
ಮೊಬೈಲ್ ಗೇಮ್ ನೆಪದಲ್ಲಿ ಮಕ್ಕಳನ್ನು 'ಸ್ಪೈ'ಗಳನ್ನಾಗಿ ಮಾಡ್ತಿದೆ ಪಾಕಿಸ್ತಾನ!
ಪಠಾಣ್‌ಕೋಟ್ ಪೊಲೀಸರು ಪಾಕಿಸ್ತಾನದ ISI ಪರ ಬೇಹುಗಾರಿಕೆ ನಡೆಸುತ್ತಿದ್ದ 15 ವರ್ಷದ ಬಾಲಕನನ್ನು ಬಂಧಿಸಿದ್ದು, ಭಾರತದಾದ್ಯಂತ 37 ಅಪ್ರಾಪ್ತರ ಸ್ಪೈ ಜಾಲ ಪತ್ತೆಯಾಗಿದೆ.
ಭಾರತದಲ್ಲಿ ವೈಟ್ ಕಾಲರ್ ಭಯೋತ್ಪಾದನೆಯ ನಂತರ, ಈಗ ಹದಿಹರೆಯದವರನ್ನು ಬಳಸಿಕೊಂಡು ಬೇಹುಗಾರಿಕೆ ನಡೆಸುವ ಆತಂಕಕಾರಿ ಜಾಲವೊಂದನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಹರಿಬಿಟ್ಟಿದೆ. ಸುಮಾರು 37 ಮಂದಿ ಅಪ್ರಾಪ್ತರು ಈಗ ಭಾರತೀಯ ಭದ್ರತಾ ಏಜೆನ್ಸಿಗಳ ಕಣ್ಗಾವಲಿನಲ್ಲಿರುವುದು ಬಯಲಾಗಿದೆ.
ಘಟನೆಯ ಹಿನ್ನೆಲೆ ಮತ್ತು ತನಿಖೆ
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಇತ್ತೀಚೆಗೆ 15 ವರ್ಷದ ಬಾಲಕನೊಬ್ಬನನ್ನು ಬಂಧಿಸಿದಾಗ ಈ ಬೃಹತ್ ಜಾಲ ಬಯಲಿಗೆ ಬಂದಿದೆ. ಈ ಬಾಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿತ್ತು. ಆನ್‌ಲೈನ್ ಗೇಮಿಂಗ್ ಮೂಲಕ ಮಕ್ಕಳನ್ನು ಬ್ರೈನ್ ವಾಶ್ ಮಾಡಿ ಭಾರತದ ವಿರುದ್ಧ ಬೇಹುಗಾರಿಕೆ ಮಾಡಲು ಬಳಸಿಕೊಳ್ಳುತ್ತಿದೆ.
ಆತಂಕಕಾರಿ ಅಂಶಗಳು
ಕಣ್ಗಾವಲಿನಲ್ಲಿರುವವರು: ಒಟ್ಟು 37 ಅಪ್ರಾಪ್ತರಲ್ಲಿ 12 ಮಂದಿ ಪಂಜಾಬ್ ಮತ್ತು ಹರಿಯಾಣದವರಾದರೆ, 25 ಮಂದಿ ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ. ಇವರೆಲ್ಲರ ವಯಸ್ಸು 14 ರಿಂದ 17 ವರ್ಷಗಳ ನಡುವೆ ಇದೆ.
ಫೋನ್ ಕ್ಲೋನಿಂಗ್ ತಂತ್ರ: ಪಠಾಣ್‌ಕೋಟ್ ಎಸ್‌ಎಸ್‌ಪಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ಪ್ರಕಾರ, ಬಾಲಕನಿಗೆ ಒಂದು 'ಮಾಲಿಶಿಯಸ್ ಲಿಂಕ್' ಕಳುಹಿಸಿ ಅವನ ಫೋನ್ ಅನ್ನು ಕ್ಲೋನ್ ಮಾಡಲಾಗಿತ್ತು. ಇದರಿಂದ ಪಾಕಿಸ್ತಾನದ ಹ್ಯಾಂಡ್ಲರ್‌ಗಳು ಬಾಲಕನ ಫೋನ್ ಚಟುವಟಿಕೆಗಳನ್ನು ಲೈವ್ ಆಗಿ ವೀಕ್ಷಿಸುತ್ತಿದ್ದರು.
ಮಕ್ಕಳ ಬ್ರೈನ್‌ವಾಶ್?
ಈ ಮಕ್ಕಳಿಗೆ ಬ್ರೈನ್ ವಾಶ್ ಮಾಡಿ, ಭಾರತೀಯ ಭದ್ರತಾ ಪಡೆಗಳ ಕ್ಯಾಂಪ್‌ಗಳ ವೀಡಿಯೊ ಚಿತ್ರೀಕರಣ, ಸೇನಾ ಕಾನ್ವಾಯ್‌ಗಳ ಸಂಚಾರದ ಮಾಹಿತಿ ನೀಡುವುದು ಮತ್ತು ಉಗ್ರ ಸಂಘಟನೆಗಳಿಗೆ ಲಾಜಿಸ್ಟಿಕ್ ಸಹಾಯ ಮಾಡುವಂತೆ ಸೂಚಿಸಲಾಗುತ್ತಿತ್ತು.
ಪೋಷಕರಿಗೆ SSP ಎಚ್ಚರಿಕೆ
ಬಂಧಿತ ಬಾಲಕ ತನ್ನ ತಾಯಿಗೆ ತಿಳಿಯದಂತೆ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಈ ಅಕ್ರಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಹೀಗಾಗಿ, ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು ಎಂದು ಎಸ್‌ಎಸ್‌ಪಿ ಧಿಲ್ಲೋನ್ ಎಚ್ಚರಿಸಿದ್ದಾರೆ. ಸೈಬರ್ ಲೋಕದ ಮೂಲಕ ಅಪ್ರಾಪ್ತರನ್ನು ಈ ರೀತಿ ಬಲೆಗೆ ಬೀಳಿಸುತ್ತಿರುವುದು ದೇಶದ ಭದ್ರತೆಗೆ ಹೊಸ ಸವಾಲಾಗಿದೆ.

