PM Modi Singapore Visit| ಸೆಮಿಕಂಡಕ್ಟರ್, ಡಿಜಿಟಲ್ ತಂತ್ರಜ್ಞಾನದಲ್ಲಿ ಎಂಒಯುಗೆ ಸಹಿ
ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರೊಂದಿಗೆ ಗುರುವಾರ ಸಭೆ ನಡೆಸಿದ್ದಾರೆ.
ವಾಂಗ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಎರಡು ದಿನಗಳ ಭೇಟಿಗೆ ಸಿಂಗಾಪುರಕ್ಕೆ ಬಂದಿದ್ದಾರೆ.
ವಾಂಗ್ ಜತೆಗಿನ ಮಾತುಕತೆಗೂ ಮುನ್ನ ಸಿಂಗಾಪುರ ಸಂಸತ್ ಭವನದಲ್ಲಿ ಮೋದಿ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಅವರು ಸಂದರ್ಶಕರ ಪುಸ್ತಕಕ್ಕೂ ಸಹಿ ಹಾಕಿದರು.
ʻಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಸ್ಥಾಪಿಸಲಾಗಿದೆ. ಪ್ರಧಾನಿ ಮೋದಿ ಮತ್ತು ಪ್ರಧಾನಿ ವಾಂಗ್ ಅವರು ಇಂದು ಸಿಂಗಾಪುರದಲ್ಲಿ ಉತ್ಪಾದಕ ಸಭೆ ನಡೆಸಿದರು,ʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಸಭೆ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ʻಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಉನ್ನತೀಕರಿಸಲು ಉಭಯ ನಾಯಕರು ಒಪ್ಪಿಕೊಂಡರು. ಉತ್ಪಾದನೆ, ಸಂಪರ್ಕ, ಡಿಜಿಟಲೀಕರಣ, ಆರೋಗ್ಯ ರಕ್ಷಣೆ ಮತ್ತು ಔಷಧ, ಕೌಶಲ ಅಭಿವೃದ್ಧಿ ಮತ್ತು ಸುಸ್ಥಿರತೆ ಕ್ಷೇತ್ರಗಳ ದ್ವಿಪಕ್ಷೀಯ ಸಂಬಂಧದ ವಿವಿಧ ಅಂಶಗಳನ್ನು ಪರಿಶೀಲಿಸಿದರು,ʼ ಎಂದು ಹೇಳಿದರು.
ವಾಂಗ್ ಅವರು ಅಧಿಕಾರ ವಹಿಸಿಕೊಂಡ ನಂತರ ಮತ್ತು ಮೋದಿ ಮೂರನೇ ಅವಧಿಗೆ ಪ್ರಧಾನಿಯಾದ ಕೆಲವು ದಿನಗಳ ಬಳಿಕ ಈ ಭೇಟಿ ನಡೆದಿದೆ.
ಆನಂತರ ಉಭಯ ನಾಯಕರು ನಾಲ್ಕು ತಿಳಿವಳಿಕೆ ಒಪ್ಪಂದಗಳ ವಿನಿಮಯದಲ್ಲಿ ಭಾಗಿಯಾಗಿದ್ದರು. ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಥರ್ಮನ್ ಷಣ್ಮುಗರತ್ನಂ, ಹಿರಿಯ ಸಚಿವರಾದ ಲೀ ಸೀನ್ ಲೂಂಗ್ ಮತ್ತು ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಲೀ ಅವರು ಮೋದಿ ಅವರ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದಾರೆ.
ಮೋದಿ ಅವರು ಉದ್ಯಮಿಗಳನ್ನು ಭೇಟಿಯಾಗಲಿದ್ದು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತೊಡಗಿಸಿಕೊಂಡವರೊಟ್ಟಿಗೆ ಸಂವಾದ ನಡೆಸಲಿದ್ದಾರೆ. ಆನಂತರ, ಮೋದಿ ಮತ್ತು ವಾಂಗ್ ಸೆಮಿಕಂಡಕ್ಟರ್ ಉತ್ಪಾದನೆ ಘಟಕಕ್ಕೆ ಭೇಟಿ ನೀಡಲಿದ್ದಾರೆ.
ಬ್ರೂನೈಗೆ ಭೇಟಿ ಬಳಿಕ ಮೋದಿ ಅವರು ಬುಧವಾರ ಸಿಂಗಾಪುರಕ್ಕೆ ತೆರಳಿದ್ದು, ಅವರಿಗೆ ಭಾರತೀಯ ಸಮುದಾಯ ಆತ್ಮೀಯ ಸ್ವಾಗತ ನೀಡಿದೆ.