West Asia Crisis: Serious impact on Indias economy and energy supply, PM Modi says
x
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. 

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಭಾರತದ ಆರ್ಥಿಕತೆ ಮತ್ತು ಇಂಧನ ಪೂರೈಕೆ ಮೇಲೆ ಗಂಭೀರ ಪರಿಣಾಮ ಎಂದ ಪ್ರಧಾನಿ ಮೋದಿ

ಸಂಘರ್ಷ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಭಾರತೀಯನ ಭದ್ರತೆಗೆ ಸರ್ಕಾರ ಅತ್ಯುನ್ನತ ಆದ್ಯತೆ ನೀಡಿದೆ ಎಂದು ಪ್ರಧಾನಿಮ ಮೋದಿ ತಿಳಿಸಿದ್ದಾರೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಇದು ಅತ್ಯಂತ ಆತಂಕಕಾರಿ ಹಂತವನ್ನು ತಲುಪಿದೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಹಾಗೂ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಮಾತನಾಡಿದ ಅವರು, ಈ ಬಿಕ್ಕಟ್ಟಿನಿಂದಾಗಿ ಭಾರತವು ಆರ್ಥಿಕ, ರಾಷ್ಟ್ರೀಯ ಭದ್ರತೆ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದೆ. ಬಿಕ್ಕಟ್ಟಿನ ಈ ಸೂಕ್ಷ್ಮ ಸಂದರ್ಭದಲ್ಲಿ ಸಂಸತ್ತು ಜಗತ್ತಿಗೆ ಬಲವಾದ ಮತ್ತು ಒಗ್ಗಟ್ಟಿನ ಸಂದೇಶವನ್ನು ರವಾನಿಸಬೇಕು ಎಂದು ಅವರು ಕರೆ ನೀಡಿದರು.

ಭಾರತೀಯರ ಸುರಕ್ಷತೆಗೆ ಮೊದಲ ಆದ್ಯತೆ

ಸಂಘರ್ಷ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಭಾರತೀಯನ ಭದ್ರತೆಗೆ ಸರ್ಕಾರ ಅತ್ಯುನ್ನತ ಆದ್ಯತೆ ನೀಡಿದೆ. ಖುದ್ದಾಗಿ ತಾವೇ ವಿವಿಧ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಪ್ರಧಾನಿ, ಈ ಯುದ್ಧದಲ್ಲಿ ದುರದೃಷ್ಟವಶಾತ್ ಕೆಲ ಭಾರತೀಯರು ಪ್ರಾಣ ಕಳೆದುಕೊಂಡಿದ್ದು, ಮತ್ತು ಕೆಲವರು ನಾಪತ್ತೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ರಾಯಭಾರ ಕಚೇರಿಗಳು ಹಗಲಿರುಳು ಶ್ರಮಿಸುತ್ತಿದ್ದು, ನಿರಂತರವಾಗಿ ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ ಹಾಗೂ 24/7 ಸಹಾಯವಾಣಿಯನ್ನು ತೆರೆಯಲಾಗಿದೆ. ಯುದ್ಧ ಆರಂಭವಾದಾಗಿನಿಂದ ಇರಾನ್‌ನಿಂದ 1000 ಮಂದಿ ಸೇರಿದಂತೆ ಒಟ್ಟಾರೆ ೩.೭೫ ಲಕ್ಷಕ್ಕೂ ಅಧಿಕ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಇಂಧನ ಪೂರೈಕೆ ಮತ್ತು ಪರ್ಯಾಯ ಮಾರ್ಗಗಳ ಶೋಧ

ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲ, ಅನಿಲ ಮತ್ತು ಪ್ರಮುಖ ಪೂರೈಕೆಗಳು ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕಿದೆ. ನಮ್ಮ ದೇಶದ ಶೇಕಡಾ ೬೦ರಷ್ಟು ಎಲ್‌ಪಿಜಿ (LPG) ಆಮದಾಗುತ್ತಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಸಾಗಾಣಿಕೆಯ ಅಡಚಣೆಗಳನ್ನು ಕನಿಷ್ಠಗೊಳಿಸಲು ಮತ್ತು ದೇಶೀಯ ಎಲ್‌ಪಿಜಿ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಮೋದಿ ವಿವರಿಸಿದರು. ಕಳೆದ ಹನ್ನೆರಡು ವರ್ಷಗಳಲ್ಲಿ ಇಂಧನ ಮೂಲಗಳನ್ನು ವೈವಿಧ್ಯಮಯಗೊಳಿಸಲಾಗಿದ್ದು, ಪ್ರಸ್ತುತ 41 ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ, ಕಳೆದ ಹನ್ನೊಂದು ವರ್ಷಗಳಲ್ಲಿ ದೇಶದ ಸಂಸ್ಕರಣಾ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಎಥೆನಾಲ್ ಮಿಶ್ರಣದಂತಹ ಪರ್ಯಾಯ ಇಂಧನ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ರೈಲ್ವೆ ವಿದ್ಯುದೀಕರಣದಿಂದಾಗಿ ಡೀಸೆಲ್ ಮೇಲಿನ ಅವಲಂಬನೆ ತಗ್ಗಿದ್ದು, ಇವೆಲ್ಲವೂ ಇಂದಿನ ಇಂಧನ ಭದ್ರತೆಗೆ ದಾರಿದೀಪವಾಗಿವೆ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

ಆರ್ಥಿಕತೆಯ ರಕ್ಷಣೆ ಮತ್ತು ಕೃಷಿ ವಲಯಕ್ಕೆ ಅಭಯ

ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದ್ದರೂ, ಭಾರತದ ಆರ್ಥಿಕತೆಯ ಮೇಲಿನ ದುಷ್ಪರಿಣಾಮಗಳನ್ನು ತಗ್ಗಿಸಲು ಸರ್ಕಾರ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆಮದು ಮತ್ತು ರಫ್ತು ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು ಪ್ರತಿದಿನ ಸಭೆ ಸೇರುವ ವಿಶೇಷ ಅಂತರ್-ಸಚಿವಾಲಯ ಗುಂಪನ್ನು ರಚಿಸಲಾಗಿದೆ. ಇದೇ ವೇಳೆ, ಕೃಷಿ ವಲಯದ ಮೇಲೆ ಯುದ್ಧದ ಪ್ರಭಾವದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ ಅವರು, ದೇಶದ ಉಗ್ರಾಣಗಳು ಭರ್ತಿಯಾಗಿದ್ದು, ಸಾಕಷ್ಟು ದವಸ ಧಾನ್ಯಗಳ ಸಂಗ್ರಹವಿದೆ. ಯಾವುದೇ ಕಾರಣಕ್ಕೂ ರೈತರ ಮೇಲೆ ಯುದ್ಧದ ಆರ್ಥಿಕ ಒತ್ತಡ ಬೀಳಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

ರಾಜತಾಂತ್ರಿಕ ಪರಿಹಾರ ಮತ್ತು ಭದ್ರತಾ ಕಟ್ಟೆಚ್ಚರ

ಭಾರತದ ರಾಜತಾಂತ್ರಿಕ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಯುದ್ಧದ ಆರಂಭದಿಂದಲೂ ಎಲ್ಲ ದೇಶಗಳಿಗೂ ಶಾಂತಿಯುತ ಪರಿಹಾರದತ್ತ ಸಾಗಲು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಯಾವುದೇ ಕಾರಣಕ್ಕೂ ದಾಳಿ ಮಾಡದಿರಲು ಭಾರತ ಕಳಕಳಿಯ ಮನವಿ ಮಾಡುತ್ತಲೇ ಬಂದಿದೆ. ಸಂವಾದ ಮತ್ತು ರಾಜತಾಂತ್ರಿಕತೆ ಮಾತ್ರ ಈ ಬಿಕ್ಕಟ್ಟಿಗೆ ಏಕೈಕ ಪರಿಹಾರವಾಗಿದೆ ಎಂದು ಮೋದಿ ಪುನರುಚ್ಚರಿಸಿದರು. ದೇಶದ ಕರಾವಳಿ ಭದ್ರತೆ, ಗಡಿ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ಸೈಬರ್ ಭದ್ರತೆ ಸೇರಿದಂತೆ ಆಯಕಟ್ಟಿನ ನೆಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೋವಿಡ್-೧೯ ಮಹಾಮಾರಿಯ ಸಮಯದಲ್ಲಿ ಇಡೀ ದೇಶ ಹೇಗೆ ಒಗ್ಗಟ್ಟಿನಿಂದ ಹೋರಾಡಿತೋ, ಅದೇ ರೀತಿ ಈ ಬಿಕ್ಕಟ್ಟನ್ನೂ ಎದುರಿಸಬೇಕು. ಪರಿಸ್ಥಿತಿಯ ಲಾಭ ಪಡೆದು ಕಾಳಸಂತೆ (ಬ್ಲ್ಯಾಕ್ ಮಾರ್ಕೆಟ್) ಮೂಲಕ ತೊಂದರೆ ಸೃಷ್ಟಿಸಲು ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಎಚ್ಚರಿಕೆ ನೀಡಿದರು.

Read More
Next Story