Political turmoil in France: PM Lecornu resigns within a month of taking office
x
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಸೆಬಾಸ್ಟಿಯನ್ ಲೆಕೋರ್ನು

ಫ್ರಾನ್ಸ್‌ನಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು: ಅಧಿಕಾರ ಸ್ವೀಕರಿಸಿದ ತಿಂಗಳೊಳಗೆ ಪ್ರಧಾನಿ ಲೆಕೋರ್ನು ರಾಜೀನಾಮೆ

ಅಧಿಕಾರ ಸ್ವೀಕರಿಸಿದ ಕೇವಲ 27 ದಿನಗಳಲ್ಲಿ ಅವರು ರಾಜೀನಾಮೆ ನೀಡಿದ್ದು, ಇದು ಫ್ರಾನ್ಸ್‌ನ ಆಧುನಿಕ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಪ್ರಧಾನಿ ಎಂಬ ದಾಖಲೆಗೆ ಕಾರಣವಾಗಿದೆ.


Click the Play button to hear this message in audio format

ಫ್ರಾನ್ಸ್‌ನಲ್ಲಿ ರಾಜಕೀಯ ಅಸ್ಥಿರತೆ ಮತ್ತೊಮ್ಮೆ ತೀವ್ರಗೊಂಡಿದ್ದು, ನೂತನ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಅವರು ತಮ್ಮ ಸಚಿವ ಸಂಪುಟವನ್ನು ಘೋಷಿಸಿದ ಮರುದಿನವೇ, ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಕೇವಲ 27 ದಿನಗಳಲ್ಲಿ ಅವರು ರಾಜೀನಾಮೆ ನೀಡಿದ್ದು, ಇದು ಫ್ರಾನ್ಸ್‌ನ ಆಧುನಿಕ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಪ್ರಧಾನಿ ಎಂಬ ದಾಖಲೆಗೆ ಕಾರಣವಾಗಿದೆ.

ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲೆಕೋರ್ನು, ತಮ್ಮ ಸಂಪುಟಕ್ಕೆ ಸಚಿವರನ್ನು ಆಯ್ಕೆ ಮಾಡುವಲ್ಲಿ ಎದುರಾದ ತೀವ್ರ ವಿರೋಧ ಮತ್ತು ರಾಜಕೀಯ ಪಕ್ಷಗಳ ನಡುವಿನ ಒಮ್ಮತದ ಕೊರತೆಯಿಂದಾಗಿ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ವಿಶೇಷವಾಗಿ, ಹಿಂದಿನ ಸರ್ಕಾರದ ಪ್ರಮುಖ ಸಚಿವರನ್ನೇ ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದ್ದು, ಹಾಗೂ ಮಾಜಿ ಹಣಕಾಸು ಸಚಿವ ಬ್ರೂನೊಲಿ ಮೇರಿ ಅವರಿಗೆ ರಕ್ಷಣಾ ಖಾತೆಯನ್ನು ನೀಡಿದ್ದು, ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು.

ತಮ್ಮ ರಾಜೀನಾಮೆಯ ನಂತರ ಮಾತನಾಡಿದ ಲೆಕೋರ್ನು, "ರಾಜಕೀಯ ಪಕ್ಷಗಳ ಅಹಂಕಾರ ಮತ್ತು ಸ್ವಾರ್ಥದಿಂದಾಗಿ ರಾಜಿ ಸೂತ್ರಕ್ಕೆ ಬರಲು ಸಾಧ್ಯವಾಗಲಿಲ್ಲ. ದೇಶದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಯಾಗಿ ಮುಂದುವರಿಸಾಧ್ಯವಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ, "ಈ ಹಿಂದಿನವರು ತಮ್ಮ ವಿಶೇಷ ಅಧಿಕಾರ ಬಳಸಿ, ಮತದಾನವಿಲ್ಲದೆ ಆಯವ್ಯಯ ಪ್ರಕ್ರಿಯೆ ಜಾರಿಗೊಳಿಸಿದಂತೆ ನಾನು ನಡೆದುಕೊಳ್ಳಲು ಸಿದ್ಧವಿಲ್ಲ," ಎಂದು ಹೇಳುವ ಮೂಲಕ, ತಮ್ಮ ಹಿಂದಿನ ಪ್ರಧಾನಿ ಫ್ರಾಂಕೋಯಿಸ್ ಬೇರೂ ಅವರ ನಡೆಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು.

ಮ್ಯಾಕ್ರನ್ ಮೇಲೆ ಹೆಚ್ಚಿದ ಒತ್ತಡ

ಲೆಕೋರ್ನು ಅವರ ರಾಜೀನಾಮೆಯು, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ನಾಯಕತ್ವಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಫ್ರಾನ್ಸ್ ಕಂಡ ಐದನೇ ಪ್ರಧಾನಿ ಇವರಾಗಿದ್ದು, ದೇಶದಲ್ಲಿನ ರಾಜಕೀಯ ಅಸ್ಥಿರತೆಯನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಈ ರಾಜೀನಾಮೆಯ ಬೆನ್ನಲ್ಲೇ, ವಿರೋಧ ಪಕ್ಷಗಳಾದ ಮರೀನ್ ಲೆ ಪೆನ್ ಅವರ ನ್ಯಾಷನಲ್ ರ್ಯಾಲಿ ಮತ್ತು ಜೀನ್-ಲುಕ್ ಮೆಲೆನ್‌ಚಾನ್ ಅವರ ಫ್ರಾನ್ಸ್ ಅನ್‌ಬೌಡ್ ಪಕ್ಷಗಳು, ಅಧ್ಯಕ್ಷ ಮ್ಯಾಕ್ರನ್ ರಾಜೀನಾಮೆ ನೀಡಬೇಕು ಅಥವಾ ತಕ್ಷಣವೇ ಹೊಸ ಚುನಾವಣೆಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿವೆ.

2027ರಲ್ಲಿ ತಮ್ಮ ಅಧಿಕಾರಾವಧಿ ಮುಗಿಯುವವರೆಗೂ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಮ್ಯಾಕ್ರನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಲೆಕೋರ್ನು ಅವರ ರಾಜೀನಾಮೆಯ ಸುದ್ದಿ ಹೊರಬೀಳುತ್ತಿದ್ದಂತೆ, ಪ್ಯಾರಿಸ್ ಷೇರು ಮಾರುಕಟ್ಟೆಯು ಶೇ. 2ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ದೇಶದ ಆರ್ಥಿಕತೆಯ ಮೇಲೂ ಇದರ ಪರಿಣಾಮ ಬೀರಿದೆ. ಸದ್ಯ, ಹೊಸ ಪ್ರಧಾನಿಯನ್ನು ನೇಮಿಸುವುದೋ ಅಥವಾ ಮತ್ತೊಂದು ಹಠಾತ್ ಚುನಾವಣೆಯನ್ನು ಘೋಷಿಸುವುದೋ ಎಂಬ ಸಂಕಷ್ಟದಲ್ಲಿ ಮ್ಯಾಕ್ರನ್ ಸಿಲುಕಿದ್ದಾರೆ.

Read More
Next Story