ಮೋದಿ ಇಸ್ರೇಲ್ ಪ್ರವಾಸ: ಉಗ್ರರ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು
x
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ಮೋದಿ ಇಸ್ರೇಲ್ ಪ್ರವಾಸ: ಉಗ್ರರ ವಿರುದ್ಧ 'ಷಡ್ಭುಜ ಕೂಟ' ಘೋಷಿಸಿದ ನೆತನ್ಯಾಹು

ಪ್ರಧಾನಿ ಮೋದಿಯವರ ಐತಿಹಾಸಿಕ ಇಸ್ರೇಲ್ ಪ್ರವಾಸದ ಹಿನ್ನೆಲೆಯಲ್ಲಿ ಬೆಂಜಮಿನ್ ನೆತನ್ಯಾಹು 'ಷಡ್ಭುಜ ಕೂಟ' ಘೋಷಿಸಿದ್ದಾರೆ.


Click the Play button to hear this message in audio format

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನ ಇಸ್ರೇಲ್‌ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅವರ ಇಸ್ರೇಲ್ ಭೇಟಿಯ ಮುನ್ನಾದಿನದಂದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೊಸ ಭೌಗೋಳಿಕ ರಾಜಕೀಯ ಮೈತ್ರಿಕೂಟವನ್ನು ಘೋಷಿಸಿದ್ದಾರೆ. ಇದನ್ನು ಅವರು "ಮೈತ್ರಿಗಳ ಷಡ್ಭುಜ" (Hexagon of Alliances) ಎಂದು ಕರೆದಿದ್ದು, ಈ ಬಣದಲ್ಲಿ ಭಾರತವನ್ನು ಪ್ರಮುಖ ಪಾಲುದಾರ ಎಂದು ಹೆಸರಿಸಿದ್ದಾರೆ.

ಏನಿದು ಷಡ್ಭುಜ ಕೂಟ?

ಫೆಬ್ರವರಿ 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೆತನ್ಯಾಹು ಈ ಪರಿಕಲ್ಪನೆಯನ್ನು ಬಿಚ್ಚಿಟ್ಟರು. ಮಧ್ಯಪ್ರಾಚ್ಯದಲ್ಲಿ ಬೆಳೆಯುತ್ತಿರುವ 'ಮೂಲಭೂತವಾದಿ ಅಕ್ಷ'ಗಳನ್ನು ಎದುರಿಸುವುದು ಈ ಕೂಟದ ಮುಖ್ಯ ಉದ್ದೇಶವಾಗಿದೆ. ಭಾರತ, ಇಸ್ರೇಲ್, ಗ್ರೀಸ್ ಮತ್ತು ಸೈಪ್ರಸ್ ಪ್ರಮುಖ ಪಾಲುದಾರರ ರಾಷ್ಟ್ರಗಳಾಗಿವೆ. ಮುಂದಿನ ದಿನಗಳಲ್ಲಿ ಕೆಲವು ಅರಬ್, ಆಫ್ರಿಕನ್ ಮತ್ತು ಏಷ್ಯಾದ ರಾಷ್ಟ್ರಗಳು ಈ ಮೈತ್ರಿಕೂಟದ ಭಾಗವಾಗಲಿವೆ.

ನೆತನ್ಯಾಹು ಹೇಳಿದ್ದೇನು?

"ನನ್ನ ದೃಷ್ಟಿಯಲ್ಲಿ, ನಾವು ಮಧ್ಯಪ್ರಾಚ್ಯದ ಸುತ್ತಲೂ ಅಥವಾ ಅದರೊಳಗೆ ಮೈತ್ರಿಗಳ ಸಂಪೂರ್ಣ ವ್ಯವಸ್ಥೆಯನ್ನು, ಅಂದರೆ ಒಂದು 'ಷಡ್ಭುಜ'ವನ್ನು ರಚಿಸುತ್ತಿದ್ದೇವೆ. ಮೂಲಭೂತವಾದಿ ಶಿಯಾ ಅಕ್ಷ (ಇರಾನ್ ಪ್ರೇರಿತ) ಮತ್ತು ಉದಯೋನ್ಮುಖ ಮೂಲಭೂತವಾದಿ ಸುನ್ನಿ ಅಕ್ಷಗಳ ಸವಾಲುಗಳನ್ನು ಎದುರಿಸಲು ಸಮಾನ ಮನಸ್ಕ ರಾಷ್ಟ್ರಗಳು ಒಂದಾಗುವುದು ಅನಿವಾರ್ಯ," ಎಂದು ನೆತನ್ಯಾಹು ತಿಳಿಸಿದ್ದಾರೆ.

ಮೋದಿಯವರ ಭೇಟಿ ಏಕೆ ಮಹತ್ವದ್ದು?

ಪ್ರಧಾನಿ ಮೋದಿ ಅವರು ಫೆಬ್ರವರಿ 25 ಮತ್ತು 26 ರಂದು ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಇದು ಅವರ ಎರಡನೇ ಇಸ್ರೇಲ್ ಪ್ರವಾಸವಾಗಿದ್ದು, ರಕ್ಷಣೆ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿ ಹೊಂದಲಾಗಿದೆ. ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ 'ಇಸ್ಲಾಮಿಕ್ ನ್ಯಾಟೋ' ಮಾದರಿಯ ಒಪ್ಪಂದಕ್ಕೆ ಮುಂದಾಗಿರುವ ಈ ಸಂದರ್ಭದಲ್ಲಿ ನೆತನ್ಯಾಹು ಅವರ ಈ ಘೋಷಣೆ ಜಾಗತಿಕ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಭಾರತ ಮತ್ತು ಇಸ್ರೇಲ್ ನಡುವಿನ ಪ್ರಬಲವಾಗುತ್ತಿರುವ ರಾಜತಾಂತ್ರಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿ, ಬುಧವಾರದಿಂದ ಆರಂಭವಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್ ಭೇಟಿಗೆ ಅಭೂತಪೂರ್ವ ಸ್ವಾಗತ ಕೋರಲು ಸಿದ್ಧತೆ ನಡೆದಿದೆ. ಶಿಷ್ಟಾಚಾರವನ್ನು ಬದಿಗಿಟ್ಟು ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅವರು ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ಮೋದಿಯವರನ್ನು ಬರಮಾಡಿಕೊಳ್ಳಲಿದ್ದಾರೆ.

Read More
Next Story