲಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ಕೇಂದ್ರಬಿಂದು ಸೆಬು ಪ್ರಾಂತ್ಯದ ಬೋಗೋ ನಗರದಿಂದ ಈಶಾನ್ಯಕ್ಕೆ ಸುಮಾರು 19 ಕಿಲೋಮೀಟರ್ ದೂರದಲ್ಲಿ 5 ಕಿಲೋಮೀಟರ್ ಆಳದಲ್ಲಿತ್ತು. ಸುಮಾರು 90,000 ಜನಸಂಖ್ಯೆ ಹೊಂದಿರುವ ಬೋಗೋ ನಗರದಲ್ಲಿ ಕನಿಷ್ಠ 14 ನಿವಾಸಿಗಳು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ರೆಕ್ಸ್ ಯಗೋಟ್ ದೂರವಾಣಿ ಮೂಲಕ 'ದಿ ಅಸೋಸಿಯೇಟೆಡ್ ಪ್ರೆಸ್'ಗೆ ತಿಳಿಸಿದ್ದಾರೆ.

ಬೋಗೋದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪರ್ವತ ಪ್ರದೇಶದ ಗ್ರಾಮವೊಂದರಲ್ಲಿ ಭೂಕುಸಿತ ಸಂಭವಿಸಿದ್ದು, ಅಲ್ಲಿನ ಗುಡಿಸಲುಗಳಲ್ಲಿ ಸಿಲುಕಿರುವವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಬ್ಯಾಕ್‌ಹೋ ಯಂತ್ರವನ್ನು ಸಾಗಿಸಲು ಕಾರ್ಮಿಕರು ಪ್ರಯತ್ನಿಸುತ್ತಿದ್ದಾರೆ. "ಪ್ರದೇಶದಲ್ಲಿ ಅಪಾಯಗಳಿರುವುದರಿಂದ ಸಂಚರಿಸುವುದು ಕಷ್ಟಕರವಾಗಿದೆ" ಎಂದು ಮತ್ತೊಬ್ಬ ವಿಪತ್ತು ನಿರ್ವಹಣಾ ಅಧಿಕಾರಿ ಗ್ಲೆನ್ ಉರ್ಸಲ್ ತಿಳಿಸಿದ್ದಾರೆ.

ವಿವಿಧ ಪಟ್ಟಣಗಳಲ್ಲಿ ಸಾವು-ನೋವು

ಬೋಗೋ ಸಮೀಪದ ಮೆಡೆಲಿನ್ ಪಟ್ಟಣದಲ್ಲಿ, ಕನಿಷ್ಠ 12 ನಿವಾಸಿಗಳು ನಿದ್ದೆಯಲ್ಲಿದ್ದಾಗ ಮನೆಗಳ ಚಾವಣಿ ಮತ್ತು ಗೋಡೆಗಳು ಕುಸಿದು ಮೃತಪಟ್ಟಿದ್ದಾರೆ ಎಂದು ಪಟ್ಟಣದ ವಿಪತ್ತು ನಿರ್ವಹಣಾ ಕಚೇರಿಯ ಮುಖ್ಯಸ್ಥೆ ಗೆಮ್ಮಾ ವಿಲ್ಲಾಮೋರ್ ತಿಳಿಸಿದ್ದಾರೆ.

ಸಮೀಪದ ಸ್ಯಾನ್ ರೆಮಿಜಿಯೊ ಪಟ್ಟಣದಲ್ಲಿ, ಭೂಕಂಪದ ವೇಳೆ ನಡೆಯುತ್ತಿದ್ದ ಬ್ಯಾಸ್ಕೆಟ್‌ಬಾಲ್ ಪಂದ್ಯದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಗೋಡೆಗಳು ಕುಸಿದು ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಕೋಸ್ಟ್ ಗಾರ್ಡ್ ಸಿಬ್ಬಂದಿ, ಒಬ್ಬ ಅಗ್ನಿಶಾಮಕ ಮತ್ತು ಮಗುವೊಂದು ಸೇರಿದೆ ಎಂದು ಪಟ್ಟಣದ ಉಪ ಮೇಯರ್ ಆಲ್ಫಿ ರೆಯ್ನೆಸ್ ರೇಡಿಯೊವೊಂದಕ್ಕೆ ತಿಳಿಸಿದ್ದಾರೆ. ಭೂಕಂಪದಿಂದಾಗಿ ಪಟ್ಟಣದ ನೀರು ಸರಬರಾಜು ವ್ಯವಸ್ಥೆ ಹಾನಿಗೊಳಗಾಗಿದೆ.

ಬೋಗೋದಲ್ಲಿ ಅಗ್ನಿಶಾಮಕ ಠಾಣೆ, ಕಾಂಕ್ರೀಟ್ ಮತ್ತು ಡಾಂಬರು ರಸ್ತೆಗಳು ಹಾನಿಗೊಳಗಾಗಿವೆ ಎಂದು ಅಗ್ನಿಶಾಮಕ ಸಿಬ್ಬಂದಿ ರೇ ಕ್ಯಾನೆಟೆ ಹೇಳಿದ್ದಾರೆ. ಅವರ ಅಗ್ನಿಶಾಮಕ ಠಾಣೆಯ ಕಾಂಕ್ರೀಟ್ ಗೋಡೆಯೂ ಕುಸಿದಿದೆ.

ವಿಶ್ವದ ಅತ್ಯಂತ ವಿಪತ್ತು ಪೀಡಿತ ದೇಶಗಳಲ್ಲಿ ಒಂದಾದ ಫಿಲಿಪೈನ್ಸ್, ಪೆಸಿಫಿಕ್ "ರಿಂಗ್ ಆಫ್ ಫೈರ್" ಮೇಲೆ ನೆಲೆಗೊಂಡಿರುವುದರಿಂದ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ತುತ್ತಾಗುತ್ತದೆ.

Read More
Next Story