Pope Francis passes away: ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ
x
ಪೋಪ್ ಫ್ರಾನ್ಸಿಸ್ ನಿಧನ

Pope Francis passes away: ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಅವರನ್ನು ಫೆ.14 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾ ಸೋಂಕು ಕೂಡ ಕಂಡು ಬಂದಿತ್ತು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ವ್ಯಾಟಿಕನ್ ನಗರದಲ್ಲಿ ನಿಧನರಾದರು.


ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ (88)ಅವರು ರೋಮ್‌ನ ವ್ಯಾಟಿಕನ್ ಸಿಟಿಯಲ್ಲಿ ಸೋಮವಾರ ಬೆಳಿಗ್ಗೆ 7:35 ಕ್ಕೆ ಇಹಲೋಕ ತ್ಯಜಿಸಿದ್ದಾರೆ.

ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಫೆ.14 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ನ್ಯುಮೋನಿಯಾ ಸೋಂಕು ಕೂಡ ಕಾಣಿಸಿಕೊಂಡಿತ್ತು. ಸುಮಾರು ಒಂದು ತಿಂಗಳ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ವ್ಯಾಟಿಕನ್‌ ಸಿಟಿ ಪ್ರಕಟಣೆ ತಿಳಿಸಿದೆ.

ಕಳೆದ ವಾರ ಸೇಂಟ್ ಪೀಟರ್ಸ್ ಚೌಕದಲ್ಲಿ ನಡೆದ ಕ್ಯಾಥೋಲಿಕ್ ಚರ್ಚ್‌ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಪೋಪ್‌ ಅವರಿಗೆ ಸಂಪೂರ್ಣ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದರಿಂದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು.

ಪೋಪ್ ಅವರ ನಿಧನದ ಸುದ್ದಿ ತಿಳಿದು ವಿಶ್ವದ ಕೋಟ್ಯಂತರ ಕ್ಯಾಥೋಲಿಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಫ್ರಾನ್ಸಿಸ್ ಅವರು 1,300 ವರ್ಷಗಳಲ್ಲಿ ಪೋಪ್ ಆಗಿ ಆಯ್ಕೆಯಾದ ಮೊದಲ ಯುರೋಪಿಯನ್ನೇತರ ವ್ಯಕ್ತಿಯಾಗಿದ್ದರು. ಪೋಪ್ ಫ್ರಾನ್ಸಿಸ್ ಅವರು ಸಲಿಂಗಕಾಮಿಗಳು ಚರ್ಚ್‌ಗೆ ಬರಲು ಅವಕಾಶ ನೀಡಿದ್ದರಲ್ಲದೇ ಸಲಿಂಗ ದಂಪತಿಗಳ ವಿವಾಹ, ಮರುವಿವಾಹ ಪ್ರೋತ್ಸಾಹಿಸುವ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

ಪೋಪ್ ಫ್ರಾನ್ಸಿಸ್ ನಿಧನಕ್ಕೆ ಮೋದಿ ಸಂತಾಪ

ಪ್ರಧಾನಿ ಮೋದಿ ಅವರು ಎಕ್ಸ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪೋಪ್‌ ಫ್ರಾನ್ಸಿಸ್‌ ಅವರ ಅಗಲಿಕೆಯಿಂದ ತುಂಬಾ ದುಃಖವಾಗಿದೆ. ವಿಶ್ವದ ಕ್ಯಾಥೊಲಿಕ್ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯಾವಾಗಲೂ ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ಸಂಕೇತವಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ನಿಧನ ವಾರ್ತೆಯನ್ನು ವ್ಯಾಟಿಕನ್‌ನ ಕ್ಯಾಮರ್ಲೆಂಗೊ ಕಾರ್ಡಿನಲ್, ಕೆವಿನ್ ಫಾರೆಲ್ ಘೋಷಿಸಿದರು. ಕ್ಯಾಮರ್ಲೆಂಗೊ ಕಾರ್ಡಿನಲ್ ಎಂಬುದು ವ್ಯಾಟಿಕನ್ ನಗರದಲ್ಲಿ ಆಡಳಿತಾತ್ಮಕ ಹುದ್ದೆಯಾಗಿದೆ.

Read More
Next Story