ಒಡಿಶಾ ಕರಾವಳಿಯಲ್ಲಿಹಡಗು ಮುಳುಗಡೆ; ಇಬ್ಬರ ರಕ್ಷಣೆ, 22 ಸಿಬ್ಬಂದಿಗಾಗಿ ಶೋಧ
x

ಒಡಿಶಾ ಕರಾವಳಿಯಲ್ಲಿಹಡಗು ಮುಳುಗಡೆ; ಇಬ್ಬರ ರಕ್ಷಣೆ, 22 ಸಿಬ್ಬಂದಿಗಾಗಿ ಶೋಧ

ಹಡಗು ಪಾರದೀಪ್ ಬಂದರಿನಿಂದ ಹೊರಟು ಸಿಂಗಪುರದತ್ತ ಪ್ರಯಾಣಿಸುತ್ತಿತ್ತು. ಆದರೆ, ಸಮುದ್ರ ಮಧ್ಯೆ ಹಡಗಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದೆ.


Click the Play button to hear this message in audio format

ಬಂಗಾಳ ಕೊಲ್ಲಿಯಲ್ಲಿ ಒಡಿಶಾದ ಪಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲು ದೂರದಲ್ಲಿ ಪನಾಮಾ ಧ್ವಜ ಹೊಂದಿದ್ದ ಬೃಹತ್ ಸರಕು ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 24 ಸಿಬ್ಬಂದಿಗಳ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದ 22 ಮಂದಿಗಾಗಿ ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಮುಳುಗಿದ ಹಡಗನ್ನು ಎಂವಿ ಓಷನ್ ವಿನ್ನರ್ ಎಂದು ಗುರುತಿಸಲಾಗಿದೆ. ಹಡಗು ಒಡಿಶಾದಿಂದ ಕಬ್ಬಿಣದ ಅದಿರನ್ನು ತುಂಬಿಕೊಂಡು ಸಿಂಗಾಪುರಕ್ಕೆ ತೆರಳುತ್ತಿತ್ತು ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ.

ರಕ್ಷಣೆಗೆ ಮನವಿ

ಶನಿವಾರ ಬೆಳಗ್ಗೆ ಹಡಗಿನೊಂದಿಗೆ ಸಂಪರ್ಕ ಕಡಿತಗೊಂಡಿರುವ ಕುರಿತು ಸಂಬಂಧಿತ ಸಂಸ್ಥೆಯಿಂದ ಭಾರತೀಯ ಕರಾವಳಿ ಕಾವಲು ಪಡೆಯ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಮಾಹಿತಿ ಬಂದಿತ್ತು. ಬೆಳಗ್ಗೆ 11.48ರ ಸುಮಾರಿಗೆ ಈ ಮಾಹಿತಿ ಸ್ವೀಕರಿಸಿದ ಅಧಿಕಾರಿಗಳು ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಹಡಗು ಪಾರದೀಪ್ ಬಂದರಿನಿಂದ ಹೊರಟು ಸಿಂಗಪುರದತ್ತ ಪ್ರಯಾಣಿಸುತ್ತಿತ್ತು. ಆದರೆ, ಸಮುದ್ರ ಮಧ್ಯೆ ಹಡಗಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದೆ.

ಇಬ್ಬರ ರಕ್ಷಣೆ

ಘಟನೆಯ ಮಾಹಿತಿ ಬಂದ ಕೂಡಲೇ ಹಡಗಿನ ಸಮೀಪದಲ್ಲಿದ್ದ ವಾಣಿಜ್ಯ ಹಡಗು ಎಂಟಿ ಐಸೋಪೋಸ್ ಅನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಯಿತು. ಸಮುದ್ರದಲ್ಲಿ ಹಡಗು ಅಥವಾ ಲೈಫ್​ ಬೋಟ್​​ಗಳನ್ನು ಪತ್ತೆಹಚ್ಚುವಂತೆ ಸೂಚನೆ ನೀಡಲಾಗಿದೆ.

ರಾತ್ರಿ ಸುಮಾರು 8 ಗಂಟೆ ವೇಳೆಗೆ ಎರಡು ಲೈಫ್​ ಬೋಟ್​​ಗಳಲ್ಲಿ ಜೀವ ಉಳಿಸಿಕೊಂಡಿದ್ದ ಇಬ್ಬರು ಸಿಬ್ಬಂದಿಯನ್ನು ಎಂಟಿ ಐಸೋಪೋಸ್ ರಕ್ಷಿಸಿದೆ. ರಕ್ಷಿಸಲ್ಪಟ್ಟವರ ಆರೋಗ್ಯ ಸ್ಥಿತಿಯ ಕುರಿತು ತಕ್ಷಣದ ಮಾಹಿತಿ ಲಭ್ಯವಾಗಿಲ್ಲ.

ಬಾಂಗ್ಲಾದೇಶದ ಸಿಬ್ಬಂದಿ

ಎಂವಿ ಓಷನ್ ವಿನ್ನರ್ ಹಡಗಿನಲ್ಲಿ ಒಟ್ಟು 24 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ 20 ಮಂದಿ ಚೀನಾ ಪ್ರಜೆಗಳು, ಮೂವರು ಮ್ಯಾನ್ಮಾರ್ ಪ್ರಜೆಗಳು ಹಾಗೂ ಒಬ್ಬರು ಬಾಂಗ್ಲಾದೇಶದ ಪ್ರಜೆಗಳು.

ಇಬ್ಬರು ಸಿಬ್ಬಂದಿ ಸುರಕ್ಷಿತವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಉಳಿದ 22 ಮಂದಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಸಮುದ್ರದಲ್ಲಿ ತೇಲುತ್ತಿರುವ ಜೀವದೋಣಿಗಳು ಹಾಗೂ ಇತರ ಸುಳಿವುಗಳಿಗಾಗಿ ವ್ಯಾಪಕ ಹುಡುಕಾಟ ನಡೆಯುತ್ತಿದೆ.

ನೌಕಾಪಡೆಯ ಜಂಟಿ ಕಾರ್ಯಾಚರಣೆ

ಶೋಧ ಕಾರ್ಯಾಚರಣೆಗೆ ಭಾರತೀಯ ಕರಾವಳಿ ಕಾವಲು ಪಡೆಯ ವರದ್ ಮತ್ತು ಅನ್ಮೋಲ್ ಹಡಗುಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ನೆರವಿಗಾಗಿ ವಿಜಿತ್ ಹಡಗನ್ನು ಶ್ರೀ ವಿಜಯಪುರಂನಿಂದ ಕಾರ್ಯಾಚರಣಾ ಪ್ರದೇಶಕ್ಕೆ ಕಳುಹಿಸಲಾಗಿದೆ. ಭಾರತೀಯ ನೌಕಾಪಡೆಯೂ ಕಾರ್ಯಾಚರಣೆಯಲ್ಲಿ ಸಹಕಾರ ನೀಡುತ್ತಿದ್ದು, ಘಟನಾ ಸ್ಥಳದ ಸುತ್ತಮುತ್ತ ಸಂಚರಿಸುತ್ತಿರುವ ಇತರ ವಾಣಿಜ್ಯ ಹಡಗುಗಳೊಂದಿಗೂ ಸಮನ್ವಯ ಸಾಧಿಸಲಾಗುತ್ತಿದೆ.

ಹಡಗು ಮುಳುಗಲು ಕಾರಣ ಇನ್ನೂ ತಿಳಿದಿಲ್ಲ

ಹಡಗು ಯಾವ ಕಾರಣದಿಂದ ಮುಳುಗಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಡಗಿನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತೇ, ಪ್ರತಿಕೂಲ ಹವಾಮಾನ ಕಾರಣವಾಗಿತ್ತೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಸದ್ಯ ರಕ್ಷಣಾ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದ್ದು, ನಾಪತ್ತೆಯಾಗಿರುವ 22 ಸಿಬ್ಬಂದಿಯನ್ನು ಜೀವಂತವಾಗಿ ಪತ್ತೆಹಚ್ಚಲು ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಪ್ರಯತ್ನ ಮುಂದುವರಿಸಿವೆ.

Read More
Next Story