
'ಜಿಎಸ್‌ಟಿ ಬಚತ್ ಉತ್ಸವ' ಶ್ಲಾಘಿಸಿ 'ಸ್ವದೇಶಿ' ಸರಕುಗಳ ಖರೀದಿಗೆ ಕರೆ ನೀಡಿದ ಮೋದಿ
ನಾಳೆಯಿಂದ ನವರಾತ್ರಿ ಹಬ್ಬ ಆರಂಭವಾಗಲಿದ್ದು, ಎಲ್ಲರಿಗೂ ನಾಡಹಬ್ಬಕ್ಕೆ ಶುಭಾಶಯಗಳು ಎಂದು ಪ್ರಧಾನಿ ಮೋದಿ ಶುಭಕೋರಿದ್ದಾರೆ.
ಹೊಸ ಜಿಎಸ್‌ಟಿ ದರ ಜಾರಿಯಾಗುವ ಒಂದು ದಿನ ಮೊದಲು ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಸ್ವದೇಶಿ ವಸ್ತುಗಳ ಖರೀದಿಗೆ ಪೂರಕವಾಗುವಂತಹ ಭಾಷಣವನ್ನು ಮಾಡಿದ್ದಾರೆ. ಈ ವೇಳೆ, ನವ ಪೀಳಿಗೆಯ ಜಿಎಸ್‌ಟಿ ಸುಧಾರಣಾ ನೀತಿಯು ನಾಳೆಯಿಂದ ಜಾರಿಗೆ ಬರಲಿದ್ದು, ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಇದರಿಂದ ವ್ಯವಹಾರ ಸುಲಲಿತವಾಗಲಿದ್ದು, ಹೂಡಿಕೆದಾರರನ್ನೂ ಸೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಎಸ್‌ಟಿ ಭಾರತ ಉತ್ಸವವು ನವರಾತ್ರಿ ಹಬ್ಬವಾದ ನಾಳೆಯಿಂದ ಆರಂಭವಾಗಲಿದೆ. ಇದು ಉಳಿತಾಯ ಮತ್ತು ಕಡಿಮೆ ಬೆಲೆಗೆ ವಸ್ತುಗಳು ಲಭಿಸಲಿದ್ದು, ದೇಶದ ಜನರಿಗೆ ಡಬಲ್ ಧಮಾಕಾ ಆಗಿದೆ. ಅಭಿವೃದ್ಧಿ ಪಥದಲ್ಲಿ ಎಲ್ಲಾ ರಾಜ್ಯಗಳಿಗೂ ಸಮಾನ ಅವಕಾಶವನ್ನು ನೀಡಲಾಗಿದೆ. ಹಾಗಾಗಿ ಎಲ್ಲಾ ರಾಜ್ಯಗಳೂ 'ಆತ್ಮನಿರ್ಭರ ಭಾರತ' ಪರಿಕಲ್ಪನೆ ಮತ್ತು ಸ್ವದೇಶಿ ಆಂದೋಲನವನ್ನು ಮನದಲ್ಲಿಟ್ಟುಕೊಂಡು ಉತ್ಪಾದನೆಗೆ ಒತ್ತು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ನವರಾತ್ರಿಯ ಮೊದಲ ದಿನದಂದು ದೇಶವು 'ಆತ್ಮನಿರ್ಭರ ಭಾರತ'ದ ಕಡೆ ಮಹತ್ವದ ಹೆಜ್ಜೆಯನ್ನಿಡುತ್ತಿದೆ. ನಾಳೆಯ ಸೂರ್ಯೋದಯದೊಂದಿಗೆ ಹೊಸ ಪೀಳಿಗೆಯ ಜಿಎಸ್‌ಟಿ ನಿಯಮಾವಳಿಗಳು ಜಾರಿಗೆ ಬರಲಿವೆ. ಈ ಜಿಎಸ್‌ಟಿ 'ಬಚತ್ ಉತ್ಸವ'ವು ನಾಳೆಯಿಂದ ಆರಂಭವಾಗಲಿದೆ. ನಿಮಗೆ ಇಷ್ಟವಾಗುವ ವಸ್ತುಗಳನ್ನು ನಾಳೆಯಿಂದ ಅತಿ ಸುಲಭವಾಗಿ ಕೊಂಡುಕೊಳ್ಳಬಹುದಾಗಿದೆ. ಬಡವರು, ಮಾಧ್ಯಮ ವರ್ಗದವರು, ಯುವಕರು, ರೈತರು, ಮಹಿಳೆಯರು & ವ್ಯಾಪಾರಸ್ಥರು ಇದರ ಲಾಭ ಪಡೆಯಲಿದ್ದಾರೆ ಎಂದಿದ್ದಾರೆ.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸ್ವದೇಶಿ ಮಂತ್ರವನ್ನೂ ಜಪಿಸಿದ್ದಾರೆ. ಸ್ವದೇಶಿ ಚಳುವಳಿ ಆರಂಭಿಸಿದ್ದರಿಂದಲೇ ದೇಶಕ್ಕೆ ಸ್ವತಂತ್ರ ಸಿಕ್ಕಿತು. ಹಾಗೆಯೇ ದೇಶದ ಜನ ಸ್ವದೇಶಿ ಸರಕು, ಸೇವೆಗಳನ್ನು ಖರೀದಿಸಲು ಮತ್ತು ಬಳಸಲು ಆರಂಭಿಸಿದಲ್ಲಿ ದೇಶದ ಬೆಳವಣಿಗೆ ಕೂಡ ವೇಗವಾಗಿ ಆಗಲಿದೆ. ಜಿಎಸ್‌ಟಿ ದರವನ್ನು ಇಳಿಕೆ ಮಾಡಿರುವ ಕಾರಣ ಸೋಮವಾರದಿಂದ ಔಷಧಿಗಳು, ಗೃಹೋಪಯೋಗಿ ವಸ್ತುಗಳು, ಇತರೆ ಉಪಕರಣಗಳೂ ಸೇರಿದಂತೆ ಒಟ್ಟು 375 ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದಿದ್ದಾರೆ.
ಮೋದಿ ಭಾಷಣದ ಬಗ್ಗೆ ಕಾಂಗ್ರೆಸ್ ಟೀಕೆ
ಜಿಎಸ್‌ಟಿಗೆ ಮಾಡಲಾದ ತಿದ್ದುಪಡಿಗಳ "ಏಕೈಕ ಮಾಲೀಕತ್ವ"ವನ್ನು ಪ್ರಧಾನಿ ಮೋದಿ ತೆಗೆದುಕೊಂಡಿದ್ದಾರೆ. ಪ್ರಸ್ತುತದ ಸುಧಾರಣೆಗಳು ಅಸಮರ್ಪಕವಾಗಿವೆ, ಪರಿಹಾರವನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬೇಕೆಂಬ ರಾಜ್ಯಗಳ ಬೇಡಿಕೆಯಾಗಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲವೆಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಪ್ರಧಾನಿ ತಮ್ಮ ಭಾಷಣದಲ್ಲಿ "ಸಾಂವಿಧಾನಿಕ ಸಂಸ್ಥೆಯಾದ ಜಿಎಸ್‌ಟಿ ಮಂಡಳಿಯು ಜಿಎಸ್‌ಟಿಗೆ ಮಾಡಿದ ತಿದ್ದುಪಡಿಗಳ ಸಂಪೂರ್ಣ ಮಾಲೀಕತ್ವವನ್ನು ಹೊರಲಿದೆ" ಎಂದು ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯು "ಬೆಳವಣಿಗೆಯನ್ನು ನಿಗ್ರಹಿಸುವ ತೆರಿಗೆ" ಎಂದು ಕಾಂಗ್ರೆಸ್ ಬಹಳ ಹಿಂದಿನಿಂದಲೂ ವಾದಿಸುತ್ತಾ ಬರುತ್ತಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಇದು ಹೆಚ್ಚಿನ ಸಂಖ್ಯೆಯ ತೆರಿಗೆ ಶ್ರೇಣಿಗಳು, ಸಾಮೂಹಿಕ ಬಳಕೆಯ ವಸ್ತುಗಳಿಗೆ ದಂಡನಾತ್ಮಕ ತೆರಿಗೆ ದರಗಳು, ದೊಡ್ಡ ಪ್ರಮಾಣದ ವಂಚನೆ ಮತ್ತು ತಪ್ಪು ವರ್ಗೀಕರಣ, ದುಬಾರಿ ಹೊರೆ ಮತ್ತು ತಲೆಕೆಳಗಾದ ಸುಂಕ ರಚನೆಯನ್ನು ಒಳಗೊಂಡಿದೆ ಎಂದು ರಮೇಶ್ ತಮ್ಮ X ಖಾತೆಯಲ್ಲಿ ಬರೆದುಕೊಂಡು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮತಗಳ್ಳತನದ ಬಗ್ಗೆಯೂ ಮಾತನಾಡಬೇಕಿತ್ತು
ಪ್ರಧಾನಿ ಮೋದಿ ಜಿಎಸ್‌ಟಿ ಸುಧಾರಣೆ ಬಗ್ಗೆ ಮಾತನಾಡಿದ್ದಾರೆ. ಆದರೆ ಮತಗಳ್ಳತನದ ಬಗ್ಗೆಯೂ ಕೂಡ ಅವರು ಮಾತನಾಡಬೇಕಿತ್ತು. ಆಗ ಮತ ಕಳ್ಳತನ ಮಾಡುತ್ತಿರುವ ಹಾಗೂ ಅಕ್ರಮವಾಗಿ ಸರ್ಕಾರಗಳನ್ನು ರಚಿಸಲಾಗುತ್ತಿರುವ ಮಾಹಿತಿಗಳೆಲ್ಲವೂ ಹೊರಬರುತ್ತಿದ್ದವು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರೈ ಲೇವಡಿ ಮಾಡಿದ್ದಾರೆ.